Kannada NewsKarnataka NewsLatest

ಜನ ಸಾಗರದೊಂದಿಗೆ ಶಾಸಕ ಮಹಾಂತೇಶ ದೊಡ್ಡಗೌಡರ ನಾಮಪತ್ರ ಸಲ್ಲಿಕೆ

ಹರಿದು ಬಂದ ಜನ ಸಾಗರ

ಪ್ರಗತಿವಾಹಿನಿ ಸುದ್ದಿ, ಚನ್ನಮ್ಮನ ಕಿತ್ತೂರು: ಬಿಜೆಪಿ ಅಭ್ಯರ್ಥಿ, ಶಾಸಕ ಮಹಾಂತೇಶ ದೊಡ್ಡಗೌಡರ ರೋಡ್ ಶೋ ಮೂಲಕ ಆಡಳಿತ ಸೌಧಕ್ಕೆ ಆಗಮಿಸಿ ಚುನಾವಣೆ ಅಧಿಕಾರಿ ರೇಶ್ಮಾ ಹಾನಗಲ್ ಅವರಿಗೆ ನಾಮಪತ್ರ ಸಲ್ಲಿಸಿದರು.

ಇಲ್ಲಿಯ ಸೋಮವಾರ ಪೇಟೆ ಚನ್ನಮ್ಮ ಸರ್ಕಲ್ ನಿಂದ ಬೃಹತ್ ಮೆರವಣಿಗೆ ಮೂಲಕ ರೋಡ್ ಶೋ ಪ್ರಾರಂಭಿಸಿದರು. ಬಿಜೆಪಿ ರಾಜ್ಯ ಉಸ್ತುವಾರಿ ಅರುಣಸಿಂಗ್, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಮಹಾರಾಷ್ಟ್ರ ಪುಣೆಯ ಶಾಸಕ ಸಿದ್ದಾರ್ಥ ಶಿರೋಳಿ, ದೊಡ್ಡಗೌಡರ ಪತ್ನಿ ಮಂಜುಳಾ ದೊಡ್ಡಗೌಡರ, ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ, ಮಂಡಳ ಅಧ್ಯಕ್ಷ ಬಸವರಾಜ ಪರವಣ್ಣವರ ತೆರೆದ ವಾಹನದಲ್ಲಿ ಸಾಥ್ ನೀಡಿದರು.

20 ಸಾವಿರಕ್ಕೂ ಹೆಚ್ಚುಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಬಿಜೆಪಿ ಬಾವುಟಗಳನ್ನು ಹಾರಿಸಿದರು. ಎಲ್ಲಿ ನೋಡಿದರೂ ಬಿಜೆಪಿ ರುಮಾಲು, ಟೋಪಿ, ರಾರಾಜಿಸಿದವು. ಪ್ರಧಾನಿ ನರೇಂದ್ರ ಮೋದಿ, ರಾಜ್ಯ ಉಸ್ತುವಾರಿ ಅರುಣಸಿಂಗ್, ಕಿತ್ತೂರು ಹುಲಿ ಶಾಸಕ ಮಹಾಂತೇಶ ದೊಡ್ಡಗೌಡರ ಪರವಾಗಿ ಘೋಷಣೆಗಳು ಮುಗಿಲು ಮುಟ್ಟಿದವು.

ಡೊಳ್ಳು ಮೇಳ, ಮಹಾರಾಷ್ಟ್ರ ಜಾಂಝ ಪದಕ ಮೆರವಣಿಗೆಯಲ್ಲಿ ಗಮನ ಸೆಳೆದವು. ಮೆರವಣಿಗೆ ಉದ್ದಕ್ಕೂ ಹೂವಿನ ಹೊಳೆ ಹರಿಸಿದರು. ಮೆರವಣಿಗೆಗೆ ಆಗಮಿಸಿದ ಕಾರ್ಯಕರ್ತರಿಗೆ, ಅಭಿಮಾನಿಗಳು ಮಜ್ಜಿಗೆ, ನೀರಿನ ವ್ಯವಸ್ಥೆ ಮಾಡಿದ್ದರು.

ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ರಾಣಿ ಚನ್ನಮ್ಮ ಪುತ್ಥಳಿಗೆ ಅರುಣಸಿಂಗ್, ಶಾಸಕ ದೊಡ್ಡಗೌಡರ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಬಳಿಕ ಬಿಜೆಪಿ ರಾಜ್ಯ ಉಸ್ತುವಾರಿ ಅರುಣಸಿಂಗ್ ಮಾತನಾಡಿ, ಶಾಸಕ ಮಹಾಂತೇಶ ದೊಡ್ಡಗೌಡರ ಕ್ಷೇತ್ರದಲ್ಲಿ ಜನರ ಪ್ರಿತಿ, ವಿಶ್ವಾಸ ಗಳಿಸಿದ್ದಾರೆ. ಈ ಸುಡುವ ಬಿಸಿಲಿನಲ್ಲಿಯೂ  ಅಧಿಕ ಸಂಖ್ಯೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯ ನಾಮಪತ್ರ ಸಲ್ಲಿಸಲು ಆಗಮಿಸಿರುವ ಜನರನ್ನು ನೋಡಿದರೆ ರಾಜ್ಯದಲ್ಲಿ 150 ಸ್ಥಾನ ಪಡೆದು ಡಬಲ್ ಇಂಜಿನ್ ಸರಕಾರ ಆಡಳಿತಕ್ಕೆ ಬರಲಿದೆ. ಬಿಜೆಪಿ ಸರಕಾರ ಪ್ರಧಾನಿ ನರೇಂದ್ರ ಮೋದಿ, ಅಮಿತಶಾ, ಬಿ ಎಸ್ ಯಡಿಯೂರಪ್ಪ ಇಂತಹ ನಾಯಕರ ನೇತೃತ್ವದಲ್ಲಿ ದೇಶ, ರಾಜ್ಯ ಅಭಿವೃದ್ದಿಯತ್ತ ಸಾಗಿದೆ ಎಂದರು.

ಶಾಸಕ ಮಹಾಂತೇಶ ದೊಡ್ಡಗೌಡರ ಮಾತನಾಡಿ, ಕಳೆದ ಐದು ವರ್ಷಗಳಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದೇನೆ. ಕ್ಷೇತ್ರದಲ್ಲಿ ಬಿಜೆಪಿ ಪಕ್ಷಕ್ಕೆ ಹೆಚ್ಚಿನ ಜನ ಬೆಂಬಲ ನೀಡುತ್ತಿದ್ದಾರೆ ಎಂದರು.

ಮದ್ಯಪಾನ ಸಂಯಮ ಮಂಡಳಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ತುಬಾಕಿ, ಜಿಲ್ಲಾ ಗ್ರಾಮೀಣ ಘಟಕದ ಪ್ರಧಾನ ಕಾರ್ಯದರ್ಶಿ ಸಂದೀಪ ದೇಶಪಾಂಡೆ, ಚಿನ್ನಪ್ಪ ಮುತ್ನಾಳ, ಚನಬಸಪ್ಪ ಮೊಕಾಶಿ, ಶ್ರೀಕರ ಕುಲಕರ್ಣಿ, ಅರವಿಂದ ಪಾಟೀಲ, ಜಗದೀಶ ವಸ್ತ್ರದ, ಮಹಾಂತೇಶ ಏಣಗಿ, ಪ್ರಕಾಶ ಮುಗಬಸವ, ಉಳವಪ್ಪ ಉಳ್ಳಾಗಡಿ, ನಿಜಲಿಂಗಯ್ಯ ಹಿರೇಮಠ, ದಿನೇಶ ವಳಸಂಗ ಭಾಗವಹಿಸಿದ್ದರು.

https://pragati.taskdun.com/good-public-support-for-minister-shashikala-jolla-prahlada-joshi/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button