Latest

ಅವೇಳೆಯಲ್ಲಿ ಮುಷ್ಕರ; ಸಾರ್ವಜನಿಕರ ಸಹಾನುಭೂತಿ ಕಳೆದುಕೊಂಡ ಸಾರಿಗೆ ಸಿಬ್ಬಂದಿ

ಪ್ರಗತಿವಾಹಿನಿ ಕಳಕಳಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಸಾರ್ವಜನಿಕರ ಸಹಕಾರ, ಸಹಾನುಭೂತಿಯಿಂದ ನಡೆಯುವ ಮುಷ್ಕರ ಯಶಸ್ಸು ಕಾಣುತ್ತದೆ. ಸಾರ್ವಜನಿಕರ ಸಹಾನುಭೂತಿ ಕಳೆದುಕೊಂಡರೆ ಮುಷ್ಕರ ವಿಫಲವಾಗುತ್ತದೆ. ಅದು ತಾತ್ಕಾಲಿಕವಲ್ಲ, ಶಾಶ್ವತವಾಗಿ ಅಂತಹ ಸಂಘಟನೆಗಳು ಪರಿಣಾಮ ಎದುರಿಸಬೇಕಾಗುತ್ತದೆ.

ಪ್ರಸ್ತುತ ನಡೆಯುತ್ತಿರುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿ ಮುಷ್ಕರ ಸಾರ್ವಜನಿಕರ ಸಹಾನುಭೂತಿ ಗಳಿಸುವಲ್ಲಿ ಯಶಸ್ಸು ಕಂಡಂತಿಲ್ಲ. ಇದಕ್ಕೆ ಕಾರಣ, ಮುಷ್ಕರದ ಕಾರಣ ಸರಿ ಇಲ್ಲ ಎಂದಲ್ಲ, ಆದರೆ ಮುಷ್ಕರ ನಡೆಸುತ್ತಿರುವ ಸಮಯ ಸರಿ ಇಲ್ಲ ಎನ್ನುವುದು.

ಕೊರೋನಾದಿಂದಾಗಿ ರಾಜ್ಯ ತತ್ತರಿಸಿದೆ. ಕೊರೋನಾ ವೇಳೆಯಲ್ಲಿ ಬಸ್ ಗಳು ಸಂಚರಿಸದೆ ಹೆಚ್ಚುಕಡಿಮೆ ವರ್ಷಗಳ ಕಾಲ ಆದಾಯ ಇಲ್ಲದಾಗಿದೆ. ಆದಾಗ್ಯೂ ರಾಜ್ಯ ಸರಕಾರ ಸಿಬ್ಬಂದಿ ಸಂಬಳ ನಿಲ್ಲಿಸಿಲ್ಲ. ಎಲ್ಲಿಂದಲೋ ಹಣ ಹೊಂದಿಸಿ ಸಂಬಳ ನೀಡಿದೆ. ಸಾರಿಗೆ ನಿಗಮ ಸಂಕಷ್ಟದಲ್ಲಿದೆ. ಸಧ್ಯಕ್ಕೆ ಸಂಬಳವಾದರೂ ಬರುತ್ತಿದೆಯಲ್ಲ ಎಂದು ಸಿಬ್ಬಂದಿ ಸುಮ್ಮನಿರಬೇಕಿತ್ತು. ಪರಿಸ್ಥಿತಿ ಸರಿಯಾದ ನಂತರ ಬೇಡಿಕೆ ಮುಂದಿಟ್ಟು ಈಡೇರದಿದ್ದರೆ ಮುಷ್ಕರದ ಹಾದಿ ಹಿಡಿಯಬೇಕಿತ್ತು.

ಕಳೆದ ಡಿಸೆಂಬರ್ ನಲ್ಲಿ ಮುಷ್ಕರ ನಡೆಸಿದ ಸಿಬ್ಬಂದಿ 9 ಬೇಡಿಕೆ ಮುಂದಿಟ್ಟಿದ್ದರು. ಅವುಗಳಲ್ಲಿ 8ನ್ನು ಸರಕಾರ ಈಡೇರಿಸಿದೆ. ಈಗ ಅವರ ಒಂದೇ ಬೇಡಿಕೆ 6ನೇ ವೇತನ ಆಯೋಗದ ವರದಿ ಜಾರಿಗೊಳಿಸಬೇಕೆನ್ನುವುದು. ಅದು ತಪ್ಪು ಎಂದೇನಲ್ಲ. ಬೇರೆ ಉದ್ಯೋಗಿಗಳಿಗೆ ಹೋಲಿಸಿದರೆ ಸಾರಿಗೆ ನಿಗಮದ ಸಿಬ್ಬಂದಿ ಸಂಬಳ ಕಡಿಮೆ ಇದೆ ಎನ್ನುವ ಮಾತಿದೆ. ಹಾಗಾಗಿ ಅವರು ವೇತನ ಹೆಚ್ಚಳಕ್ಕೆ ಬೇಡಿಕೆ ಇಡುವುದು ತಪ್ಪಲ್ಲ. ಆದರೆ ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಮುಷ್ಕರದ ಹಾದಿ ಹಿಡಿಯಬಾರದಿತ್ತು. ಈ ಅವೇಳೆಯಲ್ಲಿ ಮುಷ್ಕರ ಆರಂಭಿಸಿದ್ದರಿಂದ ಸಾರ್ವಜನಿಕರ ಬೆಂಬಲ ಸಿಗುತ್ತಿಲ್ಲ.

Home add -Advt

ಇನ್ನು ರಾಜ್ಯದಲ್ಲಿ ಉಪಚುನಾವಣೆ ನಡೆಯುತ್ತಿದೆ. ಪರೀಕ್ಷೆಗಳು ನಡೆಯುತ್ತಿವೆ. ಜನರು, ಕಾರ್ಮಿಕರು ಕೆಲಸ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಮುಷ್ಕರಕ್ಕೆ ಇಳಿದಿರುವುದು ಸಮರ್ಥನೀಯವೆನಿಸುವುದಿಲ್ಲ.

ಈಗ ಸಾರಿಗೆ ಸಿಬ್ಬಂದಿ ನಡೆಸುತ್ತಿರುವ ಮುಷ್ಕರಕ್ಕೆ ಜನರ ಸಹಾನುಭೂತಿ ಸಿಗುತ್ತಿಲ್ಲ. ಮುಷ್ಕರ ಮುಂದುವರಿದಲ್ಲಿ ಜನರ ಆಕ್ರೋಶಕ್ಕೆ ತುತ್ತಾಗುತ್ತಾರೆ. ಜನ ರೊಚ್ಚಿಗೆದ್ದರೆ ಮುಂದೆ ಎಂದೂ ಮುಷ್ಕರಕ್ಕಿಳಿಯದಂತಹ ಪರಿಸ್ಥಿತಿ ಎದುರಾಗಬಹುದು. ನ್ಯಾಯಯುತವಾದ ಬೇಡಿಕೆಯನ್ನು ಮುಂದಿಡಲಾಗದಂತಹ ಪರಿಸ್ಥಿತಿ ಎದುರಾಗಬಹುದು.

ಹಾಗಾಗಿ ಆದಷ್ಟು ಬೇಗ ಮುಷ್ಕರ ನಿಲ್ಲಿಸಿ, ಕೆಲಸಕ್ಕೆ ಹಾಜರಾಗುವುದು ಒಳಿತು. ಎಲ್ಲವೂ ತಿಳಿಯಾದ ನಂತರ ಸರಕಾರಕ್ಕೆ ಗುಡುವು ನೀಡಿ ಮುಷ್ಕರ ಆರಂಭಿಸಬಹುದು. ಇದು ಪ್ರಗತಿವಾಹಿನಿ ಕಳಕಳಿ.

 

ಮುಷ್ಕರ ನಿರತರಿಗೆ, ಖಾಸಗಿ ವಾಹನಗಳಿಗೆ ಸಿಎಂ ಯಡಿಯೂರಪ್ಪ ವಾರ್ನಿಂಗ್

ಮುಷ್ಕರ ನಿರತ ಸಾರಿಗೆ ನೌಕರರಿಗೆ ಬಿಗ್ ಶಾಕ್

Related Articles

Back to top button