ಪ್ರಗತಿವಾಹಿನಿ ಸುದ್ದಿ; ಮಂಗಳೂರು: ಬೆಂಗಳೂರಿನ ಪ್ರಮುಖ ಸ್ಥಳದಲ್ಲಿ ಅನಾಮಧೇಯ ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನೊಳಗೊಂಡ ಸ್ಮಾರಕವನ್ನು ನಿರ್ಮಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.
ಅವರು ಇಂದು ಮಂಗಳೂರಿನ ಬಾವುಟಗುಡ್ಡೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಅವರ ಪ್ರತಿಮೆಯನ್ನು ಅನಾವರಣಗೊಳಿಸಿ ಮಾತನಾಡಿದರು.
ದೇಶವಿದೇಶಗಳಲ್ಲಿ ಇಂತಹ ಸ್ಮಾರಕಗಳಿಗೆ ಬಹಳ ಮಹತ್ವವಿದೆ. ಇಂತಹ ಸ್ಮಾರಕಗಳು ನಮ್ಮ ಇತಿಹಾಸ, ಸಂಸ್ಕೃತಿ-ಪರಂಪರೆಗಳನ್ನು ಬಿಂಬಿಸುವ ಜೊತೆಗೆ ನಮ್ಮ ಅಸ್ಮಿತೆಯನ್ನೂ ಬಿಂಬಿಸುತ್ತದೆ. ವಿವಿಧತೆಯಲ್ಲಿ ಏಕತೆಯನ್ನು ಕಾಣುವ ಭಾರತೀಯತೆ, ಇದಕ್ಕೆ ಪೂರಕವಾದ ಸರ್ಕಾರದ ನೀತಿಗಳು ಭಾರತದ ಅಸ್ಮಿತೆಯನ್ನು ಗಟ್ಟಿಗೊಳಿಸುತ್ತದೆ. ಭಾರತದ ಸ್ವಾತಂತ್ರ್ಯಕ್ಕಾಗಿ ಜೀವತೆತ್ತ ಅನೇಕ ಅನಾಮಧೇಯ ಹೋರಾಟಗಾರರ ಬಗ್ಗೆ ನಮ್ಮ ಯುವಜನತೆಗೆ , ದೇಶವಿದೇಶಗಳಿಗೆ ಅರಿವು ಮೂಡಿಸಬೇಕು. ಜಪಾನ್ ನಲ್ಲಿ ಸುಭಾಷ್ ಚಂದ್ರ ಬೋಸ್ ಪ್ರತಿಮೆ, ಅಮೆರಿಕಾದಲ್ಲಿ ಮಹಾತ್ಮಗಾಂದಿ ಸ್ಮಾರಕ ನಮಗೆ ಸ್ಪೂರ್ತಿ ನೀಡುತ್ತಿದೆ ಎಂದರು.
ಬೆಂಗಳೂರಿನಲ್ಲಿಯೂ ಕೆದಂಬಾಡಿ ರಾಮಯ್ಯ ಗೌಡರ ಸ್ಮಾರಕ ನಿರ್ಮಾಣ:
ಕೆದಂಬಾಡಿ ರಾಮಯ್ಯ ಗೌಡರ ಸ್ಮಾರಕವನ್ನು ಬೆಂಗಳೂರಿನಲ್ಲಿಯೂ ನಿರ್ಮಿಸಲಾಗುವುದು. ಅವರ ಜೀವನ ಚರಿತ್ರೆಯನ್ನು ಪಠ್ಯಪುಸ್ತಕದಲ್ಲಿಯೂ ಅಳವಡಿಸಲಾಗುವುದು. ಮಂಗಳೂರು ಭಾಗದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಹೆಸರುಗಳನ್ನು ನಾಮಕರಣ ಮಾಡುವ ಬಗ್ಗೆ ಸೂಕ್ತ ನಿರ್ಣಯಗಳನ್ನು ಶೀಘ್ರದಲ್ಲಿ ತೆಗೆದುಕೊಳ್ಳಲಾಗುವುದು. ಲೋಕಮಾನ್ಯ ತಿಲಕರು, ಕಾಲಪಾನಿ ಶಿಕ್ಷೆ ಅನುಭವಿಸಿದ ಸಾರ್ವರ್ಕರ್ ರವರು, ಸುಭಾಷ್ ಚಂದ್ರಬೋಸ್, ಭಗತ್ ಸಿಂಗ್, ಚಂದ್ರಶೇಖರ ಆಜಾದ್ರವರ ತ್ಯಾಗಬಲಿದಾನಗಳನ್ನು ಮರೆಯಬಾರದು. ಇದನ್ನು ಮರೆಯುವವರು ನಿಜ ದೇಶಭಕ್ತರಾಗಲು ಸಾಧ್ಯವಿಲ್ಲ ಎಂದರು.
ರೈತರು ಯೋಧರಾದಾಗ ಕ್ರಾಂತಿಯಾಗುತ್ತದೆ :
ಭಾರತಕ್ಕೆ ಸ್ವಾತಂತ್ರ್ಯ ಸುಲಭವಾಗಿ ನಮಗೆ ದೊರಕಲಿಲ್ಲ. ಹಲವರು ತಮ್ಮ ಬದುಕು ಜೀವವನ್ನೇ ತ್ಯಾಗ ಮಾಡಿದ್ದಾರೆ. ಬ್ರಿಟೀಷರ ವಿರುದ್ಧ ಹೋರಾಟ ಮೊದಲು ರೈತರಿಂದ ಪ್ರಾರಂಭವಾಯಿತು.ಕೆದಂಬಾಡಿ ರಾಮಯ್ಯ ಗೌಡರು ರೈತ ಕುಟುಂಬದಲ್ಲಿ ಹುಟ್ಟಿ, ವೀರ ಯೋಧರಾಗಿ ಬ್ರಿಟೀಷರಿಗೆ ಸಿಂಹಸ್ವಪ್ನವಾಗಿದ್ದರು. ರೈತರು ಯೋಧರಾದಾಗ ಕ್ರಾಂತಿಯಾಗುತ್ತದೆ. ಕಿತ್ತೂರು ರಾಣಿ ಚೆನ್ನಮ್ಮ, ಕೆಳದಿ ಚೆನ್ನಮ್ಮ, ರಾಣಿ ಅಬ್ಬಕ್ಕ, ಝಾನ್ಸಿ ರಾಣಿ ಲಕ್ಷ್ಮೀಬಾಯಿ ಯಂತಹ ಸ್ವಾತಂತ್ರ್ಯ ಹೋರಾಟಕ್ಕೆ ಇಳಿದಾಗ ಬ್ರಿಟೀಷರಿಗೆ ತಮಗೆ ಇನ್ನು ಉಳಿಗಾಲವಿಲ್ಲ ಎಂಬ ಸತ್ಯದ ಅರಿವಾಯಿತು. ಸರ್ದಾರ್ ವಲ್ಲಭಬಾಯಿ ಪಟೇಲರ ನೇತೃತ್ವದಲ್ಲಿ ನಡೆದ ರೈತ ಸತ್ಯಾಗ್ರಹ ಬ್ರಿಟೀಷರನ್ನು ಕಂಗೆಡಿಸಿತು ಎಂದರು.
ದೇಶಭಕ್ತಿಯೊಂದೇ ಸ್ಪೂರ್ತಿ :
ದುಡಿಯುವ ವರ್ಗ ಬ್ರಿಟೀಷರ ವಿರುದ್ಧ ತಿರುಗಿಬಿದ್ದಾಗ, ಬ್ರಿಟೀಷರು ಭಾರತಕ್ಕೆ ಸ್ವಾತಂತ್ರ್ಯ ಕೊಡುವ ಚಿಂತನೆ ಪ್ರಾರಂಭೀಸಿದರು. ಅನಾಮಧೇಯ ಹೋರಾಟಗಾರರ ಸಂಖ್ಯೆ ಸಾಕಷ್ಟಿದೆ. ಇಂತಹ ಅನೇಕರ ತ್ಯಾಗಬಲಿದಾನಗಳಿಗೆ ನ್ಯಾಯ ದೊರೆತಿಲ್ಲ. ನರಗುಂದ ಬಾಬಾಸಾಹೇಬ, ಮಹಾದೇವ ಅವರು ಬೆಳಗಾವಿ , ಬಿಜಾಪುರ ಭಾಗಗಳಲ್ಲಿ ಬ್ರಿಟೀಷರಿಗೆ ಸಿಂಹಸ್ವಪ್ನವಾಗಿದ್ದರು. 12 ವರ್ಷದ ಬಾಲಕ, ನಾರಾಯಣ ಮಹಾದೇವ ಧೋನಿ, ವಂದೇ ಭಾರತ ಪಠಿಸುತ್ತಲೇ ಬ್ರಿಟೀಷರ ಗುಂಡಿಗೆ ಬಲಿಯಾಗುತ್ತಾನೆ. ಈ ಬಾಲಕನಿಗೆ ದೇಶಭಕ್ತಿಯೊಂದೇ ಸ್ಪೂರ್ತಿಯಾಗಿತ್ತು. ಇಂತಹ ಕಥೆಗಳು ನೂರಾರಿವೆ ಎಂದರು.
ನಾಡಪ್ರಭು ಕೆಂಪೇಗೌಡು ಆಧುನಿಕ ಕರ್ನಾಟಕ ನಿರ್ಮಾಣಕ್ಕೆ ಪ್ರೇರಣೆ :
ಇತ್ತೀಚೆಗೆ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಪ್ರಗತಿ ಪ್ರತಿಮೆಯನ್ನು ಲೋಕಾರ್ಪಣೆ ಮಾಡಲಾಯಿತು. ಕೆಂಪೇಗೌಡರು ಬೆಂಗಳೂರಿನ ನಿರ್ಮಾತೃಗಳಾಗಿದ್ದು, ಕೋಟೆಗಳು, ಕೆರೆಗಳು, ಮಾರುಕಟ್ಟೆ, ಆಧುನಿಕ ನಗರ ನಿರ್ಮಿಸಿದರು. ಆರ್ಥಿಕ ಬೆಳವಣಿಗೆಗೆ ಪೂರಕವಾದ ನಗರದ ಮಾದರಿಯನ್ನು ಅಭಿವೃದ್ಧಿಪಡಿಸಿದವರು. ವಿಜಯನಗರ ಸಾಮ್ರಾಜ್ಯದ ಸುವರ್ಣ ಯುಗವನ್ನು ಬೆಂಗಳೂರಿನಲ್ಲಿ ಸೃಷ್ಟಿಸಿದರು. ಆಧುನಿಕ ಕರ್ನಾಟಕ ನಿರ್ಮಾಣಕ್ಕೆ ಪ್ರೇರಣೆಯಾಗಿದ್ದಾರೆ ಎಂದರು.
ದೇಶಕ್ಕಾಗಿ ಬದುಕುವ ಸಂಕಲ್ಪ :
ದೇಶಕ್ಕಾಗಿ ಬದುಕುವುದನ್ನು ಇಂದಿನ ಯುವಜನರು ಸಂಕಲ್ಪ ಮಾಡಿದರೆ, ನಮ್ಮ ದೇಶ ಸಮೃದ್ಧವಾಗುತ್ತದೆ. ಭಾರತೀಯ ಸಂಸ್ಕೃತಿ ಪರಂಪರೆಗಳು ನಮ್ಮನ್ನು ಕಾಪಾಡುತ್ತಿವೆ. ಪ್ರಪಂಚದ ಅನೇಕ ದೇಶಗಳು ಆರ್ಥಿಕ ಹಿನ್ನಡೆ ಹಾಗೂ ಹಣದುಬ್ಬರ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ನಮ್ಮ ದೇಶ ಶೇ.6 ರಷ್ಟು ಪ್ರಗತಿಯನ್ನು ತೋರಿಸುತ್ತಿದೆ. ಭಾರತದಲ್ಲಿ ಉಳಿತಾಯ ಸಂಸ್ಕೃತಿಯಿದ್ದು, ದೇಶದ ಆರ್ಥಿಕತೆಯಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ.ತಾನು ಹುಟ್ಟಿದ ಭೂಮಿಗೆ ನಿಷ್ಠೆಯಿಂದರಬೇಕೆಂದು ಎಲ್ಲ ಧರ್ಮಗಳೂ ಭೋದಿಸುತ್ತವೆ. ಆದರೆ ಇತ್ತೀಚೆನ ದಿನಗಳಲ್ಲಿ ಇದು ಪರಿಪಾಲನೆ ಆಗದಿರುವುದು ದು:ಖದ ಸಂಗತಿ. ಭಾರತದಲ್ಲಿ ಚರಿತ್ರೆಯಿದ್ದು, ಚಾರಿತ್ರ್ಯ ಬೇಕಿದೆ ಎಂದರು.
ಸಮಾರಂಭದಲ್ಲಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಮೀನುಗಾರಿಕೆ ಮತ್ತು ಬಂದರು ಸಚಿವ ಎಸ್. ಅಂಗಾರ, ಐಟಿ, ಬಿಟಿ, ಉನ್ನತ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ, ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ಸಚಿವ ಡಿ.ವಿ. ಸದಾನಂದ ಗೌಡ, ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಯ ಶಾಸಕರು, ಜಿಲ್ಲೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ವೋಟರ್ ಐಡಿ ಗೋಲ್ ಮಾಲ್; ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು
https://pragati.taskdun.com/voter-id-scamcongress-complaintelection-commission/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ