
ಪ್ರಗತಿವಾಹಿನಿ ಸುದ್ದಿ: ಮಕ್ಕಳಿಗೆ ಮೊಬೈಲ್ ಒಂದು ಕೈಯ್ಯಲ್ಲಿದ್ದರೇ ಸಾಕು. ಊಟ-ಪಾಠ ಎಲ್ಲವನ್ನೂ ಮರೆತು ಬಿಡುತ್ತಾರೆ. ಇಲ್ಲೋರ್ವ ಬಾಲಕ ಮೊಬೈಲ್ ನಲ್ಲಿ ಕಾಲ ಕಳೆಯುತ್ತಿದ್ದುದಕ್ಕೆ ತಂದೆ ಬೈದು ಬುದ್ಧಿ ಹೇಳಿದ್ದಕ್ಕೆ ಕೋಪಗೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಈ ಘಟನೆ ನಡೆದಿದೆ. 7ನೇ ತರಗತಿ ವಿದ್ಯಾರ್ಥಿ ಓಂ ಕದಂ ಆತ್ಮಹತ್ಯೆ ಮಾಡಿಕೊಂಡಿರುವ ಬಾಲಕ. ಹಳಿಯಾಳ ಸರ್ಕಾರಿ ಶಾಲೆಯ ವಿದ್ಯಾರ್ಥಿ.
ಬಾಲಕ ಓಂ ಕದಂ ಮನೆಗೆ ಬಂದವನು ಮೊಬೈಲ್ ನೋಡುತ್ತಾ ಕಾಲಕಳೆಯುತ್ತಿದ್ದ. ತಂದೆ ಮನೋಹರ್ ಮಗನಿಗೆ ಮೊಬೈಲ್ ನೋಡುತ್ತಾ ಕೂರಬೇಡ ಎಂದಿದ್ದಾರೆ. ಆದರೂ ಕೇಳದ ಮಗ ಮತ್ತೆ ಮೊಬೈಲ್ ನೋಡುತ್ತಿದ್ದ. ಇದರಿಂದ ತಂದೆ ಮಗನ ಕೈಲಿದ್ದ ಮೊಬೈಲ್ ಕಸಿದು, ಹೋಗಿ ಓದಿಕೋ. ಮೊಬೈಲ್ ನೋಡುತ್ತಾ ಕೂರಬೇಡ ಎಂದು ಎಷ್ಟು ಹೇಳಬೇಕು ಎಂದು ಗದರಿದ್ದಾರೆ. ಇಷ್ಟಕ್ಕೆ ಬೇಸರಗೊಂಡ ಬಾಲಕ ರೂಮಿಗೆ ಹೋದವನು ನೇಣಿಗೆ ಕೊರಳೊಡ್ಡಿದ್ದಾನೆ.
ತಕ್ಷಣ ಗಮನಿಸಿದ ಪೋಷಕರು ಮಗನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಕೊನೆಯಿಸಿರೆಳೆದಿದ್ದಾನೆ. ಹಳಿಯಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.