Kannada NewsKarnataka NewsLatest
*ಆಟವಾಡುತ್ತಿದ್ದ 4 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ*: *ಚಿಕಿತ್ಸೆ ಫಲಿಸದೆ ಸಾವು*

ಪ್ರಗತಿವಾಹಿನಿ ಸುದ್ದಿ: ಬೀದಿ ನಾಯಿಯ ದಾಳಿಗೆ ನಾಲ್ಕು ವರ್ಷದ ಬಾಲಕನೊಬ್ಬ ಬಲಿಯಾಗಿದ್ದಾನೆ. ಆಟವಾಡುತ್ತಿದ್ದ ವೇಳೆ ಏಕಾಏಕಿ ದಾಳಿ ನಡೆಸಿದ ಬೀದಿ ನಾಯಿಯಿಂದ ಬಾಲಕ ಗಂಭೀರವಾಗಿ ಗಾಯಗೊಂಡಿದ್ದ. ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಮೃತಪಟ್ಟಿದ್ದಾನೆ. ಈ ದುರ್ಘಟನೆಯಿಂದ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
ಮೃತ ಬಾಲಕನನ್ನು 4 ವರ್ಷದ ಮನೋಜ್ ಪೂಕಾರಿ ಎಂದು ಗುರುತಿಸಲಾಗಿದೆ. ಕಲಬುರಗಿ ತಾಲೂಕಿನ ಜಂಬಗಾ ಗ್ರಾಮದ ಶರಣಬಸಪ್ಪ ಪೂಜಾರಿ ಅವರ ಪುತ್ರ ಮನೋಜ್, ತಂದೆಯ ಕೆಲಸದ ನಿಮಿತ್ತ ಕುಟುಂಬದೊಂದಿಗೆ ಕಲಬುರಗಿಯಲ್ಲಿ ವಾಸವಾಗಿದ್ದ. ಈ ಘಟನೆ ನಗರದ ದರಿಯಾಪುರ ಕೋಟನೂರ ಬಡಾವಣೆಯಲ್ಲಿ ನಡೆದಿದೆ.
ಗಾಣದೇವತೆ ದೇವಸ್ಥಾನದ ರಸ್ತೆಯಲ್ಲಿ ಮನೋಜ್ ಆಟವಾಡುತ್ತಿದ್ದ ವೇಳೆ ಏಕಾಏಕಿ ಬೀದಿ ನಾಯಿ ದಾಳಿ ನಡೆಸಿದೆ. ದಾಳಿಯಿಂದ ಬಾಲಕನಿಗೆ ಗಂಭೀರ ಗಾಯಗಳಾಗಿದ್ದವು. ಕೂಡಲೇ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿದರೂ ಬಾಲಕನ ಪ್ರಾಣ ಉಳಿಸಲು ಸಾಧ್ಯವಾಗಿಲ್ಲ.




