*ಸಕ್ಕರೆ ಕಾರ್ಖಾನೆ ದುರಂತ: ಮೃತರಿಗೆ ಘೋಷಣೆಯಾಗದ ಪರಿಹಾರ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಇನಾಮದಾರ ಸಕ್ಕರೆ ಕಾರ್ಖಾನೆಯಲ್ಲಿ ನಡೆದ ಭೀಕರ ಬಾಯ್ಲರ್ ಸ್ಪೋಟದಲ್ಲಿ ಈಗಾಗಲೇ ದುರಂತದಲ್ಲಿ ಎಂಟು ಬಡ ಕಾರ್ಮಿಕರು ಮೃತಪಟ್ಟಿದ್ದಾರೆ.
ಆದರೆ ಕೇಸ್ ಸಂಬಂಧ ಹೊಸ ವಿವಾದ ಸೃಷ್ಟಿಯಾಗಿದೆ. ಘಟನೆ ನಡೆದು ಎರಡು ದಿನಗಳಾದರೂ ಮಾಲೀಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು ಹಾಗೂ ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡದಿರುವುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.
ಕಾರ್ಖಾನೆಯಲ್ಲಿ ಅಗತ್ಯ ಸುರಕ್ಷತಾ ಕ್ರಮಗಳಿಲ್ಲದಿರುವುದೇ ದುರಂತಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದ್ದು ಸುರಕ್ಷತೆಗೆ ಆದ್ಯತೆ ನೀಡಬೇಕಿದ್ದ ಕಾರ್ಖಾನೆ ಆಡಳಿತ ಮಂಡಳಿ ತೋರಿದ ಬೇಜವಾಬ್ದಾರಿ ತನಕ್ಕೆ ಆಕ್ರೋಶ ವ್ಯಕ್ತವಾಗಿದೆ.
ಕಾರ್ಖಾನೆಯ ಜನರಲ್ ಮ್ಯಾನೇಜರ್ ಸೇರಿದಂತೆ ಮೂವರು ಸಿಬ್ಬಂದಿಗಳ ವಿರುದ್ಧ ಮಾತ್ರ ಪ್ರಕರಣ ದಾಖಲಿಸಿ, ಮಾಲೀಕರ ವಿರುದ್ಧ ಕ್ರಮ ತೆಗೆದುಕೊಳ್ಳದೆ ಕೈತೊಳೆದುಕೊಂಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
ವಿಕ್ರಮ್ ಇನಾಮದಾರ, ವಿಜಯ ಮೆಟಗುಡ್ಡ ಮತ್ತು ಪ್ರಭಾಕರ್ ಕೋರೆ ಪಾಲುದಾರಿಕೆಯಲ್ಲಿ ನಡೆಯುತ್ತಿರುವ ಈ ಕಾರ್ಖಾನೆಯ ಪರ ಅನೇಕ ಪ್ರಭಾವಿಗಳು ಒತ್ತಡ ಹೇರುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.




