*ಮುಂದುವರಿದ ಕಬ್ಬಿನ ಕಗ್ಗಂಟು: ಹೊಸ ದರಕ್ಕೆ ರೈತರು, ಕಾರ್ಖಾನೆ ಮಾಲೀಕರು ಒಪ್ಪಿದ್ದಾರೆ ಎಂದ ಸತೀಶ ಜಾರಕಿಹೊಳಿ* *ರೈತರ ಜೈಲ್ ಭರೋ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ ಜಿಲ್ಲಾಡಳಿತ!*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಬ್ಬಿನ ಬೆಲೆ ನಿಗದಿ ವಿಚಾರವಾಗಿ ರೈತರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ನಡುವೆ ನಡೆಯುತ್ತಿದ್ದ ಹಗ್ಗಜಗ್ಗಾಟ ಮುಗಿದಿದ್ದು, ಸತತ ಸಭೆಗಳ ಬಳಿಕ ಬೆಳಗಾವಿ ಜಿಲ್ಲೆಯ ಸಕ್ಕರೆ ಕಾರ್ಖಾನೆ ಮಾಲೀಕರು ಪ್ರತಿ ಟನ್ ಕಬ್ಬಿಗೆ ₹3,600 ನೀಡಲು ಒಪ್ಪಿಕೊಂಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಘೋಷಿಸಿದ್ದಾರೆ.

ಆದರೆ, ರೈತರು ನಾಳೆ ಜೈಲ್ ಭರೋ ಚಳವಳಿ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಸೆಕ್ಷನ್ 163ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಬುಧವಾರ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ರೈತ ಮುಖಂಡರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸತೀಶ್ ಜಾರಕಿಹೊಳಿ, ಕಾರ್ಖಾನೆ ಮಾಲೀಕರು ₹3,600 ದರ ನೀಡಲು ಒಪ್ಪಿದ್ದಾರೆ. ರೈತ ಮುಖಂಡರಾದ ಚೂನಪ್ಪ ಪೂಜಾರಿ ಹಾಗೂ ಶಶಿಕಾಂತ ಗುರೂಜಿ ಕೂಡ ಈ ದರಕ್ಕೆ ಸಮ್ಮತಿ ಸೂಚಿಸಿದ್ದಾರೆ ಎಂದು ತಿಳಿಸಿದರು.
ಬೆಳಗಾವಿ ಜಿಲ್ಲೆಗೆ ಮಾತ್ರ ₹3,600 ದರ
₹3,600 ದರವು ಬೆಳಗಾವಿ ಜಿಲ್ಲೆಗೆ ಮಾತ್ರ ಅನ್ವಯವಾಗಲಿದೆ. ಬೇರೆ ಜಿಲ್ಲೆಗಳಲ್ಲಿ ಅಲ್ಲಿನ ಪರಿಸ್ಥಿತಿಗೆ ಅನುಗುಣವಾಗಿ ವಿಭಿನ್ನ ದರ ನಿಗದಿಯಾಗಲಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.
ಮೊದಲು ಸಕ್ಕರೆ ಕಾರ್ಖಾನೆಗಳು ಆರಂಭವಾಗಲು ಎಲ್ಲ ರೈತ ಮುಖಂಡರು ಹಾಗೂ ಹೋರಾಟಗಾರರು ಅವಕಾಶ ಮಾಡಿಕೊಡಬೇಕು. ಕಾರ್ಖಾನೆಗಳು ಆರಂಭವಾದ ಬಳಿಕವೂ ಸರ್ಕಾರದ ವಿರುದ್ಧ ಹೋರಾಟ ನಡೆಸಲು ಅವಕಾಶವಿದೆ. ರೈತರ ಬೇಡಿಕೆಗಳಿಗಾಗಿ ಹೋರಾಟ ಮುಂದುವರಿಸಬಹುದು ಎಂದು ಹೇಳಿದರು.
ಇದೇ ವೇಳೆ, ಗುರುವಾರ ರೈತರು ಹಮ್ಮಿಕೊಂಡಿರುವ ಜೈಲ್ ಭರೋ ಕಾರ್ಯಕ್ರಮವನ್ನು ಕೈಬಿಡಬೇಕು. ಕಾರ್ಖಾನೆಗಳ ಆರಂಭಕ್ಕೆ ಎಲ್ಲ ಮುಖಂಡರು ಸಹಕಾರ ನೀಡಬೇಕು ಎಂದು ಸತೀಶ ಜಾರಕಿಹೊಳಿ ಮನವಿ ಮಾಡಿದರು. ಸಚಿವರ ಈ ಘೋಷಣೆಯಿಂದ ಹಲವು ದಿನಗಳಿಂದ ಕಬ್ಬಿನ ದರಕ್ಕಾಗಿ ನಡೆಯುತ್ತಿದ್ದ ರೈತರ ಹೋರಾಟಕ್ಕೆ ತಾತ್ಕಾಲಿಕ ವಿರಾಮ ಸಿಗುವ ನಿರೀಕ್ಷೆ ಮೂಡಿದೆ.
ನಿಷೇಧಾಜ್ಞೆ ಜಾರಿ
ಆದರೆ ರೈತರು ಜೈಲ್ ಭರೋ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಗುರುವಾರ ಬೆಳಗಾವಿಯಲ್ಲಿ ಬಿಎನ್ಎಸ್ 163ರ ಪ್ರಕಾರ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. 5 ಜನರಿಗಿಂತ ಹೆಚ್ಚು ಸೇರುವಂತಿಲ್ಲ. ಪಾದಯಾತ್ರೆ ಬೆಳಗಾವಿ ಪ್ರವೇಶಕ್ಕೆ ಅವಕಾಶವಿಲ್ಲ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಇದರಿಂದಾಗಿ ಕಬ್ಬಿನ ಬೆಲೆ ಹೋರಾಟವನ್ನು ರೈತರು ಮುಂದುವರಿಸುವ ಸಾಧ್ಯತೆ ಹೆಚ್ಚಾಗಿದೆ.




