ಪ್ರಗತಿವಾಹಿನಿ ಸುದ್ದಿ ಖಾನಾಪುರ:
ತಾಲೂಕಿನ ರಾಜವಾಳ ಗೌಳಿವಾಡಾ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಸೋಮವಾರ ತಮ್ಮ ಪಾಲಕರು, ಎಸ್.ಡಿ.ಎಂ.ಸಿ ಪದಾಧಿಕಾರಿಗಳು ಮತ್ತು ಗ್ರಾಮಸ್ಥರೊಂದಿಗೆ ಪಟ್ಟಣದ ಬಿಇಒ ಕಚೇರಿಗೆ ಮುತ್ತಿಗೆ ಹಾಕಿ ದಿನವಿಡೀ ಪ್ರತಿಭಟನೆ ನಡೆಸಿದರು.
ಇದಕ್ಕೂ ಮುನ್ನ ವಿದ್ಯಾರ್ಥಿಗಳು ಪಟ್ಟಣದ ಶಿವಸ್ಮಾರಕ ವೃತ್ತದಿಂದ ಬಿಇಒ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಬಿಇಒ ಕಚೇರಿ ಮುಂಭಾಗದಲ್ಲಿ ಪ್ರಾರ್ಥನೆ ನಡೆಸಿ ರಾಷ್ಟ್ರಗೀತೆ, ನಾಡಗೀತೆ ಹಾಡಿದರು. ಬಳಿಕ ಮಕ್ಕಳೇ ಮಾತನಾಡಿ ತಮ್ಮ ಶೈಕ್ಷಣಿಕ ಸಮಸ್ಯೆಗಳ ಬಗ್ಗೆ ವಿವರಿಸಿದರು. ಜೊತೆಗೆ ದಿನವಿಡೀ ಬಿಇಒ ಕಚೇರಿಯಲ್ಲೇ ಕುಳಿತು ಮಧ್ಯಾಹ್ನದ ಬಿಸಿಯೂಟ ತರಿಸಿ ಬಿಇಒ ಕೊಠಡಿಯ ಮುಂದೆ ಕುಳಿತು ಸೇವಿಸುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟಿಸಿದರು.
ತಮ್ಮೂರ ಶಾಲೆಯ ಶಿಕ್ಷಕರ ಸಮಸ್ಯೆ ಬಗ್ಗೆ ಬೆಳಕು ಚೆಲ್ಲಿದ ರಾಜವಾಳ-ಗೌಳಿವಾಡ ಗ್ರಾಮಸ್ಥರು, ಶಾಲೆಯಲ್ಲಿ ೮೬ ವಿದ್ಯಾರ್ಥಿಗಳಿದ್ದು, ಕಳೆದ ಎರಡು ವರ್ಷಗಳಿಂದಲೂ ಈ ಶಾಲೆಯಲ್ಲಿ ಶಿಕ್ಷಕರ ಕೊರತೆಯಿತ್ತು. ಈ ಕುರಿತು ಶಾಲೆಯ ಎಸ್.ಡಿ.ಎಂ.ಸಿ ಹಲವು ಬಾರಿ ಬಿಇಒ ಕಚೇರಿಗೆ ಮನವಿ ಸಲ್ಲಿಸಿ ಶಾಲೆಗೆ ಹೆಚ್ಚುವರಿ ಶಿಕ್ಷಕರನ್ನು ನೇಮಕಗೊಳಿಸುವಂತೆ ಆಗ್ರಹಿಸಿತ್ತು. ಶಿಕ್ಷಕರ ಕೊರತೆಯ ನಡುವೆಯೂ ಕೆಲದಿನಗಳ ಹಿಂದೆ ಈ ಶಾಲೆಯ ಶಿಕ್ಷಕರ ಪೈಕಿ ಒಬ್ಬರನ್ನು ಲೋಂಡಾ ಶಾಲೆಗೆ ನಿಯೋಜನೆಗೊಳಿಸಿ ಆದೇಶಿಸಿದ್ದರು. ಈ ಆದೇಶದ ವಿರುದ್ಧ ಸಿಡಿದೆದ್ದ ವಿದ್ಯಾರ್ಥಿಗಳು ಸೋಮವಾರ ಬಿಇಒ ಕಚೇರಿಗೆ ಮುತ್ತಿಗೆ ಹಾಕಿ ತಮಗೆ ನ್ಯಾಯ ಕೊಡಿಸುವಂತೆ ಬಿಇಒ ಅವರನ್ನು ಆಗ್ರಹಿಸಿದರು.
ಈ ಸಂದರ್ಭದಲ್ಲಿ ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ ಬಿಇಒ ಉಮಾ ಬರಗೇರ, ಕೂಡಲೇ ಲೋಂಡಾ ಶಿಕ್ಷಕರ ನಿಯೋಜನೆ ರದ್ದುಪಡಿಸಿ ಮಂಗಳವಾರದಿಂದಲೇ ಅವರು ರಾಜವಾಳ ಗೌಳಿವಾಡ ಶಾಲೆಗೆ ಹಾಜರಾಗುವಂತೆ ತಿಳಿಸಲಾಗುತ್ತದೆ. ಜೊತೆಗೆ ಮತ್ತೋರ್ವ ಶಿಕ್ಷಕರನ್ನು ಒದಗಿಸಲಾಗುತ್ತದೆ ಎಂದರು.
ಆದರೆ ಬಿಇಒ ಅವರ ಮೌಖಿಕ ಉತ್ತರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಗ್ರಾಮಸ್ಥರು ಮತ್ತು ಎಸ್.ಡಿ.ಎಂ.ಸಿಯವರು ಈ ಕುರಿತು ಲಿಖಿತ ಆದೇಶ ನೀಡಿದರಷ್ಟೇ ಪ್ರತಿಭಟನೆ ಹಿಂಪಡೆಯುವುದಾಗಿ ಹೇಳಿದರು. ಇದಕ್ಕೆ ಮಣಿದ ಬಿಇಒ ಎರಡೂ ಶಿಕ್ಷಕರ ಆದೇಶವನ್ನು ಸಿದ್ಧಪಡಿಸಿ ಗೌಳಿವಾಡಾ ಶಾಲೆಗೆ ಮಂಗಳವಾರ ಹೋಗಿ ಹಾಜರಾಗುವಂತೆ ಶಿಕ್ಷಕರಿಗೆ ದೂರವಾಣಿ ಮೂಲಕ ತಿಳಿಸಿದರು. ಈ ಕುರಿತಾದ ತಮ್ಮ ಕಚೇರಿಯ ಆದೇಶದ ಪ್ರತಿಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷ ಬೀರು ಅವಣೆ ಅವರಿಗೆ ನೀಡಿದರು. ನಂತರ ಪ್ರತಿಭಟನೆ ಹಿಂಪಡೆದ ಎಸ್.ಡಿ.ಎಂ.ಸಿಯವರು, ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ತಮ್ಮೂರಿಗೆ ಹಿಂದಿರುಗಿದರು.
ಈ ಸಂದರ್ಭದಲ್ಲಿ ಮಾಜಿ ಜಿಪಂ ಸದಸ್ಯ ಪುಂಡಲೀಕ ಕಾರಲಗೇಕರ, ನಿವೃತ್ತ ಶಿಕ್ಷಕ ಅಬಾಸಾಹೇಬ ದಳವಿ, ಮುಖಂಡರಾದ ಪ್ರಕಾಶ ಚವಾಣ, ಮಲ್ಲಪ್ಪ ಮಾರಿಹಾಳ, ಮಹಾದೇವ ಮರಗಾಳೆ, ರಮೇಶ ಧಬಾಲೆ ಮತ್ತಿತರರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ