*ಸಕ್ಕರೆ ಕಾರ್ಖಾನೆ ದುರಂತ: ಮೂವರ ಸಾವು;* *ಸಮಗ್ರ ತನಿಖೆ ಮತ್ತು ಸೂಕ್ತ ಪರಿಹಾರಕ್ಕೆ ಆಗ್ರಹ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಇನಾಮದಾರ್ ಸಕ್ಕರೆ ಕಾರ್ಖಾನೆ ಬಾಯ್ಲರ್ ಸ್ಫೋಟಗೊಂಡು ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ.
ಈ ಕುರಿತು ಪೊಲೀಸರು ನೀಡಿರುವ ಮಾಹಿತಿ ಇಲ್ಲಿದೆ:
ದಿನಾಂಕ : 07.01.2026 ರಂದು 13.30 ಗಂಟೆ ಸುಮಾರಿಗೆ ಬೆಳಗಾವಿ ಜಿಲ್ಲೆಯ ರಾಮದುರ್ಗ ಉಪವಿಭಾಗದ ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯ ಮರಕುಂಬಿ ಗ್ರಾಮದ ಇನಾಮ್ಹಾರ್ ಶುಗರ್ಸ್ ಫ್ಯಾಕ್ಟರಿಯಲ್ಲಿ ಜ್ಯೂಸ್ ಬಾಯಿಲಿಂಗ್ ಹೌಸ್ ಕುದಿಯುವ ಕಬ್ಬಿನ ಹಾಲು ಸಿಡಿದು ಎಂಟು ಜನ ಕಾರ್ಮಿಕರಿಗೆ ತೀವ್ರ ಗಾಯವಾಗಿದ್ದು, ಅವರನ್ನು ಬೈಲಹೊಂಗಲ ಸರ್ಕಾರಿ ಆಸ್ಪತ್ರೆಗೆ ಪ್ರಥಮ ಚಿಕಿತ್ಸೆ ಕುರಿತು ದಾಖಲಿಸಿ ಉಪಚಾರ ಹೊಂದುತ್ತಿದ್ದಾಗ ಒಬ್ಬ ಕಾರ್ಮಿಕ ಹಾಗೂ ಇನ್ನಿಬ್ಬರು KLE ಆಸ್ಪತ್ರೆ ಬೆಳಗಾವಿಯಲ್ಲಿ ಮೃತರಾಗಿದ್ದಾರೆ.
ಇನ್ನುಳಿದ 05 ಜನರನ್ನು ಪ್ರಥಮ ಚಿಕಿತ್ಸೆ ಮಾಡಿಸಿ ಹೆಚ್ಚಿನ ಉಪಚಾರ ಕುರಿತು KLE ಆಸ್ಪತ್ರೆ ಬೆಳಗಾವಿಯಲ್ಲಿ ದಾಖಲು ಮಾಡಲಾಗಿದೆ. ಪೊಲೀಸ್ ಅಧೀಕ್ಷಕರು, ಬೆಳಗಾವಿ ರವರು KLE ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ್ದಾರೆ. ಡಿಎಸ್‌ಪಿ ರಾಮದುರ್ಗ ಹಾಗೂ ಪಿಐ ಮುರಗೋಡ ರವರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದ್ದಾರೆ..
ಸದರಿ ಘಟನೆಗೆ ಸಂಬಂಧಪಟ್ಟಂತೆ ಮುರಗೋಡ ಠಾಣೆಯ ಪೊಲೀಸರು ತನಿಖೆ ಕೈಕೊಂಡಿದ್ದಾರೆ.
ಮೃತರು
1. ಅಕ್ಷಯ ಸುಭಾಷ ಚೋಪಡೆ ವಯಸ್ಸು: 48 ಸಾ|| ಚಾವಡಿ ಗಲ್ಲಿ ರಬಕವಿ ತಾ|| ರಬಕವಿ-ಬನಹಟ್ಟಿ (ಬೈಲಹೊಂಗಲ ಸರ್ಕಾರಿ ಆಸ್ಪತ್ರೆಯಲ್ಲಿ)
2. ಸುದರ್ಶನ ಮಹಾದೇವ ಬನೋಶಿ ವಯಸ್ಸು: 25 ಸಾ॥ ಚಿಕ್ಕಮುನವಳ್ಳಿ ತಾ|| ಖಾನಾಪೂರ(KLE ಆಸ್ಪತ್ರೆ ಬೆಳಗಾವಿಯಲ್ಲಿ)
3. ದೀಪಕ ನಾಗಪ್ಪ ಮುನವಳ್ಳಿ ವಯಸ್ಸು:32 ಸಾ|| ನೇಸರಗಿ ತಾ।। ಬೈಲಹೊಂಗಲ (KLE ಆಸ್ಪತ್ರೆ ಬೆಳಗಾವಿಯಲ್ಲಿ)
ಗಾಯಾಳುಗಳು
1. ಮಂಜುನಾಥ ಗೋಪಾಲ ತೇರದಾಳ,ವಯಸ್ಸು 31 ವರ್ಷ, ಸಾ|| ಹೂಲಿಕಟ್ಟಿ ತಾ॥ ಅಥಣಿ
2. ರಾಘವೇಂದ್ರ ಮಲ್ಲಪ್ಪ ಗಿರಿಯಾಳ, ವಯಸ್ಸು 36 ವರ್ಷ, ಸಾ।। ಗಿಳಿಹೊಸುರ ತಾ।। ಗೋಕಾಕ
3. ಗುರುಪಾದಪ್ಪ ಬೀರಪ್ಪ ತಮ್ಮಣ್ಣವರ, ವಯಸ್ಸು 38 ವರ್ಷ, ಸಾ|| ಮರೆಗುದ್ದಿ, ತಾ।। ಜಮಖಂಡಿ
4. ಭರತೇಶ ಬಸಪ್ಪ ಸಾರವಾಡಿ. ವಯಸ್ಸು 27 ವರ್ಷ, ಸಾ|| ಗೊಡಚಿನಮಲ್ಕಿ ತಾ|| ಗೋಕಾಕ
5. ಮಂಜುನಾಥ ಮಡಿವಾಳಪ್ಪ ಕಾಜಗಾರ. ವಯಸ್ಸು 28 ವರ್ಷ, ಸಾ|| ಅರವಳ್ಳಿ ತಾ।। ಬೈಲಹೊಂಗಲ ಎಲ್ಲರೂ ಕೆ.ಎಲ್.ಇ ಆಸ್ಪತ್ರೆ ಬೆಳಗಾವಿಯಲ್ಲಿ ಉಪಚಾರ ಹೊಂದುತ್ತಿರುತ್ತಾರೆ.
ಬೆಳಗಾವಿ ಸಕ್ಕರೆ ಕಾರ್ಖಾನೆ ಬಾಯರ್ ದುರಂತ: ಕಾರ್ಮಿಕರ ಸಾವಿಗೆ AIUTUC ತೀವ್ರ ಆಕ್ರೋಶ – ಸಮಗ್ರ ತನಿಖೆ ಮತ್ತು ಸೂಕ್ತ ಪರಿಹಾರಕ್ಕೆ ಆಗ್ರಹ!
ಬೆಳಗಾವಿಯ ಬೈಲಹೊಂಗಲ ತಾಲೂಕಿನ ಮರಕುಂಬಿಯಲ್ಲಿರುವ ಸಕ್ಕರೆ ಕಾರ್ಖಾನೆಯಲ್ಲಿ ಸಂಭವಿಸಿದ ಭೀಕರ ಬಾಯರ್ ಸ್ಪೋಟದಲ್ಲಿ 4 ಜನ ಕಾರ್ಮಿಕರು ದಾರುಣವಾಗಿ ಮೃತಪಟ್ಟಿರುವುದು ಮತ್ತು 6 ಜನ ಗಂಭೀರವಾಗಿ ಗಾಯಗೊಂಡಿರುವುದಾಗಿ ವರದಿಯಾಗಿರುವುದು ಅತ್ಯಂತ ಆಘಾತಕಾರಿ ಮತ್ತು ಖಂಡನೀಯ. ಈ ದುರಂತಕ್ಕೆ ಕಾರ್ಖಾನೆ ಆಡಳಿತ ಮಂಡಳಿಯ ಬೇಜವಾಬ್ದಾರಿತನವೇ ನೇರ ಕಾರಣವಾಗಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (AIUTUC) ಕರ್ನಾಟಕ ರಾಜ್ಯ ಸಮಿತಿಯು ಆಗ್ರಹಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಎಐಯುಟಿಯುಸಿ ಈ ಕೆಳಗಿನ ಪ್ರಮುಖ ಅಂಶಗಳನ್ನು ರಾಜ್ಯ ಸರ್ಕಾರದ ಮುಂದೆ ಇಟ್ಟಿದೆ:
1. ಮಾಲೀಕರ ನಿರ್ಲಕ್ಷ್ಯಕ್ಕೆ ಅಮಾಯಕರ ಬಲಿ:
ಲಾಭದ ಉದ್ದೇಶದಿಂದ ಕಾರ್ಮಿಕರ ಸುರಕ್ಷತೆಯನ್ನು ಗಾಳಿಗೆ ತೂರಿರುವುದು ಈ ಘಟನೆಯಿಂದ ಸ್ಪಷ್ಟವಾಗುತ್ತದೆ.
2. ಮೃತರ ಕುಟುಂಬಕ್ಕೆ ರೂ. 50 ಲಕ್ಷ ಪರಿಹಾರ ನೀಡಲಿ:
ಬಲಿಯಾದ ಕಾರ್ಮಿಕರು ಕುಟುಂಬದ ಆಧಾರಸ್ತಂಭಗಳಾಗಿದ್ದರು. ಮೃತರ ಕುಟುಂಬಕ್ಕೆ ತಲಾ 50 ಲಕ್ಷ ರೂಪಾಯಿಗಳ ನಷ್ಟ ಪರಿಹಾರವನ್ನು ಕಾರ್ಖಾನೆ ಆಡಳಿತ ಮತ್ತು ಸರ್ಕಾರ ಕೂಡಲೇ ಘೋಷಿಸಬೇಕು. ಅವರ ಕುಟುಂಬದ ಒಬ್ಬ ಸದಸ್ಯರಿಗೆ ಖಾಯಂ ಉದ್ಯೋಗ ನೀಡಬೇಕು. ಗಾಯಗೊಂಡವರಿಗೆ ಅತ್ಯಾಧುನಿಕ ಚಿಕಿತ್ಸೆ ಮತ್ತು ಸಂಪೂರ್ಣ ವೇತನ ಸಹಿತ ರಜೆಯನ್ನು ನೀಡಬೇಕು.
3. ಕ್ರಿಮಿನಲ್ ಮೊಕದ್ದಮೆ ದಾಖಲಿಸಿ:
ಕಾರ್ಮಿಕರ ಸುರಕ್ಷತೆಯಲ್ಲಿ ವೈಫಲ್ಯ ಕಂಡು ಬಂದಿರುವುದರಿಂದ ಕಾರ್ಖಾನೆಯ ಮಾಲೀಕರ ವಿರುದ್ಧ ತಕ್ಷಣವೇ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಬಂಧಿಸಬೇಕು. ಸುರಕ್ಷತಾ ಪ್ರಮಾಣಪತ್ರ ನೀಡಿದ ಅಧಿಕಾರಿಗಳನ್ನೂ ತನಿಖೆಗೆ ಒಳಪಡಿಸಬೇಕು.
4. ರಾಜ್ಯಾದ್ಯಂತ ‘ಸುರಕ್ಷತಾ ಆಡಿಟ್’ ನಡೆಸಬೇಕು.
ರಾಜ್ಯದ ಎಲ್ಲಾ ಸಕ್ಕರೆ ಕಾರ್ಖಾನೆಗಳಲ್ಲಿ ಸುರಕ್ಷತಾ ಕ್ರಮಗಳ ಬಗ್ಗೆ ತಕ್ಷಣವೇ ತಾಂತ್ರಿಕ ಸಮಿತಿಯಿಂದ ಪರಿಶೀಲನೆ ನಡೆಸಬೇಕು. ಕಾರ್ಮಿಕರ ಜೀವಕ್ಕೆ ಕುತ್ತು ತರುವ ಕಾರ್ಖಾನೆಗಳ ಪರವಾನಗಿಯನ್ನು ಈ ಕೂಡಲೇ ಅಮಾನತ್ತಿನಲ್ಲಿಡಬೇಕು.




