ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಹಳ್ಳಿ ಹಳ್ಳಿ ಸುತ್ತಿ ಜನರಿಗೆ ಔಷಧ ನೀಡುವ ವೈದ್ಯರೊಬ್ಬರು ಜ್ವರಕ್ಕಾಗಿ ನೀಡಿದ ಇಂಜೆಕ್ಸನ್ ದಿಂದಾಗಿ ಬೆಳಗಾವಿಯ ರಜಪೂತ ಬಂಧು ಹೈಸ್ಕೂಲಿನ 8 ನೇ ವರ್ಗದ ವಿದ್ಯಾರ್ಥಿ ಸಾವಿಗೀಡಾಗಿದ್ದಾನೆ.
ವಿಕಾಸ ಭೀಮರಾವ್ ಜಕ್ಕಾವಿ ಎಂಬ ವಿದ್ಯಾರ್ಥಿ ಶುಕ್ರವಾರ ಮಧ್ಯಾನ್ಹ 3 ಗಂಟೆಗೆ ಕೆ ಎಲ್ ಇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ವಿದ್ಯಾರ್ಥಿಯು ಕಳೆದ ಬುಧವಾರ ತನ್ನ ಅಜ್ಜಿಯ ಗ್ರಾಮವಾದ ಹುಕ್ಕೇರಿ ತಾಲೂಕಿನ ಬಿದರೊಳ್ಳಿಗೆ ಹೋದಾಗ ಅವನಿಗೆ ತೀವ್ರ ಜ್ವರ ಬಂತು. ಅಂದು ಆ ಹಳ್ಳಿಗೆ ಬಂದಿದ್ದ ವೈದ್ಯರೊಬ್ಬರು ವಿಕಾಸನಿಗೆ ಎರಡು ಇಂಜೆಕ್ಷನ್ ಕೊಟ್ಟು ಹೋದರು.
ಮರುದಿನ, ಗುರುವಾರ ವಿಕಾಸ ಅಜ್ಜಿಯ ಜೊತೆಗೆ ಸವದತ್ತಿಯ ಯಲ್ಲಮ್ಮ ಗುಡ್ಡಕ್ಕೆ ಹೋಗಿದ್ದ.ಇಂಜೆಕ್ಷನ್ ಮಾಡಿದ ಚಪ್ಪೆಯು ಕಪ್ಪಗಾಗಿ ಬಾತುಕೊಂಡಿತು. ಗಾಬರಿಯಾಗಿ ಅದರ ಮೇಲೆ ಯಾವುದೋ ಔಷಧ ಹಚ್ಚಿದ್ದಾರೆ. ಸ್ವಲ್ಪ ಹೊತ್ತಿಗೆ ವಿಕಾಸನ ಕಾಲುಗಳೆರಡೂ ನಿತ್ರಾಣವಾಗಿವೆ.
ಶುಕ್ರವಾರ ಮಧ್ಯಾನ್ಹ 12 ಗಂಟೆಗೆ ಕೆ ಎಲ್ ಇ ಆಸ್ಪತ್ರೆಗೆ ಅವನನ್ನು ಸೇರಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಧ್ಯಾನ್ಹ 3 ಗಂಟೆಗೆ ವಿಕಾಸ ಸಾವನ್ನಪ್ಪಿದ್ದಾನೆ. ವಿಕಾಸನ ತಂದೆ ಭೀಮರಾವ್ ಅವರು ಟಿಳಕವಾಡಿಯ ಹೊಟೆಲ್ ನಿಯಾಜ್ ದಲ್ಲಿ ಕೆಲಸಕ್ಕಿದ್ದಾರೆ. ಅವರು ಯಮಕನಮರ್ಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ