Karnataka NewsUncategorized

ಬೀದಿ ಬದಿಯ ಮರಗಳಿಗೆ ಎರವಾಗುತ್ತಿದೆ ಅಜ್ಞಾನ- ಅತಿ ಜಾಣತನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪಾರಿಸರಿಕ ಅನಾಹುತಗಳ ವೃಕ್ಷ ಸಂಪತ್ತು ಬೆಳೆಸುವ ಪ್ರಜ್ಞೆ ಇದೀಗ ತೀರ ಸಾಮಾನ್ಯ. ಚಿಕ್ಕ ಮಕ್ಕಳಲ್ಲೂ ಈ ಕುರಿತ ಅರಿವಿದೆ.  ವೃಕ್ಷಗಳನ್ನು ನೆಟ್ಟು, ಬೆಳೆಸಿಯೇ ಇಂದು ಸಮಾಜದಲ್ಲಿ ಗೌರವಯುತ ಸ್ಥಾನಮಾನ ಹೊಂದಿರುವ ಸಾಧಕರು ನಮ್ಮಲ್ಲಿ ಅಸಂಖ್ಯಾತರಿದ್ದಾರೆ.

ಆದರೆ ಬೆಳಗಾವಿ ಮಹಾನಗರದಲ್ಲಿ ಕೆಲವರ ‘ಅತಿ ಜಾಣತನ’, ಇನ್ನು ಕೆಲವರ ಅಜ್ಞಾನ ಬೀದಿ ಬದಿ ಮರಗಳ ಪಾಲಿಗೆ ಮೃತ್ಯುವಾಗುತ್ತಿವೆ.

ಸುಶಿಕ್ಷಿತ ಜನರೇ ಮನೆಯೆದುರಿನ ಮರಗಳನ್ನು ಶತ್ರುವೋ, ಅನಿಷ್ಟವೋ ಎಂಬಂತೆ ಕಾಣುತ್ತಿರುವುದು, ತೀರ ಹೀನಾಯ ರೀತಿಯಲ್ಲಿ ಅವುಗಳನ್ನು ನಾಶಗೊಳಿಸುವ ಕೃತ್ಯಕ್ಕೆ ಇಳಿಯುತ್ತಿರುವುದು ನಾಗರಿಕ ಜಗತ್ತಿನ ನಾಚಿಕೆಗೇಡಿ ಸಂಗತಿ ಎನಿಸದೆ ಇರಲಾರದು.

ಮಲೆನಾಡ ಸೆರಗಿನ ಕುಂದಾನಗರಿ ಒಂದೆಡೆ ಕಾಂಕ್ರಿಟ್ ನಗರವಾಗಿ ಬೆಳೆಯುತ್ತಿದ್ದರೂ ಸಾಕಷ್ಟು ಪ್ರಮಾಣದ ಹಸಿರಿನ ಸಿರಿಯನ್ನು ಇಂದಿಗೂ ಉಳಿಸಿಕೊಂಡು ಬಂದಿದೆ. ಬಹುತೇಕ ಎಲ್ಲ ಪ್ರದೇಶಗಳಲ್ಲಿ, ಬಡಾವಣೆಗಳಲ್ಲಿ ರಸ್ತೆಯಂಚಿನ ಮನೆಗಳ ಎದುರು ಸಾಲುಮರಗಳು   ಕಾಣಸಿಗುತ್ತವೆ.

ವಿಷಾದದ ಸಂಗತಿ ಎಂದರೆ ಕೆಲ ಪ್ರತಿಷ್ಠಿತರು, ಸುಶಿಕ್ಷಿತರೇ ಕೆಲವೆಡೆ ಬೆಳೆದು ನಿಂತ ಈ ವೃಕ್ಷಗಳಿಗೆ ಕಂಟಕವಾಗಿ ಪರಿಣಮಿಸುತ್ತಿದ್ದಾರೆ. ಈ ಮರಗಳು ತಮ್ಮ ಮನೆಯ ಆವರಣದ ಎದುರು ವ್ಯಾಪಕ ಪ್ರಮಾಣದ ಎಲೆಗಳನ್ನು ಉದುರಿಸುತ್ತವೆ ಎಂಬ ಕಾರಣ ಕೆಲವರದಾದರೆ ಇನ್ನಷ್ಟು ಜನ ಈ ಮರಗಳಿದ್ದರೆ ಹಾದಿಯಲ್ಲಿ ಹೋಗುವ ಜನರಿಗೆ ತಮ್ಮ ಮನೆಯ ಚೆಂದ ಕಾಣುವುದಿಲ್ಲ ಎಂಬ ಕಾರಣಕ್ಕೆ ಅವುಗಳ ಪಾಲಿಗೆ ಶತ್ರುವಾಗುತ್ತಾರೆ.

ಒಂದಿಷ್ಟು ಜನ ಮರ ಕಡಿಯುವವರನ್ನು ಕರೆದು ಅವುಗಳನ್ನು ಸಂಪೂರ್ಣವಾಗಿ ಕತ್ತರಿಸಿ ಎಸೆಯುತ್ತಾರೆ. ಇಷ್ಟಕ್ಕೇ ಬಿಡದೆ, ಅವು ಮತ್ತೆ ಚಿಗುರಕೂಡದೆಂಬ ಕಾರಣಕ್ಕೆ ಉಳಿದ ಬುಡಕ್ಕೆ ಬೆಂಕಿ ಹಾಕಿ ಅದನ್ನು ನಿರ್ನಾಮ ಮಾಡುತ್ತಾರೆ. ಇಂಥವರಲ್ಲಿ ಪ್ರತಿಷ್ಠಿತರು, ಸುಶಿಕ್ಷಿತರೇ ಹೆಚ್ಚಿರುವುದು ದುರ್ದೈವ.

ಈ ಬಗೆಯ ಹತ್ತು ಹಲವು ಕುರುಹುಗಳು ರಸ್ತೆ ಪಕ್ಕದಲ್ಲೇ ಕಂಡುಬಂದರೂ ಆ ಬಗ್ಗೆ ಕಾಳಜಿ ವಹಿಸುವವರು, ಕ್ರಮ ಕೈಗೊಳ್ಳುವವರು ಯಾರೂ ಇಲ್ಲ.

 ಸ್ಚಚ್ಛತಾ ಕಾರ್ಯದ ವೇಳೆಯೂ ನಾಶ:

ನಗರದಲ್ಲಿ ನಿತ್ಯ ಬೆಳಗಿನ ಹೊತ್ತಿಗೆ ಸ್ವಚ್ಛತಾ ಕಾರ್ಯ ನಡೆಯುತ್ತದೆ. ಆದರೆ ಕೆಲ ಸ್ವಚ್ಛತಾ ಕರ್ಮಿಗಳು ಕಸ ಎತ್ತಿಕೊಂಡು ಹೋಗುವ ಬೇಸರಕ್ಕೆ ಅದನ್ನು ಅಲ್ಲೇ ಮರದಡಿ ಒಟ್ಟು ಹಾಕಿ ಬೆಂಕಿ ಹಾಕುತ್ತಿದ್ದಾರೆ. ಇದು ಸಹ ವೃಕ್ಷಗಳ ವಿಷಯದಲ್ಲಿನ ಅಮಾನವೀಯ ಕೃತ್ಯಗಳಿಗೆ ಕಾರಣವಾಗುತ್ತಿದೆ.

ಮಹಾಂತೇಶನಗರದಲ್ಲಿ ಇದೇ ರೀತಿ ಮರವೊಂದರ ಅಡಿ ಬೆಂಕಿ ಹಾಕಿದ ಪರಿಣಾಮ ಇತ್ತೀಚೆಗೆ ಅದು ಉರುಳಿ ಮನೆಯೊಂದರ ಮೇಲೆ ಬಿದ್ದಿತ್ತು. ಅದೃಷ್ಟವಶಾತ್ ಮನೆಯಲ್ಲಿದ್ದವರು ಬಚಾವಾಗಿದ್ದರು. ಅದೇ ಜಾಗದಲ್ಲಿ ಇನ್ನೊಂದು ಬೃಹತ್ ಮರದಡಿ ಬೆಂಕಿ ಆಟ ಶುರುವಾಗಿದ್ದು ಅದೇನಾದರೂ ಶಿಥಿಲಗೊಂಡರೆ ಎರಡು ದೊಡ್ಡ ಮನೆಗಳ ಮೇಲೆ ಎರಗಲಿದೆ.

ವೃಕ್ಷಗಳ ರಕ್ಷಣೆಯಾಗಲಿ:

ಹಲವಾರು ವರ್ಷಗಳ ಕಾಲ ತಪ್ಪಸ್ಸಿನ ಫಲದಂತೆ ಬೆಳೆದು ನಿಂತಿರುವ ಮರಗಳ ನಾಶವನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಹೊಸ ಗಿಡಗಳು ಮತ್ತೆ ಬೆಳೆದು ಮರವಾಗುವುದು ಒಂದೆರಡು ದಿನ, ತಿಂಗಳು, ವರ್ಷದ ಮಾತಲ್ಲ.

ಹೀಗಾಗಿ ಇಂಥ ಕೃತ್ಯಗಳಿಗೆ ಕಡಿವಾಣ ಹಾಕುವಂತೆ ಅನೇಕ ಪರಿಸರ ಪ್ರೇಮಿಗಳು ಒತ್ತಾಯಿಸಿದ್ದಾರೆ. ಮಹಾನಗರ ಪಾಲಿಕೆ ತನ್ನ ಸ್ವಚ್ಛತಾ ಕಾರ್ಮಿಕರಿಗೆ ಈ ಬಗ್ಗೆ ಸೂಚನೆ ನೀಡಬೇಕು. ಅರಣ್ಯ ಇಲಾಖೆ ಕೂಡ ನಗರದ ಬೀದಿಗಳಲ್ಲಿ ಬುಡ ಸಹಿತ ಕಡಿದ, ಸುಟ್ಟುಹಾಕಿದ ಮರಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಕ್ರಮ ಕೈಗೊಳ್ಳಬೇಕು. ವೃಕ್ಷಗಳಡಿ ಬೆಂಕಿ ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಪರಿಸರ ರಕ್ಷಣೆ ಬರಿ ಬಾಯಿಮಾತಿನ ಕ್ರಮವಾಗದೆ, ಕಟ್ಟುನಿಟ್ಟಾಗಿ ಜಾರಿಗೆ ತರಲು ಅಧಿಕಾರಿಗಳು ಮುಂದಾಗಬೇಕು ಎಂಬ ಒತ್ತಾಯಗಳು ಕೇಳಿಬಂದಿವೆ.

ಮರಗಳ ನಾಶಕ್ಕೆ ಕಾರಣವಾಗುವ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಈ ಬಗ್ಗೆ ಪರಿಶೀಲನೆ ನಡೆಸಿ ಇಂಥ ಕೃತ್ಯಗಳಿಗೆ ಕಡಿವಾಣ ಹಾಕಲಾಗುವುದು. ತಪ್ಪಿತಸ್ಥರಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. 

ಎಂ.ಬಿ. ಕುಸನಾಳ ಎಸಿಎಫ್

*ಪತ್ನಿಯನ್ನು ಕೊಚ್ಚಿ ಕೊಲೆಗೈದ ಪತಿ ಎಸ್ಕೇಪ್*

https://pragati.taskdun.com/husbandwifemurdermandya/

*ರೈಲಿಗೆ ಸಿಲುಕಿ ಇಬ್ಬರು ಮಹಿಳೆಯರ ದುರ್ಮರಣ*

https://pragati.taskdun.com/railway-tracktwo-womandeathmandya/

*PSI ಹಗರಣ; ರುದ್ರೇಗೌಡ ಪಾಟೀಲ್ ನಿಂದ ಮತ್ತಷ್ಟು ಆಡೀಯೋ ಬಿಡುಗಡೆ*

https://pragati.taskdun.com/psi-scamrudregowda-patilcid-officersaudio-release/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button