*ವಿಶೇಷ ಮಕ್ಕಳ ರಾಜ್ಯ ಮಟ್ಟದ ಕ್ರೀಡಾಕೂಟ; ವಿಜೇತರನ್ನು ಸನ್ಮಾನಿಸಿದ ಶಶಿಕಲಾ ಜೊಲ್ಲೆ*
ಪ್ರಗತಿವಾಹಿನಿ ಸುದ್ದಿ: “ವಿಶೇಷ ಚೇತನ ಮಕ್ಕಳನ್ನು ಕೆಲವೊಂದು ಶ್ರೀಮಂತ ಮನೆಯವರು ಅವರನ್ನು ಸಮಾಜಕ್ಕೆ ಪರಿಚಯಿಸುವ ಕೆಲಸವನ್ನೂ ಕೂಡ ಮಾಡದಿರುದನ್ನು ನಾವು ನೋಡಿದ್ದೇವೆ. ನಾನೊಬ್ಬ ವಿಶೇಷ ಮಗುವಿನ ತಾಯಿಯಾಗಿ ಇಂತಹ ಮಕ್ಕಳಿಗೆ ವೇದಿಕೆಯನ್ನು ಕಲ್ಪಿಸಿಕೊಡಬೇಕೆಂಬ ಉದ್ದೇಶವನ್ನು ಹೊಂದಿದ್ದಾಗಿ ಭಾರತ ವಿಶೇಷ ಓಲಂಪಿಕ್ಸ್ ಕರ್ನಾಟಕದ ರಾಜ್ಯಾಧ್ಯಕ್ಷೆ, ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.
ತಾಲ್ಲೂಕಿನ ಯಕ್ಸಂಬಾ ಪಟ್ಟಣದ ಜೊಲ್ಲೆ ಸಮೂಹದ ನಣದಿ ಕ್ಯಾಂಪಸ್ ನಲ್ಲಿ ಹಮ್ಮಿಕೊಂಡ ಮಾನಸಿಕ ಭಿನ್ನ-ಸಾಮರ್ಥ್ಯದ ಮಕ್ಕಳ ರಾಜ್ಯ ಮಟ್ಟದ ಕ್ರೀಡಾ ಆಯ್ಕೆ ಶಿಬಿರದಲ್ಲಿ ವಿಜೇತರಾದ ಮಕ್ಕಳು ಹಾಗೂ ತರಬೇತುದಾರಿಗೆ ಸನ್ಮಾನಿಸಿ ಮಾತನಾಡಿದ ಅವರು, “ಸಮಾಜವು ವಿಶೇಷ ಮಕ್ಕಳನ್ನು ನೋಡುವ ದೃಷ್ಠಿಕೋನವೇ ಬೇರೆಯಾಗಿದೆ. ಅದನ್ನು ತೊಲಗಿಸಿ, ಅವರಿಗೂ ಕೂಡ ಎಲ್ಲರಂತೆ ಕ್ರೀಡೆಯಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಿಕೊಡುವುದಕ್ಕಾಗಿಯೇ ವಿಶೇಷ ಮಕ್ಕಳಿಗಾಗಿ ರಾಜ್ಯ ಮಟ್ಟದ ಕ್ರೀಡಾಕೂಟ ಆಯೋಜನೆ ಮಾಡಿ, ಇದರಲ್ಲಿ ಆಯ್ಕೆಯಾದ ಮಕ್ಕಳು ದೇಶದ ವಿವಿಧ ರಾಜ್ಯಗಳಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಭಾಗಹಿಸಲಿದ್ದಾರೆ ಎಂದು ಹೆಮ್ಮೆ ಪಟ್ಟರು.
ಬೌದ್ಧಿಕ ನ್ಯೂನ್ಯತೆಯ ಅನುಭವಿ ಶಾಂತಲಾ ಎಸ್ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಾ, ” ಕರ್ನಾಟಕ ರಾಜ್ಯದಲ್ಲಿ ಭಾರತ ವಿಶೇಷ ಓಲಂಪಿಕ್ಸ್ ನ ಕರ್ನಾಟಕ ರಾಜ್ಯದ ಅಧ್ಯಕ್ಷರಾಗಿ ಶಾಸಕಿ ಶಶಿಕಲಾ ಜೊಲ್ಲೆ ಅವರು ಆಯ್ಕೆಯಾದಾಗಿನಿಂತ ಹೆಚ್ಚಿನ ಪ್ರಮಾಣದಲ್ಲಿ ವಿಶೇಷ ಮಕ್ಕಳ ಕ್ರೀಡಾಕೂಟಗಳನ್ನು ಆಯೋಜನೆ ಮಾಡುತ್ತಿದ್ದು, ವಿಶೇಷ ಮಕ್ಕಳ ಶಾಲೆಯ ಶಿಕ್ಷಕರಿಗೆ ಈ ಕುರಿತು ತರಬೇತಿ ನೀಡಿ 2027ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ವಿಶೇಷ ಮಕ್ಕಳ ಓಲಂಪಿಕ್ ನಲ್ಲಿ ಕರ್ನಾಟಕ ರಾಜ್ಯದಿಂದ ಹೆಚ್ಚಿನ ಮಕ್ಕಳು ಭಾಗವಹಿಸುವ ಗುರಿಯನ್ನು ಹೊಂದಲಾಗಿದೆ”ಎಂದರು.
ಇದಕ್ಕೂ ಮೊದಲು ಭಾರತ ವಿಶೇಷ ಓಲಂಪಿಕ್ ಕರ್ನಾಟಕದ ಪ್ರಾದೇಶಿಕ ನಿರ್ದೇಶಕ ಅಮರೇಂದರ್ ಮಾತನಾಡಿ, ” ವಿಶೇಷ ಮಕ್ಕಳಲ್ಲಿ ವಿಶೇಷವಾದ ಶಕ್ತಿ ಅಡಗಿದೆ. ಅದನ್ನು ಹೊರ ತರುವ ಕೆಲಸವನ್ನು ಕ್ರೀಡಾ ಶಿಕ್ಷಕರು ಮಾಡುತ್ತಿದ್ದಾರೆ. ಕರ್ನಾಟಕದಿಂದ ರಾಷ್ಟ್ರಮಟ್ಟಕ್ಕೆ, ರಾಷ್ಟ್ರಮಟ್ಟದಿಂದ ವಿಶೇಷ ಓಲಂಪಿಕ್ ನಲ್ಲಿ ಭಾಗವಹಿಸುವವರ ಸಂಖ್ಯೆ ಹೆಚ್ಚಾಗುವಂತೆ ತರಬೇತಿ ಪಡೆದ ಶಿಕ್ಷಕರು, ಪಾಲಕರು ಪ್ರಯತ್ನಿಸಬೇಕೆಂದರು.
ವಿಶೇಷ ಒಲಂಪಿಕ್ಸ್ ಭಾರತ-ಕರ್ನಾಟಕ, ಯಕ್ಸಂಬಾದ ಜೊಲ್ಲೆ ಶಿಕ್ಷಣ ಸಂಸ್ಥೆ ಹಾಗೂ ಆಶಾಜ್ಯೋತಿ ಬುದ್ದಿಮಾಂದ್ಯ ಮಕ್ಕಳ ಉಚಿತ ವಸತಿ ಶಾಲೆ ಸಹಯೋಗದಲ್ಲಿ ಫೆ.3 ಮತ್ತು 4 ರಂದು ಆಯೋಜನೆ ಮಾಡಲಾಗಿದ್ದ ರಾಜ್ಯ ಮಟ್ಟದ ವಿಶೇಷ ಮಕ್ಕಳ ಕ್ರೀಡಾಕೂಟದಲ್ಲಿ ಹಾಸನ, ಮಂಡ್ಯ, ಮೈಸೂರು, ಬೆಳಗಾವಿ, ಬೆಂಗಳೂರು, ದಾವಣಗೆರೆ, ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ 182ಕ್ಕೂ ಹೆಚ್ಚು ವಿಶೇಷ ಮಕ್ಕಳು ಭಾಗವಹಿಸಿದ್ದರು. ಸೈಕ್ಲಿಂಗ್, ವಾಲಿಬಾಲ್, ಫುಟಬಾಲ್, ಸ್ಕೇಟಿಂಗ್, ಜೂಡೋ, ಗಾಲ್ಫ್ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ವಿಜೇತರಾದ ಮಕ್ಕಳಿಗೆ ಹಾಗೂ ತರಬೇತುದಾರರಿಗೆ ಪ್ರಮಾಣ ಪತ್ರ, ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ವಿಶೇಷ ಓಲಂಪಿಕ್ ಭಾರತ – ಕರ್ನಾಟಕದ ಖಜಾಂಚಿ ಡಿ ಸಿ ಆನಂದ, ಆಶಾಜ್ಯೋತಿ ವಿಶೇಷ ಮಕ್ಕಳ ವಸತಿ ಶಾಲೆಯ ಅಧ್ಯಕ್ಷ ಜ್ಯೋತಿಪ್ರಸಾದ ಜೊಲ್ಲೆ, ರಾಜು ಹಿರೇಮಠ ಮುಂತಾದವರು ಉಪಸ್ಥಿತರಿದ್ದರು. ಆನಂದ ಸ್ವಾಗತಿಸಿದರು. ಗೋವಿಂದ ಪೈ ನಿರೂಪಿಸಿ, ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ