ಕಕ್ಕೇರಿ ಗ್ರಾಮದಲ್ಲಿ ಗೃಹಿಣಿ ಆತ್ಮಹತ್ಯೆ
ಪ್ರಗತಿವಾಹಿನಿ ಸುದ್ದಿ, ಖಾನಾಪುರ:
ತಾಲ್ಲೂಕಿನ ಕಕ್ಕೇರಿ ಗ್ರಾಮದ ಗೃಹಿಣಿ ಲಕ್ಷ್ಮೀ ಬಸವರಾಜ ಅಂಗಡಿ (22) ಶುಕ್ರವಾರ ರಾತ್ರಿ ವಿಷ ಸೇವಿಸಿ ಮೃತಪಟ್ಟಿದ್ದಾಳೆ.
ಪತಿ ಹಾಗೂ ಅವರ ಮನೆಯವರು ಕಿರುಕುಳ ನೀಡಿದ್ದರಿಂದ ಲಕ್ಷ್ಮೀ ಸಾವನ್ನಪ್ಪಿದ್ದಾರೆ ಎಂದು ಲಕ್ಷೀ ಅವರ ತವರು ಮನೆಯವರು ಶನಿವಾರ ನಂದಗಡ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರು ಸ್ವೀಕರಿಸಿರುವ ನಂದಗಡ ಪೊಲೀಸರು ಲಕ್ಷ್ಮೀ ಅವರ ಪತಿ ಬಸವರಾಜ, ಅತ್ತೆ ಮಂಜವ್ವ, ಮಾವ ಶಿವಾನಂದ, ಮೈದುನ ಈರಣ್ಣ ಮತ್ತು ನಾದಿನಿ ಉಮಾಶ್ರೀ ವಿರುದ್ಧ ಪ್ರಕರಣ
ದಾಖಲಿಸಿಕೊಂಡಿದ್ದಾರೆ.
ಘಟನೆಯ ವಿವರ
ಬೈಲಹೊಂಗಲ ತಾಲ್ಲೂಕು ಮುರಗೋಡ ಗ್ರಾಮದ ಲಕ್ಷ್ಮೀ 2 ವರ್ಷಗಳ ಹಿಂದೆ ತಾಲ್ಲೂಕಿನ
ಕಕ್ಕೇರಿ ಗ್ರಾಮದ ಬಸವರಾಜ ಅವರನ್ನು ಮದುವೆಯಾಗಿದ್ದರು. ಈ ದಂಪತಿಗೆ ಈಗ ಒಂದು ವರ್ಷದ
ಗಂಡು ಮಗುವಿದೆ.
ಮದುವೆಯಾದಾಗಿನಿಂದಲೂ ತಮ್ಮ ಪತಿಯ ಮನೆಯವರು ತಮಗೆ ತವರಿನಿಂದ
ವರದಕ್ಷಿಣೆ ತರುವಂತೆ ಕಿರುಕುಳ ಮತ್ತು ಮಾನಸಿಕ ಹಿಂಸೆ ನೀಡುತ್ತಿರುವುದಾಗಿ ಲಕ್ಷ್ಮೀ
ತನ್ನ ತಾಯಿಗೆ ತಿಳಿಸಿದ್ದರು.
ಈ ವಿಷಯವಾಗಿ ತವರುಮನೆಯವರು ಲಕ್ಷ್ಮೀ ಅವರ ಪತಿಯನ್ನು ಭೇಟಿಯಾಗಿ ಲಕ್ಷ್ಮೀಗೆ ತೊಂದರೆ ನೀಡದಂತೆ ಬುದ್ಧಿವಾದ ಹೇಳಿದ್ದರು. ಆದರೂ ಪತಿ ಹಾಗೂ ಅವರ ಮನೆಯವರು ಕಿರುಕುಳ ಮುಂದುವರೆಸಿದ್ದರಿಂದ ಬೇಸತ್ತ ಲಕ್ಷ್ಮೀ ಶುಕ್ರವಾರ ರಾತ್ರಿ ತಮ್ಮ ಮನೆಯಲ್ಲೇ ವಿಷ ಸೇವಿಸಿದ್ದರಿಂದ ಸ್ಥಳೀಯರು ಅವರನ್ನು ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸುವಾಗಲೇ ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಶನಿವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಲಕ್ಷ್ಮೀ ಅವರ ಮರಣೋತ್ತರ
ಪರೀಕ್ಷೆ ನಡೆದು ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸಿದ್ದು, ಸಿಪಿಐ ಮೋತಿಲಾಲ ಪವಾರ
ಈ ಪ್ರಕರಣದ ತನಿಖೆಯನ್ನು ಕೈಗೊಂಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ