Kannada NewsKarnataka NewsLatest

*ಕುಮಾರಸ್ವಾಮಿ ಊಸರವಳ್ಳಿ ರಾಜಕಾರಣ ಬಿಡಲಿ*: *ಹೆಚ್‌ಡಿಕೆಗೆ ಸಚಿವ ಬಾಲಕೃಷ್ಣ ತಿರುಗೇಟು*

ಪ್ರಗತಿವಾಹಿನಿ ಸುದ್ದಿ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಸಚಿವ ಹೆಚ್.ಸಿ. ಬಾಲಕೃಷ್ಣ ವಾಗ್ದಾಳಿ ನಡೆಸಿದ್ದಾರೆ. ಮೊದಲು ಊಸರವಳ್ಳಿ ರಾಜಕಾರಣ ಮಾಡುವುದನ್ನು ಬಿಡಬೇಕು. ವೈಯಕ್ತಿಕ ವಿಚಾರಗಳನ್ನು ಮಾತನಾಡುವುದನ್ನೂ ನಿಲ್ಲಿಸಬೇಕು ಎಂದು ಟಾಂಗ್ ನೀಡಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಚಾರದಲ್ಲಿ ಕುಮಾರಸ್ವಾಮಿ ಮೃದು ಧೋರಣೆ ತೋರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಬಾಲಕೃಷ್ಣ, ರಾಜಕೀಯ ಬೆಳವಣಿಗೆಗಳ ಕುರಿತು ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ. ಸದ್ಯದ ಬೆಳವಣಿಗೆಗಳು ಕೊನೆಗೆ ಕುಮಾರಸ್ವಾಮಿ ಅವರಿಗೇ ತಿರುಗೇಟು ನೀಡಲಿವೆ ಎಂದು ಹೇಳಿದ್ದಾರೆ.

ಮಾಗಡಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ನಿತ್ಯ ಮಾಧ್ಯಮಗಳ ಮುಂದೆ ಪ್ರಸ್ತಾಪಿಸುತ್ತಿರುವ ವಿಚಾರಗಳು ಕೊನೆಗೆ ಅವರ ಬುಡಕ್ಕೇ ಬರಲಿವೆ. ಸ್ವಲ್ಪ ದಿನ ಕಾದು ನೋಡಿ, ಎಲ್ಲವೂ ಗೊತ್ತಾಗಲಿದೆ ಎಂದು ಎಚ್ಚರಿಕೆಯ ಮಾತುಗಳನ್ನಾಡಿದ್ದಾರೆ.

ಇದೇ ವೇಳೆ ಸಚಿವ ಪ್ರಿಯಾಂಕ್ ಖರ್ಗೆ ಪರ ಬ್ಯಾಟಿಂಗ್ ಮಾಡಿದ ಬಾಲಕೃಷ್ಣ, ಪ್ರಿಯಾಂಕ್ ಖರ್ಗೆ ಸಚಿವರಾಗಿ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರ ವಿರುದ್ಧ ಯಾವುದೇ ಆಕ್ಷೇಪಣೆಗಳಿದ್ದರೆ ನ್ಯಾಯಾಲಯ ಅಥವಾ ಕಾನೂನಿನ ಮೂಲಕ ಹೋರಾಟ ನಡೆಸಲಿ ಎಂದು ಹೇಳಿದ್ದಾರೆ.

ಕೇಂದ್ರ ಸಚಿವರಾಗಿರುವ ಕುಮಾರಸ್ವಾಮಿ ತಮ್ಮ ಸ್ಥಾನಕ್ಕೆ ತಕ್ಕಂತೆ ಮಾತನಾಡಬೇಕು. ಸಣ್ಣಪುಟ್ಟ ವಿಚಾರಗಳಿಗೂ ಪ್ರತಿಕ್ರಿಯೆ ನೀಡುವ ಮೂಲಕ ರಾಜ್ಯ ನಾಯಕರಾಗಿರುವ ಪ್ರಿಯಾಂಕ್ ಖರ್ಗೆ ಅವರನ್ನು ರಾಷ್ಟ್ರಮಟ್ಟದ ನಾಯಕರನ್ನಾಗಿ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಪ್ರಿಯಾಂಕ್ ಖರ್ಗೆ ಯಾವುದೇ ಟೆನ್ಷನ್ ತೆಗೆದುಕೊಳ್ಳದೆ ತಾಳ್ಮೆಯಿಂದ ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದಾರೆ. ಆದರೆ ಕುಮಾರಸ್ವಾಮಿ ಮಾತ್ರ ಅನಗತ್ಯವಾಗಿ ಗಡಿಬಿಡಿಗೊಳ್ಳುತ್ತಿದ್ದಾರೆ ಎಂದು ಬಾಲಕೃಷ್ಣ ಟೀಕಿಸಿದ್ದಾರೆ.

Related Articles

Back to top button