*ಕೃಷಿ ಮೇಲಿನ ಕಾರ್ಪೋರೆಟ್ ಆಕ್ರಮಣ ನಿಲ್ಲಿಸಿ: ರೈತರ ಪ್ರತಿಭಟನೆ*
ಪ್ರಗತಿವಾಹಿನಿ ಸುದ್ದಿ: ಕೃಷಿ ಮೇಲಿನ ಕಾರ್ಪೋರೆಟ್ ಆಕ್ರಮಣ ನಿಲ್ಲಿಸಿ, ರೈತರ ಬೆಳೆಗಳಿಗೆ ಎಂಎಸ್ ಪಿ ಖಾತ್ರಿ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಇಂದು ಸಂಯುಕ್ತ ಹೋರಾಟ ಕರ್ನಾಟಕ ಸದಸ್ಯರು ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಕಾರ್ಪೋರೆಟ್ ಕಂಪನಿಯ ಮಾಲೀಕರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ರೈತರ ಹಾಗೂ ಜನಸಾಮಾನ್ಯರ ಬದುಕಿಗೆ ಕಂಟಕವಾಗಿರುವ ವಿದ್ಯುತ್ ಖಾಸಗೀಕರಣ ರದ್ದಾಗಬೇಕು. ಖಾಸಗಿ ಕಂಪನಿಗಳ ಹಿತ ಕಾಯಲು ತಂದಿರುವ ಕಾರ್ಮಿಕ ವಿರೋಧಿ ನಾಲ್ಕು ಕೋಡ್ ಗಳು ರದ್ದಾಗಬೇಕು ಮತ್ತು ಉದ್ಯೋಗ ಭದ್ರತೆ ದೇಶದ ನೀತಿಯಾಗಬೇಕೆಂದು ಆಗ್ರಹಿಸಿದರು. ಹಿತ್ತಲ ಬಾಗಿಲಿನಿಂದ ನುಗ್ಗಿ ಮೀಸಲಾತಿಯನ್ನು ಸರ್ವನಾಶಗೊಳಿಸುತ್ತಿರುವ ಕಾರ್ಪೋರೆಟ್ ಪರ ನಿಂತು ಖಾಸಗೀಕರಣ ಮಾಡುತ್ತಿರುವುದು ಸರಿಲ್ಲ. ಖಾಸಗಿ ಕ್ಷೇತ್ರದಲ್ಲಿಯೂ ಮೀಸಲಾತಿ ಜಾರಿಯಾಗಬೇಕು ಎಂದು ಒತ್ತಾಯಿಸಿದರು.
ಲಾಭದ ದುರಾಸೆಗಾಗಿ ಮಹಿಳೆಯನ್ನು ಭೋಗದ ವಸ್ತುವಂತೆ ಬಿಂಬಿಸಿ ಅತ್ಯಾಚಾರಗಳ ಸರಮಾಲೆಗೆ ಕಾರಣವಾಗಿರುವ ಕಾರ್ಪೋರೆಟ್ ಸಂಸ್ಕೃತಿ ನಾಶವಾಗಬೇಕು ಮತ್ತು ಸಣ್ಣ ಹಾಗೂ ಮದ್ಯಮ ಉದ್ದಿಮೆಗಳನ್ನು ಸರ್ವನಾಶಗೊಳಿಸಿ ಯುವ ಜನರನ್ನು ನಿರುದ್ಯೋಗದ ಕೂಪಕ್ಕೆ ತಳ್ಳಿರುವ ಕಾರ್ಪೋರೆಟ್ ಗಳಿಗೆ ಕಡಿವಾಣ ಹಾಕಬೇಕು ಅಲ್ಲದೆ, ವಯನಾಡಿನಲ್ಲಿ ಭೂ ಕುಸಿತ, ಅತಿವೃಷ್ಟಿ, ಅನಾವೃಷ್ಟಿಯಂತಹ ಪ್ರಾಕೃತಿಕ ವಿಕೋಪಗಳಿಗೆ ದೇಶವನ್ನು ತಳ್ಳುತ್ತಿರುವ ಕಾರ್ಪೋರೆಟ್ ಮಾರಿಯ ಅಭಿವೃದ್ಧಿ ಕೊನೆಯಾಗಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ