*ಖಾನಾಪುರದಲ್ಲಿ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ: ಪಿಯು ಉಪನಿರ್ದೇಶಕ ಎಂಎಂ ಕಾಂಬಳೆ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪಟ್ಟಣದ ತೋಪಿನಕಟ್ಟಿ ಶ್ರೀ ಮಹಾಲಕ್ಷ್ಮಿ ಗ್ರೂಪ್ ಎಜುಕೇಶನ್ ಸೊಸೈಟಿಯ ಶಾಂತಿನಿಕೇತನ ಪಿ.ಯು ಕಾಲೇಜಿನ ಆವರಣದಲ್ಲಿ ಮಂಗಳವಾರ ಅ.15 ಮತ್ತು ಬುಧವಾರ ಅ.16ರಂದು ಎರಡು ದಿನಗಳ ಕಾಲ ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂಎಂ ಕಾಂಬಳೆ ಮಾಹಿತಿ ನೀಡಿದರು.
ಶಾಂತಿನಿಕೇತನ ಕಾಲೇಜಿನಲ್ಲಿ ಭಾನುವಾರ ಪಂದ್ಯಾವಳಿಯ ಪೂರ್ವಸಿದ್ಧತೆ ಪರಿಶೀಲಿಸಿದ ಅವರು ಬಳಿಕ ಸಭಾಗೃಹದಲ್ಲಿ ಜರುಗಿದ ಸಭೆ ಉದ್ದೇಶಿಸಿ ಮಾತನಾಡಿದರು.
“ಜಿಲ್ಲಾಮಟ್ಟದ ಪಂದ್ಯಾವಳಿಗಳಲ್ಲಿ ಜಯಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿರುವ ರಾಜ್ಯದ 32 ಜಿಲ್ಲೆಗಳ 940ಕ್ಕೂ ಹೆಚ್ಚು ಕುಸ್ತಿಪಟುಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ. ಜಿಲ್ಲಾವಾರು ತಂಡಗಳು ಅ.14ರ ಸೋಮವಾರ ಸಂಜೆ ಶಾಂತಿನಿಕೇತನ ಕಾಲೇಜಿನಲ್ಲಿ ವರದಿ ಮಾಡಿಕೊಳ್ಳಲಿವೆ. ಅ.15ರಂದು ಮುಂಜಾನೆ 10ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಪಂದ್ಯಾವಳಿಯನ್ನು ಉದ್ಘಾಟಿಸಲಿದ್ದಾರೆ.
ಸಚಿವರಾದ ಲಕ್ಷ್ಮಿ ಹೆಬ್ಬಾಳಕರ, ಮಧು ಬಂಗಾರಪ್ಪ ಸೇರಿದಂತೆ ಜಿಲ್ಲೆಯ ಸಂಸದರು, ಶಾಸಕರು, ಜನಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ. ಖಾನಾಪುರ ಶಾಸಕ ವಿಠ್ಠಲ ಹಲಗೇಕರ ಅಧ್ಯಕ್ಷತೆ ವಹಿಸಲಿದ್ದಾರೆ. ಪಂದ್ಯಾವಳಿಗಳು ಪುರುಷ ಮತ್ತು ಮಹಿಳೆಯರ ಫ್ರೀ ಸ್ಟೈಲ್, ಪುರುಷರ ಗ್ರೀಸೋ ರೋಮನ್ ಸ್ಟೈಲ್ ಎಂಬ ಮೂರು ಪ್ರಕಾರಗಳಲ್ಲಿ ನಡೆಯಲಿದ್ದು, ಒಟ್ಟು 10 ಪ್ರಕಾರದ ತೂಕದ ಕುಸ್ತಿಪಟುಗಳ ನಡುವೆ ಸೆಣಸಾಟ ನಡೆಯಲಿದೆ” ಎಂದು ವಿವರಿಸಿದರು.
“ಪಂದ್ಯಾವಳಿಯಲ್ಲಿ ಭಾಗಹಿಸಲು ರಾಜ್ಯದ ವಿವಿಧೆಡೆಗಳಿಂದ ಆಗಮಿಸಲಿರುವ ಕುಸ್ತಿಪಟುಗಳಿಗೆ ಶಾಂತಿನಿಕೇತನ ಕಾಲೇಜಿನಲ್ಲಿ ತಂಗಲು ಅಗತ್ಯ ವ್ಯವಸ್ಥೆ ಮಾಡಲಾಗಿದೆ. ಬಸ್ ನಿಲ್ದಾಣ ಮತ್ತು ರೈಲು ನಿಲ್ದಾಣದಿಂದ ಶಾಂತಿನಿಕೇತನ ಶಾಲೆಗೆ ಬರಲು ವಾಹನ ಮತ್ತು ಊಟೋಪಚಾರದ ವ್ಯವಸ್ಥೆ ಕಲ್ಪಿಸಲಾಗಿದೆ” ಎಂದು ಅವರು ಮಾಹಿತಿ ನೀಡಿದರು.
ಶಾಸಕ ವಿಠ್ಠಲ ಹಲಗೇಕರ ಮಾತನಾಡಿ, “ಕುಸ್ತಿ ಪಂದ್ಯಾವಳಿ ಖಾನಾಪುರ ತಾಲ್ಲೂಕಿನ ಗ್ರಾಮೀಣ ಕ್ರೀಡೆಯಾಗಿದ್ದು, ಈ ಕ್ರೀಡೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈಗಾಗಲೇ 2016ರಲ್ಲಿ ಒಂದು ಬಾರಿ ಶಾಂತಿನಿಕೇತನ ಪಿಯು ಕಾಲೇಜಿನ ವತಿಯಿಂದ ನಮ್ಮಲ್ಲಿ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿತ್ತು.
ಈ ಬಾರಿಯೂ ಮತ್ತೊಮ್ಮೆ ನಮ್ಮ ಕಾಲೇಜಿನಲ್ಲಿ ರಾಜ್ಯಮಟ್ಟದ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಶಾಂತಿನಿಕೇತನ ಕಾಲೇಜು ಹಾಗೂ ತೋಪಿನಕಟ್ಟಿ ಶ್ರೀ ಮಹಾಲಕ್ಷ್ಮಿ ಗ್ರೂಪ್ ಎಜುಕೇಶನ್ ಸೊಸೈಟಿ ಈ ಪಂದ್ಯಾವಳಿಯ ಪ್ರಾಯೋಜಕತ್ವವನ್ನು ವಹಿಸಿಕೊಂಡಿದೆ. ಜಿಲ್ಲೆಯ ಕುಸ್ತಿಪ್ರಿಯರು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಮಂಗಳವಾರ ಮತ್ತು ಬುಧವಾರ ಶಾಂತಿನಿಕೇತನ ಕಾಲೇಜಿಗೆ ಭೇಟಿ ನೀಡಿ ಕುಸ್ತಿ ಪಂದ್ಯಾವಳಿ ವೀಕ್ಷಿಸಿ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಬೇಕು” ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ತೋಪಿನಕಟ್ಟಿ ಶ್ರೀ ಮಹಾಲಕ್ಷ್ಮಿ ಗ್ರೂಪ್ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ರಾಜೇಂದ್ರ ಪಾಟೀಲ, ಕುಸ್ತಿ ಕೋಚ್ ಹಣಮಂತ ಪಾಟೀಲ, ರಾಣಿ ಚನ್ನಮ್ಮ ವಿವಿಯ ನಿವೃತ್ತ ನಿರ್ದೇಶಕ ಜಿ.ಎನ್ ಪಾಟೀಲ, ಪಿಯು ಇಲಾಖೆಯ ಸಮನ್ವಯ ಅಧಿಕಾರಿ ಪ್ರಭು ಶಿವನಾಯ್ಕರ, ಹಿರಿಯ ವಕೀಲ ಸುರೇಶ ಭೋಸಲೆ, ತೋಪಿನಕಟ್ಟಿ ಶ್ರೀ ಮಹಾಲಕ್ಷ್ಮಿ ಗ್ರೂಪ್ ಎಜುಕೇಶನ್ ಸೊಸೈಟಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮನೀಷಾ ಹಲಗೇಕರ ಮತ್ತಿತರರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ