Latest

ಕನ್ನಡ ನಾಡನ್ನು ಸಮೃದ್ದಿಯ ನಾಡನ್ನಾಗಿಸಲು ‘ಪ್ರಗತಿ ಪ್ರತಿಮೆ’ ಪ್ರೇರಣೆ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕನ್ನಡ ನಾಡನ್ನು ಸಮೃದ್ಧಿಯ ನಾಡನ್ನಾಗಿ ಮಾಡಲು ನಾಡಪ್ರಭು ಕೆಂಪೇಗೌಡರ ‘ಪ್ರಗತಿಯ ಪ್ರತಿಮೆ’ಪ್ರೇರಣೆಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಇಂದು ವಿಧಾನಸೌಧದ ಬೃಹತ್ ಮೆಟ್ಟಿಲುಗಳು ಬಳಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಭವ್ಯ ಕಂಚಿನ “ ಪ್ರಗತಿಯ ಪ್ರತಿಮೆ – (Statue of Prosperity)” ಅನಾವರಣದ ಪ್ರಯುಕ್ತ ನಾಡಿನಾದ್ಯಂತ ಪವಿತ್ರ ಮೃತ್ತಿಕೆ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಕರ್ನಾಟಕದಲ್ಲಿ ಅಭಿವೃದ್ಧಿ ನಿರಂತರವಾಗಿ ನಡೆಯಬೇಕೆಂಬ ಆಶಯದಿಂದ ಈ ಪ್ರತಿಮೆ ನಿರ್ಮಿಸಲಾಗುತ್ತಿದ್ದು, ಕರ್ನಾಟಕಕ್ಕೆ ಒಳ್ಳೆಯ ದಿನಗಳು ಬರುವ ಸೂಚನೆಯನ್ನು ನೀಡುತ್ತಿದೆ. ನವಕರ್ನಾಟಕದಿಂದ ನವಭಾರತ ನಿರ್ಮಾಣದ ಧ್ಯೇಯವನ್ನು ಸಾಧಿಸುವ ಆತ್ಮವಿಶ್ವಾಸವನ್ನು ಈ ಪ್ರಗತಿಯ ಪ್ರತಿಮೆ ನೀಡಲಿದೆ. ನವೆಂಬರ್ 11 ರಂದು ಪ್ರಧಾನಿ ಮೋದಿಯವರ ಹಸ್ತದಿಂದ ‘ಪ್ರಗತಿಯ ಪ್ರತಿಮೆ’ಅನಾವರಣಗೊಳ್ಳುತ್ತಿದ್ದು, ಈ ಕಾರ್ಯಕ್ರಮಕ್ಕೆ ದೊಡ್ಡ ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕೆಂದು ಮುಖ್ಯಮಂತ್ರಿಗಳು ವಿನಂತಿಸಿದರು.

ಅಭಿವೃದ್ಧಿ ಹಾಗೂ ಪ್ರಗತಿಯ ಸಂಕೇತ Statue of prosperity:
ನಾವು ನಮ್ಮ ಇತಿಹಾಸವನ್ನು ಮರೆತರೆ ಭವಿಷ್ಯ ಮಂಕಾಗುತ್ತದೆ. ನಾಡು ಕಟ್ಟಿದ ಪ್ರಭುವಿಗೆ ಗೌರವ ನೀಡಬೇಕಾಗಿರುವುದು ನಮ್ಮ ಕರ್ತವ್ಯ. ಬಸವಣ್ಣ, ಬುದ್ಧ, ಮಹಾವೀರರು ಸೇರಿದಂತೆ ಎಲ್ಲ ತತ್ವಜ್ಞಾನಿಗಳೆಲ್ಲರೂ ಆಡಳಿತ ನಡೆಸಿದವರೇ. ಆಧ್ಯಾತ್ಮಿಕತೆಯಿಂದ ಜನಕಲ್ಯಾಣವಾಗಬೇಕೆಂದು ಪರಿವರ್ತನೆಯಾದವರು. ಆದರೆ ಕೆಂಪೇಗೌಡರು ಜನರ ನಡುವೆಯೇ ಇದ್ದು ಜನರ ಬದುಕನ್ನು ಕಟ್ಟಿದವರು. ಆದ್ದರಿಂದ ಬೆಂಗಳೂರಿನಲ್ಲಿ ಕೆಂಪೇಗೌಡರ ಪ್ರತಿಮೆಯನ್ನು ನಿರ್ಮಿಸುವ ತೀರ್ಮಾನವನ್ನು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಕೈಗೊಂಡರು. ನಾಡಪ್ರಭು ಕೆಂಪೇಗೌಡರ ಬದುಕು ಆದರ್ಶಗಳು ಎಲ್ಲರಿಗೂ ಪ್ರೇರಣೆಯಾಗಬೇಕೆಂಬ ಉದ್ದೇಶದಿಂದ ಕರ್ನಾಟಕ ರಾಜ್ಯದ ಎಲ್ಲ ಪುಣ್ಯಭೂಮಿಗಳಿಂದ ಮೃತ್ತಿಕೆಯನ್ನು ತಂದು ಪ್ರತಿಮೆಯಲ್ಲಿ ಸೇರಿಸಲಾಗುತ್ತಿದೆ. ಕೆಂಪೇಗೌಡರ ಪ್ರೇರಣೆ ಕನ್ನಡ ನಾಡಿನ ಮಣ್ಣಿನ ಕಣಕಣದಲ್ಲಿಯೂ ಸಿಗಲಿ ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಮೇರಿಕಾದ Statue of Liberty, ಏಕತೆಯ ಸಂಕೇತವಾಗಿ Statue of Unity, ಅಭಿವೃದ್ಧಿ ಹಾಗೂ ಪ್ರಗತಿಯ ಸಂಕೇತವಾಗಿ Statue of prosperity ನಿರ್ಮಿಸಲಾಗಿದೆ ಎಂದರು.

ಪ್ರಗತಿಪರ ಚಿಂತನೆಯಿಂದ ನಾಡು ಕಟ್ಟಿದ ಕೆಂಪೇಗೌಡರು:
ಕರ್ನಾಟಕದ ಇತಿಹಾಸ ವಿಭಿನ್ನವಾಗಿದೆ. ನಮ್ಮ ಪೂರ್ವಜರು ನಾಡು ಕಟ್ಟುವ ಕೆಲಸವನ್ನು ಮಾಡಿದ್ದಾರೆ. ವಿಜಯನಗರ ಕೃಷ್ಣದೇವರಾಯರು, ಹೊಯ್ಸಳರು, ಕದಂಬರು ಮೈಸೂರಿನ ಒಡೆಯರು ಸೇರಿದಂತೆ ಎಲ್ಲರೂ ರಚನಾತ್ಮಕವಾದ ಕೆಲಸವನ್ನು ಮಾಡಿದ್ದಾರೆ. ಸಕಾರಾತ್ಮಕವಾಗಿ ನಾಡುಕಟ್ಟುವ ಮುಖಾಂತರ ಜನರ ಬದುಕನ್ನು ಕಟ್ಟುವ ಕೆಲಸವನ್ನು ಮಾಡಿದ್ದಾರೆ. ಪ್ರಗತಿಪರ ಚಿಂತನೆಯಿರುವ ಈ ಎಲ್ಲ ನಾಯಕರು ಅಂದಿನ ಕಾಲಕ್ಕೆ ಆಧುನಿಕತೆಯನ್ನು ಸ್ವೀಕರಿಸಿ ಕಾರ್ಯಗತ ಮಾಡಿದ್ದಾರೆ. ಇವರೆಲ್ಲರಲ್ಲಿ ಅಗ್ರಮಾನ್ಯರು ಕೆಂಪೇಗೌಡರು. ನಾಗರಿಕತೆ, ಸಮುದಾಯಗಳು ನದಿತೀರದಲ್ಲಿ ಬೆಳೆಯುವುದು ಸಹಜ. ಅಂದಿನ ಕೆರೆಗಳನ್ನು ಆಧಾರವಾಗಿಟ್ಟುಕೊಂಡು ಒಂದು ಸುಂದರ ನಗರವನ್ನು ಕಟ್ಟಿದ್ದಾರೆ. 3000 ಅಡಿ ಸಮುದ್ರ ಮಟ್ಟದಿಂದ ಎತ್ತರವಿರುವ ಪ್ರದೇಶ , ಏರ್ ಕಂಡೀಷನ್ಡ್ ಸಿಟಿಯಾಗಿದೆ. ಈ ಬೆಂಗಳೂರಿಗೆ ಗಡಿಗೋಪುರಗಳನ್ನು ನಿರ್ಮಿಸಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಆದಿ ಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ, ಶ್ರೀ ನಂಜಾವಧೂತ ಸ್ವಾಮೀಜಿ, ಮಾಜಿ ಮುಖ್ಯಮಂತ್ರಿಗಳಾದ ಬಿ‌.ಎಸ್. ಯಡಿಯೂರಪ್ಪ, ಡಿ.ವಿ. ಸದಾನಂದಗೌಡ, ಸಚಿವರಾದ ಆರ್. ಅಶೋಕ್, ಡಾ. ಸಿ.ಎನ್ ಅಶ್ವತ್ಥ್ ನಾರಾಯಣ, ಆರಗ ಜ್ಞಾನೇಂದ್ರ, ಡಾ‌.ಕೆ. ಸುಧಾಕರ್, ಮುನಿರತ್ನ, ಬೈರತಿ ಬಸವರಾಜ, ಎಂಟಿಬಿ ನಾಗರಾಜ, ನಾರಾಯಣಗೌಡ, ಸಂಸದರಾದ ಪಿ.ಸಿ ಮೋಹನ್, ತೇಜಸ್ವಿ ಸೂರ್ಯ, ಶಾಸಕರಾದ ಎಂ.ಕೃಷ್ಣಪ್ಪ, ವಿಧಾನಪರಿಷತ್ ಸದಸ್ಯ ವೈ.ಎ ನಾರಾಯಣಸ್ವಾಮಿ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.

ಭಾರಿ ಮಳೆ; ಕುಸಿದು ಬಿದ್ದ ಮಹಾರಾಣಿ ಕಾಲೇಜು ಗೋಡೆ

https://pragati.taskdun.com/latest/heavy-rainmysoremaharani-collage-wall-collapse/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button