ಪ್ರಗತಿವಾಹಿನಿ ಸುದ್ದಿ: ಶಿಕ್ಷಕ ಹಾಗೂ ಆತನ ಕುಟುಂಬದವರು ನೀಡಿದ ಕಿರುಕುಳಕ್ಕೆ ಮನನೊಂದ ವಿದ್ಯಾರ್ಥಿನಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಆಲದಕಟ್ಟಿಯಲ್ಲಿ ನಡೆದಿದೆ.
ಹಾವೇರಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಅರ್ಚನಾ ಆತ್ಮಹತ್ಯೆಗೆ ಶರಣಾದವಳು. ಕ್ಲಾಸ್ ನಲ್ಲಿಯೂ ಫಸ್ಟ್ ರ್ಯಾಂಕ್ ಬರುತ್ತಿದ್ದ ವಿದ್ಯಾರ್ಥಿನಿಗೆ ಶಿಕ್ಷಕ ಆರಿಫ್ ವುಲ್ಲಾ ಹಾಗೂ ಆತನ ಕುಟುಂಬದವರು ಕಿರುಕುಳ ನೀಡುತ್ತಿದ್ದರು. ಶಿಕ್ಷಕ ಹಾಗೂ ಆತನ ಪತ್ನಿ ನೀಡುತ್ತಿದ್ದ ಕಿರುಕುಳದ ಬಗ್ಗೆ ವಿದ್ಯಾರ್ಥಿನಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಶಿಕ್ಷಕ ಆರೀಫ್ ವುಲ್ಲಾ ಪುತ್ರಿ ಝೋಯಾ ಇಬ್ಬರೂ ಕ್ಲಾಸ್ ಮೇಟ್ಸ್ ಆಗಿದ್ದು, ಶಿಕ್ಷಕನ ಪುತ್ರಿ ಝೊಯಾಗಿಂತಲೂ ಅರ್ಚನಾ ಓದಿನಲ್ಲಿ ಮುಂದೆ ಇದ್ದಳು. ಅರ್ಚನಾ ತನ್ನ ಮಗಳಿಗಿಂತ ಹೆಚ್ಚು ಬುದ್ಧಿವಂತೆಯಾಗಿದ್ದಕ್ಕೆ ಶಿಕ್ಷಕ ಆರೀಫ್ ಕಿರುಕುಳ ನೀಡುತ್ತಿದ್ದರಂತೆ. ಅಲ್ಲದೇ ಅರ್ಚನಾಳನ್ನು ಮನೆಗೆ ಕರೆಸಿ ಆರೀಫ್ ಪತ್ನಿ ಕೂಡ ಅರ್ಚನಾಳಿಗೆ ಬೈಯ್ಯುತ್ತಿದ್ದರಂತೆ. ಇದರಿಂದ ಮನನೊಂದ ವಿದ್ಯಾರ್ಥಿನಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಎರಡು ದಿನಗಳ ಹಿಂದೆಯೇ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದು, ಪೊಲೀಸರಿಗೆ ದೂರು ನೀಡದೇ ಕುಟುಂಬದವರು ಅಂತ್ಯಸಂಸ್ಕಾರವನ್ನೂ ಮಾಡಿದ್ದಾರೆ. ಆದರೆ ವಿದ್ಯಾರ್ಥಿನಿ ಬರೆದಿರುವ ಡೆತ್ ನೋಟ್ ಈಗ ಲಭ್ಯವಾಗಿರುವ ಹಿನ್ನೆಲೆಯಲ್ಲಿ ಇದೀಗ ಪೊಲಿಸರಿಗೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಇದೀಗ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಮೃತದೇಹ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ