Kannada NewsKarnataka NewsLatest

ಮಹಾ ಸಚಿವರಿಗೆ ಕೊಗನೋಳಿಯಲ್ಲೇ ತಡೆ : ಕರ್ನಾಟಕ ಸರಕಾರದ ಗಟ್ಟಿ ನಿರ್ಧಾರ?

ಮಹಾರಾಷ್ಟ್ರದ ಉನ್ನತ ಮೂಲಗಳ ಪ್ರಕಾರ, ಅಲ್ಲಿನ ಸಚಿವರು ಕರ್ನಾಟಕಕ್ಕೆ ಬಂದು ಅವಮಾನ ಮಾಡಿಸಿಕೊಳ್ಳುವುದಕ್ಕಿಂತ ಪ್ರವಾಸವನ್ನು ರದ್ಧುಪಡಿಸುವುದೇ ಉತ್ತಮ ಎನ್ನುವ ಚಿಂತನೆಗೆ ಶುಕ್ರವಾರ ಬಂದಿದ್ದಾರೆ. ಆದರೆ ಬೆಳಗಾವಿಯ ಮಹಾರಾಷ್ಟ್ರ ಏಕೀಕರಣ ಸಮಿತಿ ಮುಖಂಡರು ಬೆಳಗಾವಿಗೆ ಬರುವಂತೆ ತೀವ್ರ ಒತ್ತಡ ಹೇರುತ್ತಿದ್ದಾರೆ. ಹಾಗಾಗಿ ದ್ವಂದ್ವದಲ್ಲಿ ಸಚಿವರಿದ್ದಾರೆ. ಸೋಮವಾರ ಸಂಜೆಯ ಹೊತ್ತಿಗೆ ಮಹಾರಾಷ್ಟ್ರ ಸಚಿವರ ನಿರ್ಧಾರ ಮತ್ತು ಕರ್ನಾಟಕ ಸರಕಾರದ ನಿರ್ಧಾರ ಸ್ಪಷ್ಟವಾಗುವ ಸಾಧ್ಯತೆ ಇದೆ. 

 

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಗಡಿ ವಿವಾದ ಮುಂದಿಟ್ಟುಕೊಂಡು ಕನ್ನಡಿಗರನ್ನು ಕೆಣಕಲು ಮುಂದಾಗಿರುವ ಮಹಾರಾಷ್ಟ್ರದ ಗಡಿ ಉಸ್ತುವಾರಿ ಸಚಿವರಿಬ್ಬರು ಮತ್ತು ಗಡಿ ಸಲಹಾ ಸಮಿತಿ ಅಧ್ಯಕ್ಷರನ್ನು ಬೆಳಗಾವಿ ಗಡಿಯಲ್ಲೇ ತಡೆದು ವಾಪಸ್ ಕಳಿಸಲು ಕರ್ನಾಟಕ ಸರಕಾರ ನಿರ್ಧರಿಸಿದೆ.

ರಾಜ್ಯ ಸರಕಾರದ ಉನ್ನತ ಮೂಲಗಳು ಪ್ರಗತಿವಾಹಿನಿಗೆ ಈ ವಿಷಯ ತಿಳಿಸಿವೆ.

ಈ ಹಿನ್ನೆಲೆಯಲ್ಲಿ ಈಗಾಗಲೇ ಕೊಗನೋಳಿಯಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಮಹಾರಾಷ್ಟ್ರದ ಇಬ್ಬರು ಸಚಿವರು ಮತ್ತು ಓರ್ವ ಸಂಸದ ಡಿ.6ರಂದು (ಮಂಗಳವಾರ) ಬೆಳಗಾವಿಗೆ ಬರಲು ಮುಂದಾಗಿದ್ದಾರೆ.  ಅವರ ಪ್ರವಾಸ ಪಟ್ಟಿ ಪ್ರಕಾರ ಮಹಾರಾಷ್ಟ್ರ ಏಕೀಕರಣ ಸಮಿತಿ ಪದಾಧಿಕಾರಿಗಳೊಂದಿಗಿನ ಸಭೆಯೂ ಸೇರಿದಂತೆ ಹಲವಾರ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ. ಇಡೀ ದಿನ ಬೆಳಗಾವಿಯಲ್ಲಿದ್ದು ಕನ್ನಡಿಗರನ್ನು ಕೆಣಕಲು ಮುಂದಾಗಿದ್ದಾರೆ.

ಆದರೆ ಮಹಾರಾಷ್ಟ್ರ ಸಚಿವರು ಕರ್ನಾಟಕ ಪ್ರವೇಶಿಸದಂತೆ ತಡೆಯಲು ಕರ್ನಾಟಕ ನಿರ್ಧರಿಸಿದೆ.

ಸಚಿವ ಚಂದ್ರಕಾಂತ ಪಾಟೀಲ ಮತ್ತು ಗಡಿ ಸಲಹಾ ಸಮಿತಿ ಅಧ್ಯಕ್ಷ, ಸಂಸದ ಧರ್ಮಶೀಲ್ ಮಾನೆ ರಸ್ತೆ ಮಾರ್ಗವಾಗಿ ಕರ್ನಾಟಕ ಪ್ರವೇಶಿಸಲಿದ್ದಾರೆ. ಇನ್ನೋರ್ವ ಸಚಿವ ಶಂಭುರಾಜ ದೇಸಾಯಿ ವಿಶೇಷ ವಿಮಾನದ ಮೂಲಕ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಬಂದಿಳಿಯಲು ನಿರ್ಧರಿಸಿದ್ದಾರೆ.

ಆದರೆ, ಚಂದ್ರಕಾಂತ ಪಾಟೀಲ ಹಾಗೂ ಧರ್ಮಶೀಲ ಮಾನೆ ಅವರನ್ನು ಕೊಗನೋಳಿಯಲ್ಲಿ ಮತ್ತು ಶಂಭುರಾಜ ದೇಸಾಯಿ ಅವರನ್ನು ವಿಮಾನ ನಿಲ್ದಾಣದಲ್ಲೇ ತಡೆದು ವಾಪಸ್ ಕಳಿಸಲು ಕರ್ನಾಟಕ ಸರಕಾರ ಗಟ್ಟಿ ನಿರ್ಧಾರ ತೆಗೆದುಕೊಂಡಿದೆ ಎಂದು ಮಾಹಿತಿ ಸಿಕ್ಕಿದೆ.

ಮಹಾರಾಷ್ಟ್ರ ಗಡಿಯಲ್ಲಿ ಭಾನುವಾರ ಸಂಜೆಯಿಂದಲೇ ಭಾರೀ ಸಂಖ್ಯೆಯಲ್ಲಿ ಪೋಲೀಸರನ್ನು ನಿಯೋಜಿಸಲಾಗಿದೆ.

ಮಹಾರಾಷ್ಟ್ರ ಮಂತ್ರಿಗಳು ಕರ್ನಾಟಕಕ್ಕೆ ಬಂದು ಗಡಿ ಕ್ಯಾತೆ ತೆಗೆದರೆ ಮಸಿ ಬಳಿಯುವುದಾಗಿ ಕನ್ನಡ ಸಂಘಟನೆಗಳು ಈಗಾಗಲೆ ತಿಳಿಸಿವೆ. ಕರ್ನಾಟಕ ರಕ್ಷಣಾ ವೇದಿಕೆಯ ಎರಡೂ ಬಣಗಳ ರಾಜ್ಯಾಧ್ಯಕ್ಷರು ಡಿ.6ರಂದು ಬೆಳಗಾವಿಗೆ ಬರುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಗಡಿ ವಿವಾದ ಬಿಸಿ ಬಿಸಿಯಾಗಿರುವ ಈ ಸಂದರ್ಭದಲ್ಲಿ ಬೆಂಕಿಗೆ ಮತ್ತಷ್ಟು ತುಪ್ಪ ಸುರಿಯಲು ಮಹಾರಾಷ್ಟ್ರ ಮುಂದಾಗಿದೆ. ಇಂತಹ ಸಂದರ್ಭದಲ್ಲಿ ಕರ್ನಾಟಕಕ್ಕೆ ಬರುವುದು ಸರಿಯಲ್ಲ, ನಿಮ್ಮ ಸಚಿವರಿಗೆ ಈ ಕುರಿತು ಸಲಹೆ ನೀಡಿ ಎಂದು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸೂಚನೆಯ ಮೇರೆಗೆ ಕರ್ನಾಟಕದ ಮುಖ್ಯ ಕಾರ್ಯದರ್ಶಿಗಳು ಮಹಾರಾಷ್ಟ್ರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ತಿಳಿಸಿದ್ದಾರೆ.

ಆದರೆ ಕರ್ನಾಟಕದಿಂದ ಯಾವುದೇ ಪತ್ರ ಬಂದಿಲ್ಲ, ನಾವು ಬೆಳಗಾವಿಗೆ ಹೋಗುವುದು ನಿಶ್ಚಿತ ಎಂದು ಚಂದ್ರಕಾಂತ ಪಾಟೀಲ 2 ದಿನಗಳ ಹಿಂದೆ ತಿಳಿಸಿದ್ದರು.

ಮಹಾರಾಷ್ಟ್ರದ ಉನ್ನತ ಮೂಲಗಳ ಪ್ರಕಾರ, ಅಲ್ಲಿನ ಸಚಿವರು ಕರ್ನಾಟಕಕ್ಕೆ ಬಂದು ಅವಮಾನ ಮಾಡಿಸಿಕೊಳ್ಳುವುದಕ್ಕಿಂತ ಪ್ರವಾಸವನ್ನು ರದ್ಧುಪಡಿಸುವುದೇ ಉತ್ತಮ ಎನ್ನುವ ಚಿಂತನೆಗೆ ಶುಕ್ರವಾರ ಬಂದಿದ್ದಾರೆ.

ಈಗಾಗಲೇ ಕರ್ನಾಟಕವನ್ನು ಕೆಣಕಿ ಮಂಗಳಾರತಿ ಮಾಡಿಸಿಕೊಂಡಿರುವ ಮಹಾರಾಷ್ಟ್ರ, ಮತ್ತೆ ಅಂತಹ ಸಾಹಸಕ್ಕಿಳಿಯುವುದು ಬೇಡ ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ.

ಆದರೆ ಬೆಳಗಾವಿಯ ಮಹಾರಾಷ್ಟ್ರ ಏಕೀಕರಣ ಸಮಿತಿ ಮುಖಂಡರು ಬೆಳಗಾವಿಗೆ ಬರುವಂತೆ ತೀವ್ರ ಒತ್ತಡ ಹೇರುತ್ತಿದ್ದಾರೆ. ಹಾಗಾಗಿ ದ್ವಂದ್ವದಲ್ಲಿ ಸಚಿವರಿದ್ದಾರೆ. ಸೋಮವಾರ ಸಂಜೆಯ ಹೊತ್ತಿಗೆ ಮಹಾರಾಷ್ಟ್ರ ಸಚಿವರ ನಿರ್ಧಾರ ಮತ್ತು ಕರ್ನಾಟಕ ಸರಕಾರದ ನಿರ್ಧಾರ ಸ್ಪಷ್ಟವಾಗುವ ಸಾಧ್ಯತೆ ಇದೆ.

 

ಕರ್ನಾಟಕಕ್ಕೆ ಬರಲಿರುವ ಮಹಾರಾಷ್ಟ್ರ ಸಚಿವರಿಗೆ ರಾಜ್ಯ ಸರಕಾರದಿಂದ ಖಡಕ್ ಸಂದೇಶ ರವಾನೆ

https://pragati.taskdun.com/the-state-government-has-sent-a-message-to-the-maharashtra-minister-who-is-coming-to-karnataka/

 

ಮಹಾ ಸಚಿವರ ಕುತಂತ್ರ ಬಿಜೆಪಿ ವರಿಷ್ಠರ ಗಮನಕ್ಕೆ ತನ್ನಿ: ಚಂದರಗಿ

https://pragati.taskdun.com/kannada-kriya-samiti-president-ashok-chandargi-advises-cm-to-bring-the-machinations-of-maha-ministers-to-bjp-high-command/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button