*ಕರಾಳದಿನ ಆಚರಿಸಿದ 150 ಎಂಇಎಸ್ ಪುಂಡರ ವಿರುದ್ಧ ಸುಮೋಟೋ ಕೇಸ್*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವದ ವೇಳೆ ಕರಾಳ ದಿನ ಆಚರಿಸಿದ 150 ಎಂಇಎಸ್ ಪುಂಡರ ವಿರುದ್ಧ ಬೆಳಗಾವಿ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವದಂದು ಜಿಲ್ಲಾಡಳಿತ, ಪೊಲೀಸ್ ಇಲಾಖೆ ಅನುಮತಿ ನೀಡದಿದ್ದರೂ ಕೂಡ ಎಂಇಎಸ್ ಮುಖಂಡರು ಸೇರಿ ಕರಾಳ ದಿನಾಚರಣೆ ಆಚರಣೆ ನಡೆಸಿದ್ದರು.
ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯಿಂದ ಯಾವುದೇ ಅನುಮತಿ ಇಲ್ಲದಿದ್ದರೂ ಕೂಡ ಎಂಇಎಸ್ ಸಂಘಟನೆ ಕನ್ನಡ, ಕರ್ನಾಟಕದ ವಿರುದ್ಧ ಘೋಷಣೆ ಕೂಗಿ, ಮಹಾರಾಷ್ಟ್ರದಿಂದ ನಮ್ಮ ನಾಯಕರು ಬರುತ್ತಾರೆ, ಅವರನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂಬ ಅಹಂಕಾರದ ಹೇಳಿಕೆಗಳನ್ನು ನೀಡಿದ್ದರು.
ಇದೀಗ ಈ ಘಟನೆಗೆ ಸಂಬಂಧಪಟ್ಟಂತೆ ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ದೂರು ದಾಖಲಿಸಲಾಗಿದ್ದು, ಭಾಷಾ ವಿಷ ಬೀಜ ಬಿತ್ತಲು ಯತ್ನಿಸಿo ಎಂಇಎಸ್ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಕಾರವಾರ, ಬೀದರ್, ಬಾಲ್ಕಿ, ನಿಪ್ಪಾಣಿ, ಬೆಳಗಾವಿ ನಮ್ಮದೆ ಎಂದು ಘೋಷಣೆ ಕೂಗುವ ಮೂಲಕ ಕನ್ನಡಿಗರನ್ನು ಕೆರಳಿಸಿತ್ತು. ಜಿಲ್ಲೆಯಾದ್ಯಂತ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿದ್ದಾಗ ಪುಂಡ ಎಂಇಎಸ್ ಬೆಳಗಾವಿಯ ಧರ್ಮವೀರ ಸಂಭಾಜಿ ಮೈದಾನದಿಂದ ಕಪ್ಪು ಬಟ್ಟೆ ಧರಿಸಿ ಕರಾಳ ದಿನಾಚರಣೆ ಆಚರಿಸಿದ್ದರು, ಜೊತೆಗೆ ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿದ್ದರು.



