ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ ಹಠಾತ್ ಸ್ಥಗಿತ
ಎಂ.ಕೆ.ಹೆಗಡೆ, ಬೆಳಗಾವಿ –
ರಾಜ್ಯಾದ್ಯಂತ ಮಂಗಳವಾರ ಆರಂಭವಾಗಬೇಕಿದ್ದ ಪ್ರಾಥಮಿಕ ಶಾಲೆ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ ಹಠಾತ್ ಸ್ಥಗಿತವಾಗಿದೆ.
ಸೋಮವಾರ ಸಂಜೆ ಈ ಸಂಬಂಧ ಶಿಕ್ಷಣ ಇಲಾಖೆಯ ಎಲ್ಲ ಅಧಿಕಾರಿಗಳಿಗೆ ವಾಟ್ಸಪ್ ಸಂದೇಶ ರವಾನೆಯಾಗಿದೆ. ಮಂಗಳವಾರ ಬೆಳಗ್ಗೆ ಎಲ್ಲ ಜಿಲ್ಲೆಗಳ ಡಿಡಿಪಿಐ ಕಚೇರಿಗಳಲ್ಲಿ ಪ್ರಾಥಮಿಕ ಶಾಲೆ ಶಿಕ್ಷಕರ ಕೌನ್ಸೆಲಿಂಗ್ ಆರಂಭವಾಗಬೇಕಿತ್ತು. ಇದಕ್ಕಾಗಿ ಕಳೆದ 3 ವರ್ಷದಿಂದ ಚಾತಕ ಪಕ್ಷಿಗಳಂತೆ ಕಾದು ಕುಳಿತಿದ್ದ ಶಿಕ್ಷಕರು ಕಂಗಾಲಾಗಿದ್ದಾರೆ.
ಕಳೆದ 3 ವರ್ಷದಿಂದಲೂ ಶಿಕ್ಷಕರ ವರ್ಗಾವಣೆ ಮುಂದೂಡಲ್ಪಡುತ್ತಿದೆ. ಈ ವರ್ಷವೇ ಕಳೆದ 3 ತಿಂಗಳಲ್ಲಿ 8 ಬಾರಿ ವೇಳಾಪಟ್ಟಿ ಬದಲಾಗಿದೆ. ಈಗ ಬಂದಿರುವ ಸಂದೇಶದ ಪ್ರಕಾರ ಜುಲೈ 30 ಮತ್ತು 31ರಂದು ನಡೆಯಬೇಕಿದ್ದ ವರ್ಗಾವಣೆ ಕೌನ್ಸೆಲಿಂಗ್ ಮುಂದೂಡಲಾಗಿದೆ ಎಂದು ತಿಳಿಸಲಾಗಿದೆ. 30ರಂದೇ ವರ್ಗಾವಣೆ ಪ್ರಕ್ರಿಯೆ ಆರಂಭವಾಗುವುದಿತ್ತು.
1.09 ಲಕ್ಷ ಶಿಕ್ಷಕರು ಕಂಗಾಲು
ಆದರೆ ಮತ್ತೆ ಯಾವಾಗ ಆರಂಭವಾಗುತ್ತದೆ ಎನ್ನುವ ಪ್ರಸ್ತಾಪವಿಲ್ಲ. ಆಗಸ್ಟ್ 1ರಂದು ವರ್ಗಾವಣೆ ಪ್ರಕ್ರಿಯೆ ಆರಂಭವಾಗುವ ಕುರಿತು ಸೂಚಿಸಿಲ್ಲ. ವರ್ಗಾವಣೆ ರದ್ದುಪಡಿಸಲು ಕಾರಣವನ್ನೂ ಉಲ್ಲೇಖಿಸಿಲ್ಲ. ಜಿಲ್ಲಾ ಮಟ್ಟದ ಅಧಿಕಾರಿಗಳಿಗೂ ವರ್ಗಾವಣೆ ಕನ್ಸೆಲಿಂಗ್ ಮುಂದೂಡುವ ಸೂಚನೆ ಬಿಟ್ಟರೆ ಮತ್ಯಾವುದೇ ಮಾಹಿತಿ ಇಲ್ಲ.
ಪ್ರಾಥಮಿಕ ಶಾಲೆ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ ರದ್ದಾದರೆ ಆ ವೇಳಾಪಟ್ಟಿಗೆ ಹೊಂದಿಕೊಂಡಂತೆ ಇದ್ದ ಪ್ರೌಢ ಶಾಲೆ ಶಿಕ್ಷಕರ ವರ್ಗಾವಣೆಯೂ ರದ್ದಾಗಲಿದೆ. ಎಲ್ಲವೂ ಹೊಸದಾಗಿ ವೇಳಾಪಟ್ಟಿ ಸಿದ್ದವಾಗಬೇಕು.
ಹಠಾತ್ ವರ್ಗಾವಣೆ ಕೌನ್ಸೆಲಿಂಗ್ ರದ್ಧುಪಡಿಸಲು ಕಾರಣವಾಗಲಿ, ಪುನಾರಂಭಿಸುವ ದಿನಾಂಕವನ್ನಾಗಲಿ ಅವರಿಗೂ ತಿಳಿಸಿಲ್ಲ. ಈ ಬೆಳವಣಿಗೆಯಿಂದಾಗಿ ವರ್ಗಾವಣೆಗೆ ಅರ್ಜಿ ಸಲ್ಲಿಸಿದ್ದ ಸುಮಾರು 1.09 ಲಕ್ಷ (ಪ್ರಾಥಮಿಕ ಶಾಲೆ 84 ಸಾವಿರ, ಪ್ರೌಢ ಶಾಲೆ 25 ಸಾವಿರ) ಶಿಕ್ಷಕರು ಕಂಗೆಟ್ಟಿದ್ದಾರೆ.
ಕಾರಣವೇನು?
ವರ್ಗಾವಣೆ ನಿಯಮ ತಿದ್ದುಪಡಿಗಾಗಿ 2 ವರ್ಷ ವರ್ಗಾವಣೆ ನಡೆದಿರಲಿಲ್ಲ. ನಂತರ ಕಡ್ಡಾಯ ವರ್ಗಾವಣೆಯಾಗಬೇಕಿದ್ದ ಶಿಕ್ಷಕರ ಲಾಬಿಯಿಂದ ಮತ್ತೊಂದು ವರ್ಷ ವರ್ಗಾವಣೆಯಾಗಲಿಲ್ಲ. ಈ ವರ್ಷ ತಾಂತ್ರಿಕ ಕಾರಣಗಳಿಗಾಗಿ 8 ಬಾರಿ ವರ್ಗಾವಣೆ ಪ್ರಕ್ರಿಯೆ ವೇಳಾಪಟ್ಟಿ ಬದಲಾದಗಿದೆ.
ಈಗ ಮತ್ತೆ ಕೌನ್ಸೆಲಿಂಗ್ ಆರಂಭಕ್ಕೆ ಮೊದಲ ದಿನ ಹಠಾತ್ ರದ್ದಾಗಿದೆ. ಇದಕ್ಕೆ ನಿರ್ಧಿಷ್ಟ ಕಾರಣವನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲವಾದರೂ ಭಾರೀ ಪ್ರಮಾಣದಲ್ಲಿ ತಿದ್ದುಪಡಿ ಆಗಬೇಕಿರುವುದರಿಂದ ರದ್ದುಪಡಿಸಲಾಗಿದೆ ಎಂದು ಶಿಕ್ಷಣ ಇಲಾಖೆಯ ಮೂಲಗಳು ಪ್ರಗತಿವಾಹಿನಿಗೆ ತಿಳಿಸಿವೆ.
ಕಡ್ಡಾಯ ವರ್ಗಾವಣೆ, ಸೀನಿಯಾರಿಟಿ, ಹೆಚ್ಚುವರಿ ಶಿಕ್ಷಕರ ಲೆಕ್ಕ, ತಪ್ಪು ಮಾಹಿತಿ, ಟಿಜಿಟಿ ಶಿಕ್ಷಕರಿಗೆ ಸ್ಥಳ ಸೇರಿದಂತೆ ಹಲವು ವಿಷಯಗಳನ್ನು ನಮೂದಿಸುವಲ್ಲಿ ಅಧಿಕಾರಿಗಳು ಮಾಡಿರುವ ಎಡವಟ್ಟು ಶಿಕ್ಷಕರ ವರ್ಗಾವಣೆ ರದ್ದಾಗಲು ಕಾರಣ ಎನ್ನಲಾಗುತ್ತಿದೆ. ಮೊದಲಿನಿಂದಲೂ ಸರಿಯಾದ ಅಂಕೆ ಸಂಖ್ಯೆಗಳನ್ನಿಡದೆ ಕೊನೆಯ ಕ್ಷಣದಲ್ಲಿ ಕೈಗೆ ಸಿಕ್ಕಿದ ಮಾಹಿತಿಯನ್ನು ಅಪ್ ಲೋಡ್ ಮಾಡಿದ್ದೇ ಈ ಅವಾಂತರಕ್ಕೆ ಕಾರಣ ಎನ್ನಲಾಗುತ್ತಿದೆ.
ಲಾಬಿ ಕಾರಣವೇ?
ಇನ್ನೊಂದು ಮಾಹಿತಿ ಪ್ರಕಾರ, ಕಡ್ಡಾಯ ವರ್ಗಾವಣೆಯಾಗಬೇಕಿದ್ದ ಶಿಕ್ಷಕರ ಲಾಬಿ ಕೆಲಸ ಮಾಡಿದೆ. ಅಧಿಕಾರಿಗಳ ಮೇಲೆ, ಹೊಸದಾಗಿ ಬಂದಿರುವ ಸರಕಾರದ ಮೇಲೆ ನಗರವಲಯದಲ್ಲಿ ಹತ್ತಾರು ವರ್ಷದಿಂದ ಬೀಡುಬಿಟ್ಟಿರುವ ಶಿಕ್ಷಕರು ಒತ್ತಡ ತಂದು ವರ್ಗಾವಣೆ ಪ್ರಕ್ರಿಯೆ ರದ್ದುಪಡಿಸಿದ್ದಾರೆ ಎಂದೂ ಹೇಳಲಾಗುತ್ತಿದೆ.
ಶಿಕ್ಷಕರ ಸಂಘಗಳೂ ಹಳ್ಳಿಗಳಲ್ಲಿರುವ ಲಕ್ಷಾಂತರ ಬಡ ಶಿಕ್ಷಕರ ಪರವಾಗಿ ನಿಲ್ಲದೆ ನಗರದಲ್ಲಿ ತಳವೂರಿರುವ ಸಾವಿರದಷ್ಟು ಶಿಕ್ಷಕರ ಪರ ನಿಂತಿರುವುದು ಶಿಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ. ಇದರಿಂದಾಗಿ, ಸಂಪುಟ ರಚನೆಯಾಗಿ ಹೊಸಸರಕಾರ ಪೂರ್ಣಪ್ರಮಾಣದಲ್ಲಿ ಅಸ್ಥಿತ್ವಕ್ಕೆ ಬರುವವರೆಗೂ ಮತ್ತೆ ವರ್ಗಾವಣೆ ಪ್ರಕ್ರಿಯೆ ಪುನಾರಂಭವಾಗುವುದಿಲ್ಲ ಎನ್ನಲಾಗುತ್ತಿದೆ.
ಒಟ್ಟಾರೆ, ಹಳ್ಳಿಗಳಲ್ಲಿ, ಪತಿ ಒಂದು ಕಡೆ, ಪತ್ನಿ ಮತ್ತೊಂದು ಕಡೆ ಕೆಲಸ ಮಾಡುತ್ತಿರುವ, ವಿವಿಧ ಕಾರಣಗಳಿಂದಾಗಿ ತೀವ್ರ ತೊಂದರೆಯಲ್ಲಿರುವ ಶಿಕ್ಷಕರು ತೀವ್ರ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಹೊಸ ಸರಕಾರ ಗ್ರಾಮೀಣ, ಬಡ ಶಿಕ್ಷಕರ ಪರ ನಿಲ್ಲುತ್ತದೆಯೋ, ಬಲಾಢ್ಯರಾದ ನಗರದಲ್ಲಿ ಬೀಡುಬಿಟ್ಟಿರುವ ಶಿಕ್ಷಕರ ಪರವಾಗಿ ನಿಲ್ಲುತ್ತದೆಯೋ ಕಾದು ನೋಡಬೇಕಿದೆ.
(ಪ್ರಗತಿವಾಹಿನಿ ಸುದ್ದಿಗಳನ್ನು ಎಲ್ಲರಿಗೂ ಶೇರ್ ಮಾಡಿ) (ಪ್ರತಿಕ್ರಿಯಿಸಿ -ವಾಟ್ಸಪ್ -8197712235)
ಇವನ್ನೂ ಓದಿ –
ಶಿಕ್ಷಕರ ವರ್ಗಾವಣೆ ತಿದ್ದುಪಡಿ ವಿಧೇಯಕ: ಕೊನೆಗೂ ಲಾಬಿಗೆ ಮಣಿದ ಸರಕಾರ!
ಶಿಕ್ಷಕರ ವರ್ಗಾವಣೆ 3ನೇ ವರ್ಷವೂ ಅಯೋಮಯ! ಅದಕ್ಕಿದೆ 3 ಕಾರಣ!!
ಇದ್ಯಾವ ವರ್ಗಾವಣೆ ನೀತಿ ?- ಶಿಕ್ಷಕರ ಆಕ್ರೋಶ
ವರ್ಗಾವಣೆಗೆ ನಿರ್ಲಕ್ಷ್ಯ :ಸರಕಾರದ ವಿರುದ್ಧ ಶಿಕ್ಷಕರ ಕಿಡಿ
ಪ್ರಗತಿವಾಹಿನಿ ಇಂಪ್ಯಾಕ್ಟ್: ನೀತಿಸಂಹಿತೆ ಮುನ್ನವೇ ವರ್ಗಾವಣೆ ಪ್ರಕ್ರಿಯೆ ಶುರು ಮಾಡ್ತಾರಂತೆ!
ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಆರಂಭಿಸಲು ಹೊರಟ್ಟಿ ಆಗ್ರಹ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ