*ರೈತರಿಗೆ ಉತ್ತಮ ಬೆಲೆ ಸಿಗಲಿ*; *ಎಂಎಸ್ಪಿ ಹೆಚ್ಚಳಕ್ಕೆ ಕೇಂದ್ರ ಕ್ರಮ ಕೈಗೊಳ್ಳಲಿ*: *ಸಚಿವ ಸತೀಶ್ ಜಾರಕಿಹೊಳಿ*

ನ. 26ರ ಗಡುವಿನ ಬಗ್ಗೆ ಕೇಂದ್ರವೇ ನಿರ್ಧರಿಸಬೇಕು
ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಕಬ್ಬು ಬೆಳೆಗಾರರಿಗೆ ಉತ್ತಮ ಬೆಲೆ ದೊರೆಯಬೇಕು ಎಂಬುದೇ ನಮ್ಮ ಉದ್ದೇಶ. ರೈತರಿಗೆ ಹೆಚ್ಚಿನ ದರ ನೀಡುವ ಸಾಮರ್ಥ್ಯ ಹೊಂದಿರುವ ಸಕ್ಕರೆ ಕಾರ್ಖಾನೆಗಳು ಹೆಚ್ಚಿನ ದರ ನೀಡುವುದಕ್ಕೆ ನಮ್ಮ ಯಾವುದೇ ಆಕ್ಷೇಪವಿಲ್ಲ. ಆದರೆ, ಎಲ್ಲ ಸಕ್ಕರೆ ಕಾರ್ಖಾನೆಗಳ ಆರ್ಥಿಕ ಪರಿಸ್ಥಿತಿ ಒಂದೇ ರೀತಿಯಾಗಿರುವುದಿಲ್ಲ. ಸಕ್ಕರೆ ಉತ್ಪಾದನೆ, ಕಬ್ಬಿನ ಇಳುವರಿ, ಸಕ್ಕರೆ ಮಾರಾಟದ ದರ ಹಾಗೂ ಕಾರ್ಖಾನೆಗಳ ಆರ್ಥಿಕ ಸಾಮರ್ಥ್ಯವನ್ನು ಆಧರಿಸಿ ದರದಲ್ಲಿ ವ್ಯತ್ಯಾಸ ಕಂಡುಬರುತ್ತದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ನಗರದ ಸಂಗೊಳ್ಳಿ ರಾಯಣ್ಣ ಕಾಲೇಜಿನಲ್ಲಿ ವಿವಿಧ ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್ ಕಬ್ಬಿಗೆ ವಿಭಿನ್ನ ದರ ಘೋಷಿಸಿರುವ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರೈತರಿಗೆ ಉತ್ತಮ ಬೆಲೆ ಸಿಗುವುದು ಮುಖ್ಯ. ಅದೇ ಸಂದರ್ಭದಲ್ಲಿ ಕಾರ್ಖಾನೆಗಳ ಸಾಮರ್ಥ್ಯ ಮತ್ತು ಆರ್ಥಿಕ ಸ್ಥಿತಿಗತಿಗಳನ್ನೂ ಪರಿಗಣಿಸಬೇಕಾಗುತ್ತದೆ. ಎಲ್ಲ ಕಾರ್ಖಾನೆಗಳು ಒಂದೇ ರೀತಿಯ ದರ ನೀಡಬೇಕು ಎಂದು ನಿರೀಕ್ಷಿಸುವುದು ಸರಿಯಲ್ಲ. ಹೆಚ್ಚಿನ ದರ ನೀಡಲು ಸಾಧ್ಯವಿರುವ ಕಾರ್ಖಾನೆಗಳು ನೀಡಲಿ. ಇದಕ್ಕೆ ನಮ್ಮ ವಿರೋಧವಿಲ್ಲ ಎಂದು ಸ್ಪಷ್ಟಪಡಿಸಿದರು.
₹3,600 ಮೂಲ ದರದ ಸೂತ್ರದಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ: ಜಿಲ್ಲೆಯಲ್ಲಿ ಕಬ್ಬಿನ ದರ ನಿಗದಿ ವಿಚಾರವಾಗಿ ರೈತರು ಮತ್ತು ಸಕ್ಕರೆ ಕಾರ್ಖಾನೆಗಳ ಮಾಲೀಕರ ನಡುವೆ ಹಲವು ಸುತ್ತಿನ ಹೋರಾಟ ಹಾಗೂ ಮಾತುಕತೆಗಳು ನಡೆದಿದ್ದವು. ಈ ಸಂದರ್ಭದಲ್ಲಿ ಪ್ರತಿ ಟನ್ ಕಬ್ಬಿಗೆ ₹3,600 ಮೂಲ ದರ ನಿಗದಿಪಡಿಸುವ ಸೂತ್ರ ರೂಪಿಸಲಾಗಿತ್ತು. ಅದರ ಆಧಾರದ ಮೇಲೆ ಕಾರ್ಖಾನೆಗಳು ಇದೀಗ ತಮ್ಮದೇ ಆದ ದರಗಳನ್ನು ಘೋಷಿಸಿವೆ. ಪ್ರಸ್ತುತ ಘೋಷಣೆಯಾಗಿರುವ ದರಗಳಿಗೂ ಈ ಹಿಂದೆ ರೂಪಿಸಿರುವ ಮೂಲ ದರದ ಸೂತ್ರಕ್ಕೂ ಹೆಚ್ಚಿನ ವ್ಯತ್ಯಾಸವಿಲ್ಲ ಎಂದು ಹೇಳಿದರು.
ಕಬ್ಬಿನ ದರ ನಿಗದಿ ಸಂದರ್ಭದಲ್ಲಿ ರೈತರಿಗೆ ಹೆಚ್ಚುವರಿ ಹಣ ಪಾವತಿಸುವ ವ್ಯವಸ್ಥೆಯನ್ನೂ ರೂಪಿಸಲಾಗಿದೆ. ಸಕ್ಕರೆಯ ಮಾರಾಟದ ಬೆಲೆ ಹೆಚ್ಚಾದಂತೆ ರೈತರಿಗೂ ಅದರ ಪ್ರಯೋಜನ ದೊರೆಯುವ ರೀತಿಯಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿದೆ. ಹೀಗಾಗಿ ಕೇವಲ ಆರಂಭಿಕ ದರವನ್ನು ಮಾತ್ರ ಗಮನಿಸದೆ, ಒಟ್ಟಾರೆ ರೈತರಿಗೆ ದೊರೆಯುವ ಹಣವನ್ನೂ ಪರಿಗಣಿಸಬೇಕು. ರೈತರಿಗೆ ಹೆಚ್ಚಿನ ಲಾಭ ಸಿಗಬೇಕು ಎಂಬುದೇ ನಮ್ಮ ಆಶಯವಾಗಿದೆ ಎಂದರು.
ಇಳುವರಿ ಕಡಿಮೆ; ಕಬ್ಬು ಖರೀದಿಸಲು ಕಾರ್ಖಾನೆಗಳ ಪೈಪೋಟಿ: ಈ ಬಾರಿ ಕಬ್ಬಿನ ಇಳುವರಿ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಸಕ್ಕರೆ ಕಾರ್ಖಾನೆಗಳ ನಡುವೆ ಕಬ್ಬು ಖರೀದಿಸಲು ಪೈಪೋಟಿ ಉಂಟಾಗಿದೆ. ರೈತರಿಂದ ಕಬ್ಬು ಪಡೆಯಲು ಕಾರ್ಖಾನೆಗಳು ಹೆಚ್ಚಿನ ದರ ಘೋಷಿಸುತ್ತಿವೆ. ಮಹಾರಾಷ್ಟ್ರದಲ್ಲಿ ಮೊದಲಿನಿಂದಲೂ ಕರ್ನಾಟಕಕ್ಕಿಂತ ಹೆಚ್ಚಿನ ದರ ನೀಡುವ ಪದ್ಧತಿ ಇದೆ. ಅಲ್ಲಿನ ಕಾರ್ಖಾನೆಗಳು ರೈತರಿಗೆ ಹೆಚ್ಚಿನ ದರ ನೀಡುತ್ತಾ ಬಂದಿವೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಕಾರ್ಖಾನೆಗಳ ದರವನ್ನು ಮಹಾರಾಷ್ಟ್ರದ ದರದೊಂದಿಗೆ ಹೋಲಿಕೆ ಮಾಡಲಾಗುತ್ತಿದೆ. ಕೇವಲ ಬೆಳಗಾವಿ ಜಿಲ್ಲೆಯಲ್ಲಿ ಮಾತ್ರವಲ್ಲದೆ, ಕಲಬುರಗಿ ಮತ್ತು ಹಾವೇರಿ ಜಿಲ್ಲೆಗಳಲ್ಲಿಯೂ ಕಾರ್ಖಾನೆಗಳು ವಿಭಿನ್ನ ದರಗಳನ್ನು ನೀಡುತ್ತಿವೆ ಎಂದು ತಿಳಿಸಿದರು.
ನ. 26ರ ಗಡುವಿನ ಬಗ್ಗೆ ಕೇಂದ್ರ ಸರ್ಕಾರವೇ ನಿರ್ಧಾರ ಕೈಗೊಳ್ಳಬೇಕು: ಸಕ್ಕರೆಯ ಕನಿಷ್ಠ ಮಾರಾಟ ಬೆಲೆ (ಎಂಎಸ್ಪಿ) ಹೆಚ್ಚಳಕ್ಕೆ ನವೆಂಬರ್ 26ರ ಗಡುವು ವಿಧಿಸಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಕ್ಕರೆಯ ಎಂಎಸ್ಪಿ ಹೆಚ್ಚಳದ ಬೇಡಿಕೆ ಪರಿಶೀಲಿಸಲು ಕೇಂದ್ರ ಸರ್ಕಾರ ಸಮಿತಿ ರಚಿಸಿದೆ. ರೈತರ ಬೇಡಿಕೆಗಳನ್ನು ಸಮಿತಿ ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕಿದೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರವೇ ಪ್ರಮುಖ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಹೇಳಿದರು.
ಹಿಂದಿನ ಬಿಜೆಪಿ ಸರ್ಕಾರದಲ್ಲಿ ದಕ್ಷಿಣ ಕ್ಷೇತ್ರಕ್ಕೆ ಶೇ.70ರಷ್ಟು ಅನುದಾನ; ಉತ್ತರ ಕ್ಷೇತ್ರಕ್ಕೆ ಅನ್ಯಾಯ: ನಗರದ ರಸ್ತೆ ಗುಂಡಿಗಳ ವಿಚಾರವಾಗಿ ಬಿಜೆಪಿ ಶಾಸಕ ಅಭಯ ಪಾಟೀಲ್ ನೀಡಿರುವ ಪ್ರತಿಭಟನೆಯ ಎಚ್ಚರಿಕೆಗೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ, ಬೆಳಗಾವಿ ನಗರದ ರಸ್ತೆ ನಿರ್ವಹಣೆ ಮತ್ತು ಗುಂಡಿಗಳನ್ನು ಮುಚ್ಚುವ ಜವಾಬ್ದಾರಿ ಮಹಾನಗರ ಪಾಲಿಕೆಯದ್ದಾಗಿದೆ. ನಗರದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚದಿದ್ದರೆ ಪ್ರತಿಭಟನೆ ನಡೆಸುವುದಾಗಿ ಹೇಳುವ ಮೊದಲು ಮಹಾನಗರ ಪಾಲಿಕೆಯಲ್ಲಿ ಯಾರ ಆಡಳಿತವಿದೆ ಎಂಬುದನ್ನು ಶಾಸಕ ಅಭಯ ಪಾಟೀಲ್ ತಿಳಿದುಕೊಳ್ಳಬೇಕು ಎಂದು ಹೇಳಿದರು.ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಶೇ.70ರಷ್ಟು ಅನುದಾನವನ್ನು ತೆಗೆದುಕೊಂಡು ಹೋಗಲಾಗಿತ್ತು. ಆದರೆ, ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ಅಗತ್ಯ ಪ್ರಮಾಣದಲ್ಲಿ ಅನುದಾನ ನೀಡಿರಲಿಲ್ಲ. ಆಗ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಿದ್ದವರು ಈಗ ರಸ್ತೆ ಗುಂಡಿಗಳ ವಿಚಾರವಾಗಿ ಪ್ರತಿಭಟನೆ ನಡೆಸುವುದಾಗಿ ಹೇಳುತ್ತಿರುವುದು ಸರಿಯಲ್ಲ. ಪ್ರತಿಭಟನೆಯ ಎಚ್ಚರಿಕೆ ನೀಡುವವರು ತಮ್ಮ ಹಿಂದಿನ ಆಡಳಿತದ ಅವಧಿಯಲ್ಲಿ ಯಾವ ರೀತಿ ಅನುದಾನ ಹಂಚಿಕೆ ಮಾಡಿದ್ದರು ಎಂಬುದನ್ನೂ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಪರೋಕ್ಷವಾಗಿ ಅಭಯ ಪಾಟೀಲ್ ವಿರುದ್ಧ ವಾಗ್ದಾಳಿ ನಡೆಸಿದರು.
ಕೇಂದ್ರದ ಅನುದಾನಕ್ಕಾಗಿ ಬಿಜೆಪಿ ನಾಯಕರು ಧ್ವನಿ ಎತ್ತಲಿ: ಪ್ರತಿಯೊಂದು ವಿಚಾರಕ್ಕೂ ರಾಷ್ಟ್ರಪತಿ ಹಾಗೂ ರಾಜ್ಯಪಾಲರಿಗೆ ಪತ್ರ ಬರೆಯುವ ಬಿಜೆಪಿ ನಾಯಕರು, ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಬರಬೇಕಿರುವ ಅನುದಾನದ ಬಗ್ಗೆಯೂ ಧ್ವನಿ ಎತ್ತಬೇಕು. ಜಲಜೀವನ್ ಮಿಷನ್ ಯೋಜನೆಯಡಿ ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಸುಮಾರು 10 ಸಾವಿರ ಕೋಟಿ ರೂ. ಅನುದಾನ ಬರಬೇಕಿದೆ. ಈ ಅನುದಾನವನ್ನು ಬಿಡುಗಡೆ ಮಾಡಿಸುವ ನಿಟ್ಟಿನಲ್ಲಿ ಬಿಜೆಪಿ ನಾಯಕರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು. ರಾಜ್ಯದ ಅಭಿವೃದ್ಧಿಗೆ ಅಗತ್ಯವಿರುವ ಅನುದಾನ ತರುವುದಕ್ಕೂ ಅವರು ಪ್ರಯತ್ನಿಸಬೇಕು ಎಂದು ಹೇಳಿದರು.
ಪಾಲಿಕೆಯ ತೆರಿಗೆ ಸೋರಿಕೆಗೆ ಕಡಿವಾಣ ಹಾಕಿ: ಇದೇ ವೇಳೆ ಬೆಳಗಾವಿ ಮಹಾನಗರ ಪಾಲಿಕೆಯ ಆರ್ಥಿಕ ನಿರ್ವಹಣೆ ಮತ್ತು ತೆರಿಗೆ ಸಂಗ್ರಹ ವ್ಯವಸ್ಥೆಯ ಬಗ್ಗೆಯೂ ಪ್ರಸ್ತಾಪಿಸಿದ ಸಚಿವರು, ಪಾಲಿಕೆಯಲ್ಲಿ ತೆರಿಗೆ ಸೋರಿಕೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯವಿದೆ. ನಗರದಲ್ಲಿ ತೆರಿಗೆ ಸಂಗ್ರಹ ವ್ಯವಸ್ಥೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ರೂಪಿಸಬೇಕು. ಇದಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ತೆರಿಗೆ ಸಂಗ್ರಹದ ವ್ಯಾಪ್ತಿಯನ್ನು ಹೆಚ್ಚಿಸಬೇಕು. ತೆರಿಗೆ ಸೋರಿಕೆಯನ್ನು ತಡೆಗಟ್ಟುವ ಮೂಲಕ ಪಾಲಿಕೆಯ ಆದಾಯ ವೃದ್ಧಿಗೆ ಅಧಿಕಾರಿಗಳು ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಬೆಳಗಾವಿ ಜಿಲ್ಲೆ ವಿಭಜನೆ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜಿಲ್ಲೆ ವಿಭಜನೆಗೆ ಸಂಬಂಧಿಸಿದಂತೆ ಗೋಕಾಕ ಮತ್ತು ಚಿಕ್ಕೋಡಿ ಭಾಗಗಳಿಂದ ಪ್ರತ್ಯೇಕ ಜಿಲ್ಲೆಯ ಬೇಡಿಕೆಗಳು ಕೇಳಿಬರುತ್ತಿವೆ. ಆದರೆ ಅಧಿವೇಶನದ ಸಂದರ್ಭದಲ್ಲಿ ಬೈಲಹೊಂಗಲ, ಅಥಣಿ, ರಾಮದುರ್ಗ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ತಮ್ಮ ತಮ್ಮ ಪ್ರದೇಶಗಳನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ರಚಿಸಬೇಕೆಂಬ ಬೇಡಿಕೆ ಮುಂದಿಡುತ್ತಾರೆ. ಹೀಗಾಗಿ ಬೆಳಗಾವಿ ಜಿಲ್ಲೆಯನ್ನು ಯಾವ ರೀತಿಯಲ್ಲಿ ವಿಭಜಿಸಬೇಕು ಎಂಬುದರ ಕುರಿತು ವಿವಿಧ ಪ್ರದೇಶಗಳ ನಡುವೆ ಒಮ್ಮತದ ಅಭಿಪ್ರಾಯ ಮೂಡುತ್ತಿಲ್ಲ. ಜಿಲ್ಲೆ ವಿಭಜನೆಯಾಗಬೇಕು ಎಂಬುದು ತಮ್ಮ ಅಭಿಪ್ರಾಯವಾಗಿದ್ದರೂ, ಈ ವಿಚಾರದಲ್ಲಿ ಎಲ್ಲರ ಸಹಮತ ಮುಖ್ಯವಾಗಿದೆ ಎಂದು ಸ್ಪಷ್ಟಪಡಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




