Kannada NewsKarnataka NewsLatest
ಎಂಇಎಸ್ ಪದವಿ ಕಾಲೇಜಿನ ವಿದ್ಯಾರ್ಥಿಗಳ ಪ್ರತಿಭಟನೆ: ಕಾಲೇಜಿನ ಪರೀಕ್ಷೆ ಮುಂದೂಡಿಕೆ

ಶಾಸಕ ಬಾಲಚಂದ್ರ ಜಾರಕಿಹೊಳಿ ಮಧ್ಯಪ್ರವೇಶದಿಂದ ಪರೀಕ್ಷೆ ಮುಂದೂಡಿಕೆ
ಪ್ರಗತಿವಾಹಿನಿ ಸುದ್ದಿ, ಮೂಡಲಗಿ: ಮಾ.22ರಿಂದ ನಡೆಯುವ ಮೂಡಲಗಿ ಪಟ್ಟಣದ ಎಮ್‌ಇಎಸ್ ಕಾಲೇಜಿನ ಬಿಎ ಪದವಿ ವಿದ್ಯಾರ್ಥಿಗಳ ಪರೀಕ್ಷಾ ಕೇಂದ್ರವನ್ನು ರದ್ದು ಮಾಡಿ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣಕ್ಕೆ ವರ್ಗಾವಣೆ ಮಾಡಿದ ಹಿನ್ನೆಲೆ ವಿದ್ಯಾರ್ಥಿಗಳು ಸೋಮವಾರ ಸಂಜೆ ನಾಲ್ಕು ಗಂಟೆಯಿಂದ ತಹಶೀಲ್ದಾರ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.
ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಮಧ್ಯ ಪ್ರವೇಶಿಸಿದ್ದರಿಂದ ಪ್ರತಿಭಟನೆಯನ್ನು ವಿದ್ಯಾರ್ಥಿಗಳು ರಾತ್ರಿ 9 ಗಂಟೆಗೆ ಮೊಟಕುಗೊಳಿಸಿದರು.


ಈ ಪ್ರತಿಭಟನೆಯಲ್ಲಿ ವಿದ್ಯಾರ್ಥಿನಿ ಮೇಘಾ ಗುಡ್ಲಿ ಮಾತನಾಡಿ, ತಾಲೂಕಿನ ದೂರದ ಹಳ್ಳಿಗಳಿಂದ ಸುಮಾರು ಒಂದು ಸಾವಿರ ವಿದ್ಯಾರ್ಥಿಗಳು ಪಟ್ಟಣದ ಎಮ್‌ಇಎಸ್ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಇರುವುದರಿಂದ ಏಕಾಏಕಿ ಪರೀಕ್ಷಾ ಕೇಂದ್ರವನ್ನು ರದ್ದು ಮಾಡಿದ ಪರಿಣಾಮ ವಿದ್ಯಾರ್ಥಿಗಳು ಹಾಗೂ ವಸತಿ ನಿಲಯದಲ್ಲಿ ಇರುವಂತ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯಕ್ಕೆ ತಲುಪಲು ಸಮಸ್ಯೆಯಾಗುವುದರಿಂದ ಕೂಡಲೇ ವರ್ಗಾವಣೆ ಮಾಡಿರುವ ಆದೇಶವನ್ನು ರದ್ದು ಮಾಡಿ, ಮೊದಲು ನಡೆಯುವ ಪರೀಕ್ಷಾ ಕೇಂದ್ರದಲ್ಲೇ ಪರೀಕ್ಷೆ ನಡೆಸಲು ಆದೇಶ ನೀಡಬೇಕೆಂದು ಆಗ್ರಹಿಸಿದರು.

ಮೂಡಲಗಿ ತಹಶೀಲ್ದಾರ ಡಿ ಜಿ ಮಹಾತ್ ಅವರು, ವಿದ್ಯಾರ್ಥಿಗಳ ಪ್ರತಿಭಟನೆ ಬಗ್ಗೆ ಬೆಳಗಾವಿ ಜಿಲ್ಲಾಧಿಕಾರಿಗಳ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ ಗಮನಕ್ಕೆ ತಂದ ಹಿನ್ನೆಲೆ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳು ಮಾ.22 ಹಾಗೂ 23ರಂದು ನಡೆಯುವ ಪರೀಕ್ಷೇಗಳನ್ನು (ಆ ಕಾಲೇಜಿಗೆ ಮಾತ್ರ) ಮುಂದೂಡಿ ಆದೇಶ ಹೊರಡಿಸಿದ ಬಗ್ಗೆ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ವಿದ್ಯಾರ್ಥಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಪ್ರತಿಭಟನೆಯನ್ನು ಕೈಬಿಡುವಂತೆ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕ ಆರ್ ಪಿ ಸೋನವಾಲ್ಕರ, ಎಬಿವಿಪಿ ಕಾರ್ಯಕರ್ತರಾದ ಬಸವರಾಜ ಜೋಡಟ್ಟಿ, ಮಹಾದೇವ ನವಣಿ, ಗಿರೀಶ ಬಳಿಗಾರ, ಬಸವರಾಜ ಕೋಣಿ, ಗುರು ಹಿರೇಮಠ, ಹಣಮಂತ ಗುರವ್, ಸುಜಾತಾ ಪಟ್ಟಣಶೆಟ್ಟಿ, ಗಾಯಿತ್ರಿ ಸಲಭನ್ನವರ, ಗಂಗುಬಾಯಿ ಚಿಮ್ಮಡಿ, ಈಶ್ವರಿ ದಂಡಪ್ಪನ್ನವರ, ಅನ್ನಪೂರ್ಣ ಮಂಡರ ಹಾಗೂ ಅನೇಕ ಕಾರ್ಯಕರ್ತರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ