ಬೆಳಗಾವಿಗೆ ಬರುವುದಿರಲಿ, ಸಕ್ಕರೆ ನಿರ್ದೇಶನಾಲಯವೇ ವಿಲೀನ
ಸೋಮವಾರ ಬೆಳಗಾವಿಗೆ ಬರಲಿರುವ ಸಕ್ಕರೆ ಸಚಿವ ಶಿವರಾಮ ಹೆಬ್ಬಾರರೇ ಇದಕ್ಕೆ ಉತ್ತರಿಸಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ/ ಹಂದಿಗುಂದ – ಬೆಳಗಾವಿ ಮತ್ತು ಉತ್ತರ ಕರ್ನಾಟಕಕ್ಕೆ ರಾಜ್ಯ ಸರಕಾರದಿಂದ ಮತ್ತೊಂದು ದೊಡ್ಡ ಶಾಕ್. ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸಲಾಗುವ ಕಚೇರಿಗಳ ಪಟ್ಟಿಯಲ್ಲಿದ್ದ ಸಕ್ಕರೆ ನಿರ್ದೇಶನಾಲಯವನ್ನೇ ಬೇರೆ ಇಲಾಖೆಯಲ್ಲಿ ವಿಲೀನಗೊಳಿಸಲು ಸರಕಾರ ಮುಂದಾಗಿದೆ.
ಸಕ್ಕರೆ ನಿರ್ದೇಶನಾಲಯದಲ್ಲಿ ಕಾರ್ಯಭಾರವು ಕಡಿಮೆ ಇದೆ ಎನ್ನುವ ಕಾರಣ ನೀಡಿ ಮತ್ತು ಹಲವು ಹುದ್ದೆಗಳು ಭರ್ತಿಯಾಗದಿರುವುದನ್ನು ಪರಿಗಣಿಸಿ ಸಕ್ಕರೆ ನಿರ್ದೇಶನಾಲಯದ ಪ್ರತ್ಯೇಕ ಅಸ್ಥಿತ್ವವನ್ನೇ ರದ್ದುಮಾಡಲು ಸರಕಾರ ಪ್ರಸ್ತಾಪಿಸಿದೆ.
ಸಕ್ಕರೆ ನಿರ್ದೇಶನಾಲಯವನ್ನು ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸುವುದಾಗಿ ಈ ಹಿಂದೆ ಸರಕಾರ ಪ್ರಕಟಿಸಿತ್ತು. ಇದರಿಂದಾಗಿ ಈ ಭಾಗಕ್ಕೆ ಒಂದಿಷ್ಟು ಅನ್ಯಾಯ ಸರಿಪಡಿಸುವ ಕೆಲಸವಾಗಲಿದೆ ಎಂದೇ ಭಾವಿಸಲಾಗಿತ್ತು. ಆದರೆ ಈಚೆಗೆ ನಡೆದ ಸಚಿವಸಂಪುಟ ಸಭೆಯಲ್ಲಿ ಕಬ್ಬು ಅಭಿವೃದ್ಧಿ ಆಯುಕ್ತರು ಮತ್ತು ಸಕ್ಕರೆ ನಿರ್ದೇಶನಾಲಯವನ್ನು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಲ್ಲಿ ವಿಲೀನಗೊಳಿಸುವ ಪ್ರಸ್ತಾಪ ಇಡಲಾಗಿದ್ದು, ಇದಕ್ಕಾಗಿ ಉಪಸಮಿತಿ ರಚಿಸಲಾಗಿದೆ.
ಈ ಬಗ್ಗೆ ನಿರ್ಧಾರವಾಗುವವರೆಗೆ ಸಕ್ಕರೆ ನಿರ್ದೇಶನಾಲಯವನ್ನು ಬೆಂಗಳೂರಿನಲ್ಲಿಯೇ ಮುಂದುವರಿಸಬೇಕೆಂದು ಸಕ್ಕರೆ ಸಚಿವ ಶಿವರಾಮ ಹೆಬ್ಬಾರ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇದರಿಂದಾಗಿ ಉತ್ತರ ಕರ್ನಾಟಕ ಭಾಗಕ್ಕೆ ಒಂದರ ಮೇಲೆ ಒಂದು ಶಾಕ್ ನೀಡಲಾಗುತ್ತಿದೆ. ಈ ಭಾಗದ ಜನಪ್ರತಿನಿಧಿಗಳು ಧ್ವನಿ ಎತ್ತದಿದ್ದರೆ ಸರಕಾರದ ಅನ್ಯಾಯ ಹೀಗೆಯೇ ಮುಂದುವರಿಯಲಿದೆ. ರಾಜ್ಯ ಸರಕಾರವನ್ನೇ ಬೀಳಿಸುವ ಸಾಮರ್ಥ್ಯ ಹೊಂದಿರುವ ಜನಪ್ರತಿನಿಧಿಗಳು ಇಂತಹ ಅನ್ಯಾಯದ ವಿರುದ್ಧ ಸಿಡಿದೇಳದಿರುವುದು ಜನರಿಗೆ ಮಾಡುವ ಅನ್ಯಾಯವೇ ಸರಿ.
ಸೋಮವಾರ ಸಕ್ಕರೆ ಸಚಿವ ಶಿವರಾಮ ಹೆಬ್ಬಾರ ಬೆಳಗಾವಿಗೆ ಆಗಮಿಸಲಿದ್ದು, ಈ ಕುರಿತು ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ ಕಾದು ನೋಡಬೇಕಿದೆ.
ಸರಕಾರದ ಈ ನಿರ್ಧಾರಕ್ಕೆ ರೈತಸಂಘ ಹಾಗೂ ಹಸಿರುವ ಸೇನೆ ಮುಖಂಡ, ಕಬ್ಬು ನಿಯಂತ್ರಣ ಮಂಡಳಿ ಸದಸ್ಯ ಚೂನಪ್ಪ ಪೂಜೇರಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸೋಮವಾರ ಈ ಬಗ್ಗೆ ಸಕ್ಕರೆ ಆಯುಕ್ತರನ್ನು ಪ್ರಶ್ನಿಸುವುದಾಗಿ ತಿಳಿಸಿದ್ದಾರೆ.
ಸಚಿವ ಶಿವರಾಮ ಹೆಬ್ಬಾರ ಬೆಳಗಾವಿ ಭೇಟಿ ಮತ್ತು ಇತರ ಪ್ರಮುಖ ಸುದ್ದಿಗಳು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ