ಆಳಂದ ಉದ್ವಿಗ್ನ: ಕೇಂದ್ರ ಸಚಿವರ ಮೇಲೆ ಕಲ್ಲು ತೂರಾಟ: ಕಲ್ಲು ಮತ್ತು ಬಡಿಗೆಗಳಿಂದ ವಾಹನ ಜಖಂ; ಶಿವಲಿಂಗ ಪೂಜೆ ಸಲ್ಲಿಸಿ ಹೊರಬಂದ ವೇಳೆ ಘಟನೆ
ಪ್ರಗತಿವಾಹಿನಿ ಸುದ್ದಿ, ಕಲಬುರಗಿ – ಆಳಂದ ಪಟ್ಟಣದ ಶಿವಲಿಂಗಕ್ಕೆ ಪೂಜೆ ಮಾಡಿ ಹೊರ ಬರುತ್ತಿರುವ ಸಂದರ್ಭದಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಮೇಲೆ ಕಲ್ಲು ತೂರಲಾಗಿದೆ.
ಲಾಡ್ಲೆ ಮಶಾಕ್ ದರ್ಗಾದಲ್ಲಿ ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆ ಮಾಡಿ ಹೊರ ಬರುತ್ತಿರುವ ಸಂದರ್ಭದಲ್ಲಿ ಘಟನೆ ನಡೆದಿದೆ. ಕೇಂದ್ರ ಸಚಿವರ ಕಾರ್, ಸ್ಥಳದಲ್ಲಿದ್ದ ಪೊಲೀಸ್, ಮಾಧ್ಯಮದರ ಮೇಲೆ ಕಲ್ಲು ತೂರಾಟವಾಗಿದ್ದು, ಹಲವರಿಗೆ ಗಾಯಗಳಾಗಿವೆ.
ಶಿವಲಿಂಗ ಪೂಜೆ ಸಲ್ಲಿಸಲು 10 ಜನರಿಗೆ ಅವಕಾಶ ನೀಡಲಾಗಿತ್ತು. ಭಗವಂತ ಖೂಬಾ, ಶಾಸಕ ರಾಜಕುಮಾರ್ ಪಾಟೀಲ್, ಬಸವರಾಜ ಮತ್ತಿಮಡು, ಕಡಗಂಚಿ ಮಠದ ವೀರಭದ್ರ ಸ್ವಾಮೀಜಿ ಸೇರಿದಂತೆ ಹತ್ತು ಜನರು ದರ್ಗಾ ಪ್ರವೇಶ ಮಾಡಿದ್ದರು.
ಅಲ್ಲಿಂದ ಹೊರಬರುತ್ತಿದ್ದಂತೆ ಕಲ್ಲು ಮತ್ತು ಬಡಿಗೆಗಳಿಂದ ವಾಹನ ಜಖಂ ಮಾಡಿದ್ದಾರೆ. ಪರಿಣಾಮ ಸಚಿವರ ಕಾರು ಸೇರಿದಂತೆ ಕಲಬುರಗಿ ಜಿಲ್ಲಾಧಿಕಾರಿ ಯಶವಂತ್ ಗುರಿಕರ ಅವರ ವಾಹನದ ಮೇಲೂ ಕಲ್ಲು ತೂರಾಟವಾಗಿದ್ದು, ಹಿಂಬದಿಯ ಸೈಡ್ ಗಾಜು ಪುಡಿಯಾಗಿದೆ.
ಕಲ್ಲು ತೂರಾಟದ ಬಳಿಕ ಮಾತನಾಡಿದ ಕೇಂದ್ರ ಸಚಿವ ಭಗವಂತ ಖೂಬಾ, ಶಿವರಾತ್ರಿ ದಿನದಂದು ವಿಶೇಷ ಪೂಜೆ ಮಾಡಲು ಬಂದಂತಹ ಸಂದರ್ಭದಲ್ಲಿ ಅನ್ಯಧರ್ಮಿಯರು ಕಲ್ಲು ತೂರಾಟ ಮಾಡಿದ್ದಾರೆ. ಕಲ್ಲು ತೂರಾಟ ನಡೆಸಿದ ಕಿಡಿಗೇಡಿಗಳನ್ನು ಸುಮ್ಮನೆ ಬಿಡುವುದಿಲ್ಲ. ಕಾನೂನು ಕ್ರಮ ಕೈಗೊಳ್ಳಲು ಸೂಚಿಸಲಾಗುವುದು ಎಂದು ಹೇಳಿದರು.
ಸೇಡಂ ಶಾಸಕ ರಾಜಕುಮಾರ್ ಪಾಟೀಲ್ ಮಾತನಾಡಿ, ಮುಸ್ಲಿಂ ಸಮುದಾಯದ ಜನರು ನಮ್ಮ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಉದ್ವಿಗ್ನ ಸ್ಥಿತಿಗೆ ಕಾರಣರಾದವರನ್ನು 48 ಗಂಟೆಗಳಲ್ಲಿ ಹಿಡಿದು ಒಳಗೆ ಹಾಕಬೇಕು. ಮುಂಬರುವ ದಿನಗಳಲ್ಲಿ ನಿರಂತರವಾಗಿ ಈ ಶಿವಲಿಂಗಕ್ಕೆ ಪೂಜೆ ಮಾಡುವ ಅವಕಾಶವನ್ನು ಕಲ್ಪಿಸಿಕೊಡಬೇಕು. ಹಾಗೇ ಸಾರ್ವಜನಿಕರು ಭಯಭೀತರಾದೇ ಇಲ್ಲಿ ಬಂದು ಪೂಜೆಯನ್ನು ಮಾಡಬೇಕು ಇದಕ್ಕೆ ಜಿಲ್ಲಾಡಳಿತ ಸೂಕ್ತ ವ್ಯವಸ್ಥೆ ಮಾಡಿಕೊಡಬೇಕೆಂದು ಹೇಳಿದರು.
ಲಾಠಿ ಚಾರ್ಜ್
ಇದಕ್ಕೂ ಮೊದಲು ಆಳಂದದ ಲಾಡ್ಲೆ ಮಶಾಕ್ ದರ್ಗಾ ಆವರಣದಲ್ಲಿರುವ ರಾಘವ ಚೈತನ್ಯ ಶಿವಲಿಂಗದ ಶುದ್ಧೀಕರಣ ವಿಚಾರದ ಗಲಾಟೆ ವಿಕೋಪಕ್ಕೆ ಹೋಗಿ ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ.
ಶಿವರಾತ್ರಿ ಹಬ್ಬದಂದೇ ಮುಸ್ಲಿಮರ ಸಂದಲ್ ಮತ್ತು ಶಬ್‍ಏ ಬರಾತ್ ಇರುವುದರಿಂದ ಶಾಂತಿ ಭಂಗವಾಗುವ ಸಾಧ್ಯತೆಯಿದೆ ಎಂದು ಜಿಲ್ಲಾಡಳಿತದಿಂದ ಆಳಂದ ಚಲೋಗೆ ಅನುಮತಿ ಸಿಕ್ಕಿರಲಿಲ್ಲ. ಪ್ರಮೋದ್ ಮುತಾಲಿಕ್ ಹಾಗೂ ಚೈತ್ರಾ ಕುಂದಾಪುರ ಕಲಬುರಗಿ ಜಿಲ್ಲೆಗೆ ಕಾಲಿಡುವಂತಿಲ್ಲ ಎಂದು ಜಿಲ್ಲಾಡಳಿತ ಆದೇಶಿಸಿತ್ತು.
ಶಿವಲಿಂಗದ ಶುದ್ಧೀಕರಣಕ್ಕೆ ಹಿಂದೂಪರ ಸಂಘಟನೆಗಳು ಪಟ್ಟು ಹಿಡಿದಿದ್ದು, ಆಂದೋಲಾದ ಶ್ರೀಸಿದ್ದಲಿಂಗ ಸ್ವಾಮೀಜಿ ಕಲಬುರಗಿಯಿಂದ ಆಳಂದ ಚಲೋಗೆ ಕರೆ ಕೊಟ್ಟಿದ್ದರು. ಆದರೆ ಆಳಂದ ಚಲೋಗೆ ಜಿಲ್ಲಾಡಳಿತ ಅನುಮತಿ ನೀಡಿರಲಿಲ್ಲ.
ಹಿಂದೂಪರ ಸಂಘಟನೆ ಕಾರ್ಯಕರ್ತರು ದರ್ಗಾ ಪ್ರವೇಶಿಸಬಾರದು ಎಂದು ಯುವಕರ ಗುಂಪೊಂದು ನಿಷೇಧಾಜ್ಞೆ ನಡುವೆ ತಲ್ವಾರ್, ದೊಣ್ಣೆ ಪ್ರದರ್ಶಿಸಿತ್ತು. ಆದರೆ ಪೊಲೀಸರು ಯಾರಿಗೂ ಅವಕಾಶ ನೀಡಿರಲಿಲ್ಲ. ತೀವ್ರ ಗದ್ದಲ, ಗಲಾಟೆ ನಡೆಸಿದ್ದಕ್ಕೆ ಪೊಲೀಸರು ಲಾಠಿಚಾರ್ಜ್ ನಡೆಸಿ ನಿಯಂತ್ರಿಸಿದ್ದಾರೆ.
ಕೀವ್ ನಲ್ಲಿರುವ ಟೀವಿ ಟವರ್ ಮೇಲೆ ಬಾಂಬ್ ದಾಳಿ ; ಸ್ಥಗಿತಗೊಂಡ ಟಿವಿ ಚಾನಲ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ