
ಪ್ರಗತಿವಾಹಿನಿ ಸುದ್ದಿ: 17 ವರ್ಷದ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿ ಮೇಲೆಯೇ ಗುಂಡಿನ ದಾಳಿ ನಡೆಸಿರುವ ಘಟನೆ ನಡೆದಿದೆ.
ಎರಡು ತಿಂಗಳ ಹಿಂದೆ ನಡೆದ ಘಟನೆಯೊಂದಕ್ಕೆ ಸೇಡು ತೀರಿಸಿಕೊಳ್ಳಲು ತನ್ನ ತಂದೆಯ ಪಿಸ್ತೂಲ್ ಬಳಸಿರುವ ವಿದ್ಯಾರ್ಥಿ ಇನ್ನೋರ್ವ ವಿದ್ಯಾರ್ಥಿಯ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಗುಂಡೇಟಿನಿಂದ ಗಾಯಗೊಂದಿರುವ ವಿದ್ಯಾರ್ಥಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ.
ದೆಹಲಿಯ ಎನ್ ಸಿ ಆರ್ ವ್ಯಾಪ್ತಿಯ ಗುರುಗ್ರಾಮ್ ನಗರದ ಸೆಕ್ಟರ್ 48 ರಲ್ಲಿ ಈ ಘಟನೆ ನಡೆದಿದೆ. ಪ್ರಕರಣದಲ್ಲಿ 17 ವರ್ಷದ ಆರೋಪಿಯನ್ನು ಬಂಧಿಸಿದ್ದು, ಈತನ ಸ್ನೇಹಿತನನ್ನೂ ವಶಕ್ಕೆ ಪಡೆಯಲಾಗಿದೆ. ಗಾಯಾಳು ವಿದ್ಯಾರ್ಥಿ 11ನೇ ತರಗತಿಯವನಾಗಿದ್ದಾನೆ. ಸ್ನೇಹಿತರು ಕರೆ ಮಾಡುತ್ತಿದ್ದಾರೆ ಎಂದು ಮನೆಯಿಂದ ಹೊರ ಹೋದಾಗ ಆತನನ್ನು ಖೇರ್ಕಿ ದೌಲಾ ಟೋಲ್ ಪ್ಲಾಜಾಗೆ ಕರೆದುಕೊಂಡು ಹೋಗಿದ್ದು ಬಳಿಕ ಅಲ್ಲಿಂದ ಆರೋಪಿ ತನ್ನ ಬಾಡಿಗೆ ಮನೆಗೆ ಕರೆದೊಯ್ದಿದ್ದಾನೆ. ಈ ವೇಳೆ ಆರೋಪಿ ತನ್ನ ತಂದೆಯ ಪಿಸ್ತೂಲ್ ನಿಂದ ಗುಂಡಿನ ದಾಳಿ ನಡೆಸಿದ್ದಾನೆ. ಇದಕ್ಕೆ ಆತನ ಸ್ನೇಹಿತ ಕೂಡ ಸಾಥ್ ನೀಡಿದ್ದಾನೆ.




