ಪ್ರಗತಿವಾಹಿನಿ ಸುದ್ದಿ; ಮಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ವೇಗವಾಗಿ ಹೆಚ್ಚುತ್ತಿದ್ದು, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಗಂಭೀರ ಪರಿಸ್ಥಿತಿ ಎದುರಾಗುತ್ತಿದೆ ಎನ್ನಲಾಗಿದೆ. ಈ ನಡುವೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಿಸಲು ಇನ್ಫೋಸಿಸ್ ಫೌಂಡೇಶನ್ ಸಂಸ್ಥಾಪಕಿ ಸುಧಾ ಮೂರ್ತಿ ನೆರವಿಗೆ ಬಂದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾಡಳಿತ ಕೊರೋನಾ ವೈರಸ್ ತಡೆಗೆ ಆರ್ಥಿಕವಾಗಿ ಸಹಾಯ ಮಾಡುವಂತೆ ಹಲವು ಸಂಸ್ಥೆಗಳಿಗೆ ಮನವಿ ಮಾಡಿತ್ತು. ಈ ಮನವಿಗೆ ಸ್ಪಂದಿಸಿದ ಇನ್ಫೋಸಿಸ್ ಫೌಂಡೇಶನ್ ಸಂಸ್ಥಾಪಕಿ ಸುಧಾ ಮೂರ್ತಿ, ತಮ್ಮ ಸಂಸ್ಥೆ ವತಿಯಿಂದ 28 ಲಕ್ಷ ರೂ ನೀಡಿದ್ದಾರೆ. ಕೊರೋನಾ ವೈರಸ್ ತಡೆಗಟ್ಟಲು ನೆರವಿಗೆ ಬಂದ ಇನ್ಫೋಸಿಸ್ ಫೌಂಡೇಶನ್ಗೆ ಜಿಲ್ಲಾಡಳಿತ ಧನ್ಯವಾದ ತಿಳಿಸಿದೆ.
ಇನ್ಫೋಸಿಸ್ ನೀಡಿದ 28 ಲಕ್ಷದಿಂದ ವೈದ್ಯಕೀಯ ಉಪಕರಣ ಹಾಗೂ ಚಿಕಿತ್ಸೆ ಬೇಕಾಗುವ ವಸ್ತುಗಳನ್ನು ಜಿಲ್ಲಾಡಳಿತ ಖರೀದಿ ಮಾಡಿದೆ. 1,65000 ಮಾಸ್ಕ್, 2000 ಎನ್ 95 ಮಾಸ್ಕ್, 50 ಕ್ಯಾಪ್ಗಳು, 500 ಮಿಲಿ ಲೀಟರ್‌ನ 5000 ಬಾಟಲ್ ಸ್ಯಾನಿಟೈಸರ್, 60 ಸ್ಪೆಷಲ್ ಸರ್ಜಿಕಲ್ ಗ್ಲೌಸ್, 03 ಬ್ಲಾಕ್ ಸರ್ಜಿಕಲ್ ಗ್ಲೌಸ್, 85 ಗಾಗಲ್ಸ್, 300 ಫಾಗ್ ಫ್ರೀ ಮಾಸ್ಕ್ಗಳನ್ನು ನೀಡಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ