
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಜೀವನದ ಅನುಭವಗಳು ಅತ್ಯಂತ ದುಬಾರಿ ಶಿಕ್ಷಣದಂತೆ. ಅದನ್ನು ಕಲಿಯಲು ದೂರದೃಷ್ಟಿ ಹಾಗೂ ಆಸಕ್ತಿಯ ಅಗತ್ಯವಿದೆ ಎಂದು ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಡಾ.ಸುಧಾಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.
ಬಿಎಂಎಸ್ ಇಂಜಿನಿಯರಿಂಗ್ ಕಾಲೇಜು ಶುಕ್ರವಾರ ಹಮ್ಮಿಕೊಂಡಿದ್ದ 75ನೇ ತಂಡದ ಪುನರ್ಮನನ ಕಾರ್ಯಕ್ರಮದಲ್ಲಿ ವರ್ಚುವಲ್ ವಿಧಾನದಲ್ಲಿ ಮಾತನಾಡಿದ ಅವರು, ಮನುಷ್ಯನ ಜೀವನದ ಮಹತ್ವದ ಬದಲಾವಣೆಗಳಿಗೆ ಕಾರಣವಾದ ಆವಿಷ್ಕಾರಗಳಿಗೆ ಇಂಜಿನಿಯರಿಂಗ್ ಶಿಕ್ಷಣ ಬುನಾದಿಯಾಗಿರುವುದರಿಂದ, ವಿದ್ಯಾರ್ಥಿಗಳು ಹೆಚ್ಚು ಜವಾಬ್ದಾರಿ ಹೊಂದಿರಬೇಕು ಎಂದು ಕರೆ ನೀಡಿದರು.
ಶಿಕ್ಷಣ ಮುಗಿಸಿ ಹೊರ ಜಗತ್ತಿಗೆ ಕಾಲಿಡುವ ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ಹೊಸ ಪರೀಕ್ಷೆ, ಸವಾಲುಗಳು ಎದುರಾಗುತ್ತದೆ. ಅದಕ್ಕೆ ಅದನ್ನು ಧೈರ್ಯವಾಗಿ ಎದುರಿಸಲು ಕಲಿಯಬೇಕು. ಸ್ಪರ್ಧಾತ್ಮಕ ಬದುಕಿನಲ್ಲಿ ತಮ್ಮತನವನ್ನು ಮರೆಯದೆ, ಆಪ್ತರೊಂದಿಗೆ ಸಮಯ ಕಳೆಯಲು ಹಾಗೂ ಮನರಂಜನೆಗೆ ಕೂಡ ಸಮಯ ಮೀಸಲಿರಿಸಬೇಕು. ಸಮಯದ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ನಿಮ್ಮ ಶಕ್ತಿ ಮತ್ತು ಕೊರತೆಯನ್ನು ಅರಿಯುವುದೇ ಆತ್ಮವಿಶ್ವಾಸ. ತಮ್ಮನ್ನು ತಾವು ಅರಿತಾಗ ಮೂಡುವ ಆತ್ಮವಿಶ್ವಾಸ ಯಶಸ್ಸಿನೆಡೆಗೆ ಕೊಂಡೊಯ್ಯುತ್ತದೆ. ವಾಸ್ತವವನ್ನು ಅರಿತು ನಡೆದರೆ, ನೋವು, ವಿಷಾದಗಳಿಗೆ ಮುಕ್ತ ದೊರೆಯುತ್ತದೆ ಎಂದರು.
ಕಾಲೇಜು ಶಿಕ್ಷಣ ಮುಗಿಸಿ, ತಮ್ಮ ವೃತ್ತಿ ಜೀವನದಲ್ಲಿ ಯಶಸ್ಸಿನೆಡೆಗೆ ಸಾಗುವ ವಿದ್ಯಾರ್ಥಿಗಳು, ತಮ್ಮನ್ನು ಪರಿಪೂರ್ಣ ವ್ಯಕ್ತಿಯನ್ನಾಗಿ ರೂಪಿಸಿದ ಕಾಲೇಜಿಗೆ ಕೃತಜ್ಞರಾಗಿರಬೇಕು. ಹೊಸ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸೇರಿದಂತೆ ಇತರ ಯೋಜನೆಗಳ ಮೂಲಕ ತಮ್ಮ ಕೈಲಾದಷ್ಟು ನೆರವು ಒದಗಿಸಬೇಕು. ವಿದೇಶಗಳ ಬಹುದೊಡ್ಡ ಶಿಕ್ಷಣ ಸಂಸ್ಥೆಗಳನ್ನು ಅದರ ಹಳೆಯ ವಿದ್ಯಾರ್ಥಿಗಳೇ ಮುನ್ನೆಡಸುತ್ತಿದ್ದಾರೆ. ಇದು ನಮಗೂ ಮಾದರಿಯಾಗಬೇಕು ಎಂದರು.
ಜೀವನದಲ್ಲಿ ಎಂದಿಗೂ ಯಶಸ್ಸಿನ ಹಿಂದೆ, ಹಣದ ಹಿಂದೆ ಹೋಗಬೇಡಿ. ಮಾಡುವ ಕೆಲಸಗಳಲ್ಲಿ ಆಸಕ್ತಿಯಿರಲಿ. ಅದು ನಿಮಗೆ ಕೀರ್ತಿ ತರುತ್ತದೆ. ಜೀವನದ ಮುಖ್ಯ ವಿಷಯದ ಮೇಲೆ ಗಮನ ಕೇಂದ್ರೀಕರಿಸಿ. ಉಳಿದೆಲ್ಲಾ ವಿಷಯಗಳು ಅದನ್ನು ಹಿಂಬಾಲಿಸುತ್ತದೆ ಎಂದು ಕರೆ ನೀಡಿದರು.
ಜಗತ್ತಿನ ಪ್ರತಿ ಹನಿ ನೀರು, ಸಮಯದ ಪ್ರತಿ ಕ್ಷಣ ಕೂಡ ಅತ್ಯಂತ ಮಹತ್ವದ್ದು. ಆದ್ದರಿಂದ ನಾನು ನನ್ನ ಜೀವನದ ಒಂದು ಕ್ಷಣವನ್ನು ಕೂಡ ವ್ಯರ್ಥ ಮಾಡುವುದಿಲ್ಲ. ಸಾಮಾನ್ಯವಾಗಿ ನಾನು ಯಾವುದೇ ವಿವಾಹ, ಸಮಾರಂಭಗಳಿಗೆ ಭೇಟಿ ನೀಡುವುದಿಲ್ಲ. ಏಕೆಂದರೆ, ಅದರಿಂದ ಸಾಕಷ್ಟು ಸಮಯ ವ್ಯರ್ಥವಾಗುತ್ತದೆ. ಅದನ್ನು ಬೇರೆ ಉತ್ತಮ ಕೆಲಸಗಳಿಗೆ ಬಳಸಿಕೊಳ್ಳಬಹುದು. ಇತರರಿಗೆ ನೆರವು ನೀಡುವುದೇ ನನಗೆ ಅತ್ಯಂತ ಸಂತಸ ನೀಡುವ ವಿಷಯ” ಎಂದರು.
ಕಾರ್ಯಕ್ರಮದಲ್ಲಿ ಬಿಎಂಎಸ್ ಶಿಕ್ಷಣ ಟ್ರಸ್ಟ್ನ ಟ್ರಸ್ಟಿ ಮತ್ತು ಸದಸ್ಯ ಕಾರ್ಯದರ್ಶಿ ಡಾ.ಬಿ.ಎಸ್.ರಾಗಿಣಿ ನಾರಾಯಣ್, ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನ ಅಧ್ಯಕ್ಷ ಡಾ.ಪಿ.ದಯಾನಂದ ಪೈ, ಬಿಎಂಎಸ್ ಕಾನೂನು ಕಾಲೇಜಿನ ಅಧ್ಯಕ್ಷ ಎಂ. ಮದನ್ ಗೋಪಾಲ್, ಬಿಎಂಎಸ್ಇಟಿ ನಿರ್ದೇಶಕ ಅಡ್ಮಿನ್ ಮುರಳಿ ಕೃಷ್ಣ, ಪ್ರಾಂಶುಪಾಲರಾದ ಡಾ.ಬಿ.ವಿ.ರವಿಶಂಕರ್, ಉಪಪ್ರಾಂಶುಪಾಲರದ ಡಾ.ಎಸ್.ಮುರಳೀದರ, ಶೈಕ್ಷಣಿಕ ವಿಭಾಗದ ಡೀನ್ ಡಾ.ಸಮಿತಾ ಮೈತ್ರಾ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ