ಪ್ರಗತಿವಾಹಿನಿ ಸುದ್ದಿ: ಗಣೇಶ ವಿಸರ್ಜನಾ ಮೆರವಣಿಗೆಯ ಮೇಲೆ ಅನ್ಯಕೋಮಿನ ಕೆಲವು ಕಿಡಿಗೇಡಿಗಳು ಕಲ್ಲೆಸೆತ ಹಾಗೂ ಪೆಟ್ರೋಲ್ ಬಾಂಬ್ ಎಸೆದಿರುವ ಘಟನೆ ಮಂಡ್ಯದ ನಾಗಮಂಗಲದ ಬದರಿಕೊಪ್ಪಲಿನಲ್ಲಿ ನಡೆದಿದೆ.
ಮೆರವಣಿಗೆಯು ಮೈಸೂರು ರಸ್ತೆಯ ದರ್ಗಾ ಬಳಿ ಬಂದಾಗ ಈ ದುರ್ಘಟನೆ ನಡೆದಿದ್ದು, ಈ ವೇಳೆ ಎರಡೂ ಗುಂಪುಗಳ ನಡುವೆ ಘರ್ಷಣೆಯೂ ಸಹ ಸಂಭವಿಸಿದೆ. ಪೊಲೀಸರು ಮಧ್ಯಪ್ರವೇಶಿಸಿ ಸಧ್ಯಕ್ಕೆ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.
ನಾಗಮಂಗಲ ಪಟ್ಟಣ ಸಧ್ಯಕ್ಕೆ ಉದ್ವಿಗ್ನಗೊಂಡಿದ್ದು, ಬಿಗಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದ್ದು ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ.
ಕಿಡಿಗೇಡಿಗಳು ಈ ಕೃತ್ಯ ನಡೆದ ಬಳಿಕ ರಸ್ತೆಯಲ್ಲಿ ಲಾಂಗ್ ಹಿಡಿದು ಭಯಭೀತ ವಾತಾವರಣ ಸೃಷ್ಟಿಸಿದ್ದಲ್ಲದೇ, ಕೆಲವು ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಿರುವುದಾಗಿ ವರದಿಯಾಗಿದೆ.
ಪ್ರಕರಣ ಸಂಬಂಧ 46 ಜನರನ್ನು ಬಂಧಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಖಂಡನೆ
*ಒಂದು ಸಮುದಾಯದ ಓಲೈಕೆ, ತುಷ್ಟೀಕರಣ ಇಂಥ ಘಟನೆಗಳು ನಡೆಯುತ್ತಿವೆ*
*ಸಾರ್ವಜನಿಕರು-ಪೊಲೀಸರ ಮೇಲೆ ಕಲ್ಲು, ಚಪ್ಪಲಿ ಎಸೆದು ಪೆಟ್ರೋಲ್ ಬಾಂಬ್ ಸ್ಫೋಟಿಸಿ ತಲ್ವಾರ್ ಝಳಪಿಸುವ ದುಸ್ಸಾಹಸಕ್ಕೆ ಆಕ್ರೋಶ*
ನವದೆಹಲಿ: ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ಒಂದು ಸಮುದಾಯದ ಪುಂಡರು ನಡೆಸಿದ ದಾಳಿಯನ್ನು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಖಂಡಿಸಿದ್ದಾರೆ.
ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು; ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದಿರುವ ಘಟನೆಯನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ ಎಂದು ತಿಳಿಸಿದ್ದಾರೆ.
ಗಣಪತಿ ದೇವರ ಮೆರವಣಿಗೆಯಲ್ಲಿ ಶಾಂತಿಯುತವಾಗಿ ತೆರಳುತ್ತಿದ್ದ ಭಕ್ತರನ್ನು ಗುರಿ ಮಾಡಿ ಒಂದು ಸಮುದಾಯದ ಪುಂಡರು ಉದ್ದೇಶಪೂರ್ವಕವಾಗಿಯೇ ದಾಂಧಲೆ ಎಬ್ಬಿಸಿ ಸಾರ್ವಜನಿಕರು-ಪೊಲೀಸರ ಮೇಲೆ ಕಲ್ಲು, ಚಪ್ಪಲಿ ಎಸೆದು ಪೆಟ್ರೋಲ್ ಬಾಂಬ್ ಸ್ಫೋಟಿಸಿ ತಲ್ವಾರ್ ಝಳಪಿಸುವ ದುಸ್ಸಾಹಸಕ್ಕೆ ಕೈ ಹಾಕಿರುವುದು ಪಟ್ಟಣದಲ್ಲಿ ಶಾಂತಿ ಸುವ್ಯವಸ್ಥೆ ವೈಫಲ್ಯವಾಗಿರುವುದಕ್ಕೆ ಸಾಕ್ಷಿ ಎಂದು ಕೇಂದ್ರ ಸಚಿವರು ಕಿಡಿಕಾರಿದ್ದಾರೆ.
ಪೊಲೀಸ್ ಠಾಣೆ ಎದುರು ರಕ್ಷಣೆ ಕೊಡಿ ಎಂದು ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದವರ ಮೇಲೆಯೇ ಆ ಕೋಮಿನ ಪುಂಡರು ದಬ್ಬಾಳಿಕೆ ನಡೆಸುತ್ತಾರೆ ಎಂದರೆ ನಾವು ಎಲ್ಲಿದ್ದೇವೆ ಎನ್ನುವ ಅನುಮಾನ ಬರುತ್ತದೆ. ಇಲ್ಲಿ ಸ್ಥಳೀಯ ಪೊಲೀಸರ ವೈಫಲ್ಯವೂ ಎದ್ದು ಕಾಣುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಮತ್ತು ಆ ಪಕ್ಷದ ರಾಜ್ಯ ಸರಕಾರ ರಾಜಕೀಯ ಸ್ವಾರ್ಥಕ್ಕಾಗಿ ಒಂದು ನಿರ್ದಿಷ್ಟ ಸಮುದಾಯವನ್ನು ಅತಿಯಾಗಿ ಓಲೈಸಿ ತುಷ್ಟೀಕರಣ ಮಾಡಿದ ಫಲವಾಗಿ ನಾಗಮಂಗಲದಲ್ಲಿ ಈ ಹೇಯ ಘಟನೆ ನಡೆದಿದೆ. ಇಂತಹ ಓಲೈಕೆ, ತುಷ್ಟೀಕರಣ ರಾಜಕಾರಣ ನಿಲ್ಲಬೇಕು. ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ಕೆಟ್ಟ ದಿನಗಳು ದೂರವಿಲ್ಲ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಸಾರ್ವಜನಿಕರು ಶಾಂತಿ ಕಾಪಾಡಬೇಕು ಎನ್ನುವುದು ನನ್ನ ಕಳಕಳಿಯ ಮನವಿ. ತಕ್ಷಣವೇ ಪಟ್ಟಣದಲ್ಲಿ ಶಾಂತಿ ಮರುಸ್ಥಾಪನೆ ನಿಟ್ಟಿನಲ್ಲಿ ಸರಕಾರ ಕ್ರಮ ಕೈಗೊಳ್ಳಬೇಕು. ಅಲ್ಲದೆ; ಈ ಪ್ರಕರಣ ನೆಪದಲ್ಲಿ ವಿರೋಧ ಪಕ್ಷಗಳ ಮುಖಂಡರು, ಕಾರ್ಯಕರ್ತರ ಮೇಲೆ ಪೊಲೀಸರು ದರ್ಪ ತೋರಿದರೆ ಸಹಿಸುವ ಪ್ರಶ್ನೆ ಇಲ್ಲ ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ.
ಅಶೋಕ್ ಆಕ್ರೋಶ
ಕಾಂಗ್ರೆಸ್ ಸರ್ಕಾರದಲ್ಲಿ ಮತಾಂಧ ಶಕ್ತಿಗಳು ಮತ್ತೊಮ್ಮೆ ಅಟ್ಟಹಾಸ ಮೆರೆದಿದ್ದು, ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದ ಕರ್ನಾಟಕದಲ್ಲಿ ಜಿಹಾದಿ ಮುಳ್ಳುಗಳ ದುಸ್ಸಾಹಸ ಶಾಂತಿ ಕದಡುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿದ್ದಾರೆ
ನಿನ್ನೆ ರಾತ್ರಿ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದಿರುವ ಘಟನೆ ಅತ್ಯಂತ ಖಂಡನೀಯವಾಗಿದ್ದು, ಕಾಂಗ್ರೆಸ್ ಆಡಳಿತದಲ್ಲಿ ರಾಜ್ಯದಲ್ಲಿ ಕಣ್ಮರೆಯಾಗಿರುವ ಕಾನೂನು ಸುವ್ಯವಸ್ಥೆಗೆ ಮತ್ತೂಂದು ನಿದರ್ಶನವಾಗಿದೆ. ಕಳೆದ ವರ್ಷವೂ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಇಂತಹುದೇ ಘಟನೆ ನಡೆದಿದ್ದರೂ ಈ ವರ್ಷ ಪೊಲೀಸರು ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದಿರುವುದು ಕಾಂಗ್ರೆಸ್ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವುದರಲ್ಲಿ ಸಂಪೂರ್ಣ ವಿಫಲವಾಗಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.
ಶಾಂತಿಯುತವಾಗಿ ಸಾಗುತ್ತಿದ್ದ ಗಣೇಶ ವಿಸರ್ಜನೆ ಮೆರವಣಿಗೆಗೆ ಅಡ್ಡಿಪಡಿಸುವ ದುರುದ್ದೇಶದಿಂದ ಮುಸ್ಲಿಂ ಮತಾಂಧ ಪುಂಡರು ಪೂರ್ವನಿಯೋಜಿತವಾಗಿ ದಾಂಧಲೆ ಎಬ್ಬಿಸಿ ಸಾರ್ವಜನಿಕರು, ಪೊಲೀಸರ ಮೇಲೆ ಕಲ್ಲು ತೂರಾಟ ಮಾಡುವುದು, ಚಪ್ಪಲಿ ಎಸೆಯುವುದು, ಪೆಟ್ರೋಲ್ ಬಾಂಬ್ ಸ್ಫೋಟಿಸುವುದು, ತಲ್ವಾರ್ ಝಳಪಿಸುವಂತಹ ದುಸ್ಸಾಹಸಕ್ಕೆ ಮುಂದಾಗುತ್ತಾರೆ ಅಂದರೆ ರಾಜ್ಯದಲ್ಲಿ ಇಂತಹ ಮತಾಂಧ ಪುಂಡರಿಗೆ, ಮುಸ್ಲಿಂ ಮೂಲಭೂತವಾದಿಗಳಿಗೆ ಕಾನೂನಿನ ಭಯವೇ ಇಲ್ಲವೆಂಬುದು ಸ್ಪಷ್ಟವಾಗುತ್ತದೆ.
ಅಷ್ಟೇ ಅಲ್ಲದೆ, ರಕ್ಷಣೆ ಕೊಡಿ ಎಂದು ಪೊಲೀಸ್ ಠಾಣೆಗೆ ಬಂದವರ ಮೇಲೆಯೇ ಈ ಮತಾಂಧ ಪುಂಡರು ಹಲ್ಲೆ, ದಬ್ಬಾಳಿಕೆ ನಡೆಸುತ್ತಾರೆ ಅಂದರೆ ಈ ದುಷ್ಟರ ತಾಲಿಬಾನ್ ಮನಸ್ಥಿತಿಗೆ ಕಾಂಗ್ರೆಸ್ ಸರ್ಕಾರದಲ್ಲಿ ಎಷ್ಟು ಪ್ರೋತ್ಸಾಹ, ಪೋಷಣೆ ದೊರಕುತ್ತಿದೆ ಎಂದು ಊಹಿಸಿಕೊಳ್ಳಿ.
@INCKarnataka ಪಕ್ಷ ಮತ್ತು ರಾಜ್ಯ ಸರ್ಕಾರದ ವೋಟ್ ಬ್ಯಾಂಕ್ ರಾಜಕಾರಣ, ಓಲೈಕೆ ರಾಜಕಾರಣ, ತುಷ್ಟೀಕರಣವೇ ಇಂತಹ ಘಟನೆಗಳು ಪದೇ ಪದೇ ಮರುಕಳಿಸುತ್ತಿರುವುದಕ್ಕೆ ನೇರ ಕಾರಣ.
ಇಂತಹ ಮತಾಂಧ ಪುಂಡರ ಬಾಲ ಕತ್ತರಿಸದೆ ಹೀಗೆ ಬಿಟ್ಟರೆ ಇಂತಹವರು ನಾಳೆ ಉಗ್ರವಾದಿಗಳಾಗುವುದರಲ್ಲಿ ಸಂಶಯವೇ ಇಲ್ಲ. ನಿನ್ನೆಯ ಗಲಭೆಗೆ ಕಾರಣರಾದ ಸಮಾಜ ಘಾತುಕ ಶಕ್ತಿಗಳನ್ನ ಈ ಕೊಡಲೇ ಬಂಧಿಸಿ ಕಾನೂನು ವಶಕ್ಕೆ ಒಪ್ಪಿಸಿ ಸರ್ವ ಜನಾಂಗದ ಶಾಂತಿಯ ತೋಟವಾದ ಕರ್ನಾಟಕದಲ್ಲಿ ಜಿಹಾದಿ ಮಾನಸಿಕತೆಗೆ ಜಾಗವಿಲ್ಲ ಎಂಬ ದಿಟ್ಟ ಸಂದೇಶ ರವಾನಿಸಬೇಕು ಎಂದು ಮುಖ್ಯಮಂತ್ರಿ @siddaramaiah ಹಾಗು ಗೃಹ ಸಚಿವ @DrParameshwara ಅವರನ್ನ ಒತ್ತಾಯಿಸುತ್ತೇನೆ ಎಂದು ಅಶೋಕ ಟ್ವೀಟ್ ಮಾಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ