
ಪ್ರಗತಿವಾಹಿನಿ ಸುದ್ದಿ: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲ್ಲೂಕಿನಲ್ಲಿ ಹೃದಯಾಘಾತದಿಂದ 22 ವರ್ಷದ ವಿದ್ಯಾರ್ಥಿನಿಯೊಬ್ಬರು ಮೃತಪಟ್ಟಿರುವ ದುರ್ಘಟನೆ ನಡೆದಿದೆ.
ಮೃತ ವಿದ್ಯಾರ್ಥಿನಿಯನ್ನು ದಿಶಾ (22) ಎಂದು ಗುರುತಿಸಲಾಗಿದೆ. ದಿಶಾ ಶೃಂಗೇರಿಯ ಜೆಸಿಬಿಎಂ ಕಾಲೇಜಿನಲ್ಲಿ ಅಂತಿಮ ಬಿಕಾಂ ವ್ಯಾಸಂಗ ಮಾಡುತ್ತಿದ್ದು, ಶೃಂಗೇರಿ ಪಟ್ಟಣದ ಬಿಸಿಎಂ ಹಾಸ್ಟೆಲ್ನಲ್ಲಿ ವಾಸವಾಗಿದ್ದರು.
ಮಂಗಳವಾರ ಹಾಸ್ಟೆಲ್ನಲ್ಲಿದ್ದ ವೇಳೆ ಹಠಾತ್ ತೀವ್ರ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದಾರೆ. ತಕ್ಷಣ ಸಹಪಾಠಿಗಳು ನೆರವಿಗೆ ಧಾವಿಸಿದರೂ, ದಿಶಾ ಕೊನೆಯುಸಿರೆಳೆದಿದ್ದಾರೆ.
ಮೃತ ದಿಶಾ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನವರಾಗಿದ್ದಾರೆ. ಅಕಾಲಿಕ ಸಾವಿನ ಸುದ್ದಿ ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಕುಟುಂಬದವರಲ್ಲಿ ತೀವ್ರ ದುಃಖ ಮತ್ತು ಆಘಾತವನ್ನುಂಟುಮಾಡಿದೆ.
ಘಟನೆ ಸಂಬಂಧ ಶೃಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ. ಓದಿನಲ್ಲೂ ದಿಶಾ ಮುಂದಿದ್ದರು. ಸಹಪಾಠಿಗಳ ಜತೆ ಅತ್ಯಂತ ಸ್ನೇಹದಿಂದ ಇರುತ್ತಿದ್ದರು. ಏಕಾಏಕಿ ಹೃದಯಾಘಾತಕ್ಕೆ ಬಲಿಯಾಗಿರೋದು ಎಲ್ಲರನ್ನೂ ತೀವ್ರ ದುಃಖಕ್ಕೆ ದೂಡಿದೆ.




