
ಪ್ರಗತಿವಾಹಿನಿ ಸುದ್ದಿ: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೀದಿ ದೀಪ ಅಳವಡಿಯಲ್ಲಿ ಸಾಕಷ್ಟು ಲೋಪಗಳು ಕಂಡು ಬಂದಿದ್ದು, ಗುತ್ತಿಗೆದಾರರಿಗೆ ಭಾರಿ ಮೊತ್ತದ ದಂಡ ವಿಧಿಸಲಾಗಿದೆ.
ಸೆಪ್ಟೆಂಬರ್ 01 ರಿಂದ 23 ರ ಅವಧಿಯಲ್ಲಿ ಸಾರ್ವಜನಿಕ ದೂರುಗಳಿಗೆ ಸಮರ್ಪಕವಾಗಿ ದುರಸ್ತಿ ಕಾರ್ಯ ನಡೆಸದ ವಿವಿಧ ಗುತ್ತಿಗೆದಾರರಿಗೆ ಒಟ್ಟು 13 ಲಕ್ಷ ರೂ. ದಂಡ ವಿಧಿಸಲಾಗಿದೆ, ಎಂದು ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತರಾದ ಕೆಎನ್ ರಮೇಶ್ ತಿಳಿಸಿದರು.
‘ಸಹಾಯ’ ಆ್ಯಪ್ ಮುಖಾಂತರ ಸಾರ್ವಜನಿಕರಿಂದ ದಾಖಲಾದ ದೂರುಗಳನ್ನು ಪರಿಶೀಲಿಸಿದಾಗ ಗುತ್ತಿಗೆದಾರರ ಲೋಪ ಬೆಳಕಿಗೆ ಬಂದಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸಚಿವ ಕೃಷ್ಣ ಭೈರೇಗೌಡ ಆದೇಶದಂತೆ ಪಾಲಿಕೆ ವ್ಯಾಪ್ತಿಯಲ್ಲಿ ಬೀದಿದೀಪಗಳ ಸಮರ್ಪಕ ನಿರ್ವಹಣೆಗಾಗಿ ರಾತ್ರಿ ವೇಳೆಯ ತಪಾಸಣೆ ಕೈಗೊಳ್ಳಲಾಗಿತ್ತು. ಈ ವೇಳೆ ಗುತ್ತಿಗೆದಾರರ ಲೋಪ ಬೆಳಕಿಗೆ ಬಂದಿದೆ.
ಸಾರ್ವಜನಿಕರ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕೆ ಧಕ್ಕೆಯಾಗುವಂತಹ ಕತ್ತಲೆ ಪ್ರದೇಶಗಳು ಉಂಟಾಗಲು ಕಾರಣರಾದ ಹಿನ್ನೆಲೆಯಲ್ಲಿ, ನಿರ್ವಹಣಾ ಒಪ್ಪಂದದ ನಿಯಮಗಳನ್ವಯ ಸಂಬಂಧಪಟ್ಟ ಗುತ್ತಿಗೆದಾರರಿಗೆ ಒಟ್ಟು 13,00,753 ರೂ. ದಂಡ ವಿಧಿಸಲಾಗಿದೆ.
ಗುತ್ತಿಗೆದಾರರಿಗೆ ವಿಧಿಸಲಾದ ದಂಡದ ವಿವರ ಈ ಕೆಳಗಿನಂತಿದೆ:
- M/s. Effilume Pvt. Ltd. ಸಂಸ್ಥೆಗೆ: ರೂ. 3,29,199.00
- M/s. Spectrum Tool Engineers Pvt. Ltd. ಸಂಸ್ಥೆಗೆ: ರೂ. 9,56,955.00
- M/s. Transglobal Power Ltd. ಸಂಸ್ಥೆಗೆ: ರೂ. 14,599.00
- ಒಟ್ಟು ದಂಡದ ಮೊತ್ತ: 13,00,753.00 ರೂ.*
ಪಾಲಿಕೆ ವ್ಯಾಪ್ತಿಯಲ್ಲಿನ ಕತ್ತಲೆ ಪ್ರದೇಶಗಳನ್ನು ಕೂಡಲೇ ನಿವಾರಿಸಿ, ಹಾಳಾಗಿರುವ ಎಲ್ಲಾ ಎಲ್ಇಡಿ ಬೀದಿದೀಪಗಳನ್ನು ತಕ್ಷಣ ದುರಸ್ತಿಪಡಿಸಬೇಕು ಎಂದು ಆಯುಕ್ತರು ಸೂಚನೆ ನೀಡಿದ್ದಾರೆ.




