ದೆಹಲಿ ಮತ್ತು ಲಂಡನ್ ದಾಳಿ ಹಿಂದೆ ಸುಲೈಮಾನಿ ಕೈವಾಡ: ಹತ್ಯೆ ಸಮರ್ಥಿಸಿಕೊಂಡ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಭಾರತ ಮತ್ತು ಲಂಡನ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಹಿಂದೆ ಇರಾನ್ ಸೇನಾ ಮುಖ್ಯಸ್ಥ ಖಾಸಿಮ್ ಸುಲೈಮಾನಿ ಕೈವಾಡವಿತ್ತು. ಅಲ್ಲದೆ ಇನ್ನು ಹಲವೆಡೆಗಳಲ್ಲಿ ಆತ ದಾಳಿ ನಡೆಸಲು ಸಂಚು ರೂಪಿಸಿದ್ದ. ಇದೇ ಕಾರಣಕ್ಕಾಗಿ ಸುಲೈಮಾನಿಯನ್ನು ವಾಯುದಾಳಿಯಲ್ಲಿ ಹತ್ಯೆ ನಡೆಸಿದ್ದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಮರ್ಥಿಸಿಕೊಂಡಿದ್ದಾರೆ.

ಫ್ಲೋರಿಡಾದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್, ಸುಲೈಮಾನಿಯ ಉಗ್ರವಾದದ ಯುಗಾಂತ್ಯವಾಗಿದೆ. ಆತ ಮುಗ್ಧ ನಾಗರಿಕರನ್ನು ಭಯೋತ್ಪಾದನಾ ಕೃತ್ಯಕ್ಕೆ ಬಳಸಿಕೊಳ್ಳುತ್ತಿದ್ದ. ಭಾರತದ ನವದೆಹಲಿಯಲ್ಲಿ ಅಮೆರಿಕ ರಾಯಭಾರ ಕಛೇರಿ ಹಾಗೂ ಲಂಡನ್ ದಾಳಿಯ ಹಿಂದೆ ಆತನ ಕೈವಾಡವಿತ್ತು ಎಂದು ಆರೋಪಿಸಿದ್ದಾರೆ.

ಅಲ್ಲದೇ ಸುಲೈಮಾನಿ ಬಾಗ್ದಾದ್‍ನಲ್ಲಿರುವ ಅಮೆರಿಕ ರಾಯಭಾರಿ ಕಚೇರಿಗಳ ಮೇಲೆ ದಾಳಿ ನಡೆಸಿ ಹಲವರ ಸಾವಿಗೆ ಕಾರಣನಾಗಿದ್ದ.  ಅಲ್ಲದೇ ಅಮೆರಿಕ ರಾಯಭಾರಿಗಳು ಮತ್ತು ಸೇನಾಪಡೆ ಅಧಿಕಾರಿಗಳನ್ನು ಕೊಲ್ಲಲು ಸಂಚು ರೂಪಿಸಿದ್ದ. ಇತ್ತೀಚೆಗೆ ಅಮೆರಿಕವನ್ನು ಟಾರ್ಗೆಟ್ ಮಾಡಿ ಇರಾಕ್ ನಡೆಸಿದ ದಾಳಿಗಳಲ್ಲಿ ನಮ್ಮ ಸೈನಿಕರು ಸಾವನ್ನಪ್ಪಿದ್ದರು. ನಾಲ್ವರು ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದರು. ಸುಲೈಮನಿ ಕ್ರೂರ ಮನಸ್ಥಿತಿಗೆ ಅಮಾಯಕರು ಬಲಿಯಾಗುತ್ತಿದ್ದರು. ಇದೀಗ ಆತನ ಅಟ್ಟಹಾಸ ಕೊನೆಗೊಂಡಿದೆ ಎಂದಿದ್ದಾರೆ.

ಸುಲೈಮಾನಿ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಭಯೋತ್ಪಾದನ ದಾಳಿಗಳನ್ನು ನಡೆಸಲು ಸಂಚು ರೂಪಿಸುತ್ತಿದ್ದ. ಅಮೆರಿಕ ಸೇನಾಪಡೆ ಇಂತಹ ದಾಳಿ ಬಹಳ ಹಿಂದೆಯೇ ನಡೆಸಬೇಕಿತ್ತು. ಇದರಿಂದ ಸಾವಿರಾರು ಜನರ ಜೀವವನ್ನು ರಕ್ಷಿಸಬಹುದಿತ್ತು. ಇರಾನ್ ನಲ್ಲಿ ಕ್ರೂರ ಪ್ರತಿಭಟನೆಗಳನ್ನು ನಡೆಸಿ, ಸಾವಿರಾರು ಮಂದಿಯನ್ನು ಕ್ರೂರವಾಗಿ ಹಿಂಸೆಗೊಳಪಟ್ಟು ಸಾವನ್ನಪ್ಪಿದ್ದರು. ಯುದ್ಧವನ್ನು ನಿಲ್ಲಿಸಲು ನಾವು ದಾಳಿಯನ್ನು ನಡೆಸಿದ್ದೇವೆ. ಇರಾನಿನ ಜನರ ಬಗ್ಗೆ ನನಗೆ ಅಪಾರ ಗೌರವಿದೆ ಎಂದು ಟ್ರಂಪ್  ವಾಯುದಾಳಿಯನ್ನು ಸಮರ್ಥಿಸಿಕೊಂಡಿದ್ದಾರೆ.

ಅಮೆರಿಕ ಸೇನಾ ಪಡೆಗಳು ಶುಕ್ರವಾರ ಇರಾಕ್ ರಾಜಧಾನಿ ಬಾಗ್ದಾದ್‌ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಕ್ಷಿಪಣಿ ದಾಳಿ ನಡೆಸಿದ್ದವು. ಈ ದಾಳಿಯಲ್ಲಿ  ಇರಾನ್ ಸೇನಾ ಮುಖ್ಯಸ್ಥ ಖಾಸಿಂ ಸುಲೈಮಾನಿ ಹಾಗೂ ಸೇನೆಯ ಉಪ ಮುಖ್ಯಸ್ಥ ಅಬು ಮೆಹದಿ ಅಲ್‌ ಮುಹಂದಿಸ್‌ ಇಬ್ಬರೂ ಸಾವನ್ನಪ್ಪಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button