Belagavi NewsBelgaum NewsKarnataka NewsLatestPolitics

*ಎಸ್ ಟಿಪಿ ಘಟಕ: ರೈತರಿಗೆ ಹೆಚ್ಚಿನ ಪರಿಹಾರಕ್ಕೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮನವಿ*

ಎಸ್ ಟಿಪಿ ಘಟಕಕ್ಕೆ ಭೂಮಿ: ಸಂಪುಟದ ಹೆಗಲಿಗೆ ಪರಿಹಾರ ಹೆಚ್ಚಳ ಜವಾಬ್ದಾರಿ

ಪ್ರಗತಿವಾಹಿನಿ ಸುದ್ದಿ: ಬೆಳಗಾವಿಯಲ್ಲಿನ ತ್ಯಾಜ್ಯ ನೀರು ಸಂಸ್ಕರಣಾ ಘಟಕಕ್ಕೆ ಭೂಮಿ ನೀಡಿರುವ ಭೂಮಾಲೀಕರಿಗೆ ಪರಿಹಾರವನ್ನು ಹೆಚ್ಚಳ ಮಾಡುವ ನಿರ್ಧಾರ ಕೈಗೊಳ್ಳುವ ವಿಚಾರವನ್ನು ಸಚಿವ ಸಂಪುಟದಲ್ಲಿ ಚರ್ಚಿಸಲು ಮೂವರು ಸಚಿವರು ನಡೆಸಿದ ಸಭೆಯಲ್ಲಿ ನಿರ್ಧರಿಸಲಾಗಿದೆ.

ವಿಧಾನಸೌಧದಲ್ಲಿ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬಿ.ಎಸ್.ಸುರೇಶ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಮಹಿಳಾ & ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಉಪಸ್ಥಿತಿಯಲ್ಲಿ ನಗರಾಭಿವೃದ್ಧಿ, ಆರ್ಥಿಕ ಮತ್ತು ನಗರ ನೀರು ಸರಬರಾಜು ಇಲಾಖೆ ಉನ್ನತಾಧಿಕಾರಿಗಳ ಸಭೆ ನಡೆಯಿತು.

Home add -Advt

ಬೆಳಗಾವಿ ನಗರದಲ್ಲಿ 70 ದಶಲಕ್ಷ ಲೀಟರ್ ಸಾಮರ್ಥ್ಯದ ತ್ಯಾಜ್ಯ ನೀರು ಸಂಸ್ಕರಣಾ ಘಟಕ ನಿರ್ಮಾಣಕ್ಕಾಗಿ ಹಲಗಾ ಗ್ರಾಮದ 17 ಎಕರೆ 37 ಗುಂಟೆ ಮತ್ತು ಬೆಳಗಾವಿಯ 1 ಎಕರೆ ಮತ್ತು 12 ಗುಂಟೆ ಜಮೀನನ್ನು ವಶಪಡಿಸಿಕೊಳ್ಳಲಾಗಿತ್ತು. ಹತ್ತು ವರ್ಷಗಳ ಹಿಂದೆ ಒಟ್ಟು 19 ಎಕರೆ 9 ಗುಂಟೆ ಜಮೀನನ್ನು ಸ್ವಾಧೀನಪಡಿಸಿಕೊಂಡು ಅದಕ್ಕೆ ಪರಿಹಾರವನ್ನೂ ಘೋಷಣೆ ಮಾಡಲಾಗಿತ್ತು. ಆದರೆ, ಅಂದು ಸರ್ಕಾರ ಘೋಷಣೆ ಮಾಡಿದ್ದ ಪರಿಹಾರವನ್ನು ಭೂಮಾಲೀಕರು ಒಪ್ಪದ ಕಾರಣ ನ್ಯಾಯಾಲಯದಲ್ಲಿ ಪರಿಹಾರದ ಮೊತ್ತವನ್ನು ಜಮಾ ಮಾಡಲಾಗಿತ್ತು. ಅಲ್ಲದೇ, ಸರ್ಕಾರದ ಭೂಸ್ವಾಧೀನ ಪ್ರಕ್ರಿಯೆ ಕ್ರಮಬದ್ಧವಾಗಿದೆ ಎಂದು ರಾಜ್ಯ ಹೈಕೋರ್ಟ್ ಸರ್ಕಾರದ ಪರವಾಗಿ ತೀರ್ಪು ನೀಡಿತ್ತು.

ಪರಿಹಾರ ಮೊತ್ತ ಹೆಚ್ಚಳ ಮಾಡಬೇಕೆಂದು ಒತ್ತಾಯಗಳು ಕೇಳಿ ಬಂದ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಸಚಿವ ಸುರೇಶ್ ಅವರು ಬೆಳಗಾವಿ ಜಿಲ್ಲೆಯ ಇಬ್ಬರು ಸಚಿವರೊಂದಿಗೆ ಸಭೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸುರೇಶ್ ಅವರು, ತ್ಯಾಜ್ಯ ನೀರು ಸಂಸ್ಕರಣಾ ಘಟಕಕ್ಕೆ ಜಮೀನು ನೀಡಿರುವ ರೈತರ ಬಗ್ಗೆ ತಮಗೆ ಮತ್ತು ಸರ್ಕಾರಕ್ಕೆ ಸಹಾನುಭೂತಿ ಇದೆ. ರೈತರ ಹಿತರಕ್ಷಣೆ ಜೊತೆ ಜೊತೆಯಲ್ಲೇ ಬೆಳಗಾವಿ ನಗರದ ನೈರ್ಮಲ್ಯ ಕಾಪಾಡುವುದೂ ನಗರಾಭಿವೃದ್ಧಿ ಇಲಾಖೆಯ ಜವಾಬ್ದಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಭೂಮಿ ಕಳೆದುಕೊಂಡಿರುವ ರೈತರಿಗೆ ನಿಯಮಾವಳಿಯಲ್ಲಿ ಅವಕಾಶವಿದ್ದರೆ ಪರಿಹಾರ ಹೆಚ್ಚಳ ಮಾಡಬಹುದಾಗಿದೆ ಎಂದರು.

ಇದೇ ವೇಳೆ, ಅಧಿಕಾರಿಗಳು ಹತ್ತು ವರ್ಷಗಳಿಗೂ ಹಿಂದೆಯೇ ಪರಿಹಾರ ಘೋಷಣೆ ಮಾಡಿರುವುದರಿಂದ ಮತ್ತೆ ಪರಿಷ್ಕರಣೆ ಮಾಡಲು ನಿಯಮಾವಳಿಯಲ್ಲಿ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.

ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಮಾತನಾಡಿ, ಎಸ್ ಟಿಪಿ ಘಟಕವನ್ನು ಸ್ಥಾಪನೆ ಮಾಡದಿದ್ದರೆ ನಾಗರಿಕರು ಮಲಿನ ನೀರನ್ನು ಬಳಸಬೇಕಾಗುತ್ತದೆ. ತ್ವರಿತವಾಗಿ ಯೋಜನೆಯನ್ನು ಕಾರ್ಯಗತಗೊಳಿಸಬೇಕು ಮತ್ತು ಪರಿಹಾರ ಹೆಚ್ಚಳದ ವಿಚಾರದ ಬಗ್ಗೆ ಸಚಿವ ಸಂಪುಟ ಸಭೆಯ ಮುಂದಿಟ್ಟು ನಿರ್ಧಾರ ಕೈಗೊಳ್ಳುವುದು ಸೂಕ್ತ ಎಂದು ಸಲಹೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾತನಾಡಿ, ತಮ್ಮ ಮತಕ್ಷೇತ್ರದ ರೈತರು ಜಮೀನನ್ನು ನೀಡಿದ್ದಾರೆ. ಅವರಿಗೆ ಪರಿಹಾರದ ಮೊತ್ತವನ್ನು ಹೆಚ್ಚಳ ಮಾಡಬೇಕೆಂದು ಮನವಿ ಮಾಡಿದರು.

ಸಚಿವ ಸಂಪುಟ ಸಭೆಗೆ ಹೊಣೆ
ಸಚಿವರಾದ ಸುರೇಶ್ ಅವರು, ಇದೊಂದು ಅತ್ಯಂತ ಸೂಕ್ಷ್ಮ ವಿಚಾರವಾಗಿದೆ. ನಿಯಮಾವಳಿಯಲ್ಲಿ ಪರಿಹಾರ ಹೆಚ್ಚಳಕ್ಕೆ ಅವಕಾಶವಿಲ್ಲ. ಈ ಹಿನ್ನೆಲೆಯಲ್ಲಿ ಪರಿಹಾರ ಹೆಚ್ಚಳದ ಪ್ರಸ್ತಾವನೆಯನ್ನು ಸಚಿವ ಸಂಪುಟದ ಮುಂದೆ ಮಂಡಿಸುವಂತೆ ಆರ್ಥಿಕ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಆ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಬಹುದಾಗಿದೆ ಎಂದರು.

ಸಭೆಯಲ್ಲಿ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ದೀಪಾ ಚೋಳನ್, ಆರ್ಥಿಕ ಇಲಾಖೆ (ವೆಚ್ಚ) ಕಾರ್ಯದರ್ಶಿ ರೇಜು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಸೆಲ್ವಮಣಿ ಸೇರಿದಂತೆ ಹಿರಿಯ ಅಧಿಕಾರಿಗಳು ಇದ್ದರು.

Related Articles

Back to top button