*ರಾಜ್ಯದಲ್ಲಿ ಮತ್ತೊಂದು ಘಟನೆ: ಮಗುವಿಗೆ ಜನ್ಮ ನೀಡಿದ 9ನೇ ತರಗತಿ ವಿದ್ಯಾರ್ಥಿನಿ*

ಪ್ರಗತಿವಾಹಿನಿ ಸುದ್ದಿ: 9ನೇ ತರಗತಿಯ ಮತ್ತೋರ್ವ ವಿದ್ಯಾರ್ಥಿನಿ ಹೆರಿಗೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಯಾದಗಿರಿಯಲ್ಲಿ ವಸತಿ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿದ್ದ ಘಟನೆ ಬೆನ್ನಲ್ಲೇ ಬಾಗಲಕೋಟೆಯಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅಪ್ರಾಪ್ತ ಬಾಲಕನೇ ಅತ್ಯಾಚಾರವೆಸಗಿ ಗರ್ಭವತಿಯನ್ನಾಗಿಸಿರುವ ಘಟನೆ ನಡೆದಿದೆ. ಇದರ ಬೆನ್ನಲ್ಲೇ ಇದೀಗ ಶಿವಮೊಗ್ಗದಲ್ಲಿ ಹೈಸ್ಕೂಲು ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿದ್ದಾಳೆ.
ಶಿಕ್ಷಣ ಸಚಿವರ ತವರು ಜಿಲ್ಲೆಯಲ್ಲೇ ಈ ಘಟನೆ ನಡೆದಿದೆ. 9ನೇ ತರಗತಿಯ ಸರ್ಕಾರಿ ಶಾಲೆ ವಿದ್ಯಾರ್ಥಿನಿಗೆ ಹೆರಿಗೆಯಾಗಿದೆ. ಕಾಮುಕನೊಬ್ಬ ವಿದ್ಯಾರ್ಥಿನಿಯನ್ನು ಗರ್ಭವತಿಯನ್ನಾಗಿಸಿದ್ದು, ವಿದ್ಯಾರ್ಥಿನಿ ಏಳು ತಿಂಗಳಿಗೆ ಹೆರಿಗೆಯಾಗಿದ್ದಾಳೆ.
ಮನೆಯಲ್ಲಿ ಅಜ್ಜಿಯೊಬ್ಬರು ಬಾಲಕಿಗೆ ಹೆರಿಗೆ ಮಾಡಿಸಿದ್ದಾರೆ. ಮಗು ಹಾಗೂ ತಾಯಿ ಇಬ್ಬರನ್ನೂ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿದ್ಯಾರ್ಥಿನಿ ಸ್ಥಿತಿಗೆ ಕಾರಣನಾದವನ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿದ್ದು, ಆರೋಪಿ ಪತ್ತೆಗಾಗಿ ಪೊಲಿಸರು ಹುಡುಕಾಡುತ್ತಿದ್ದಾರೆ.