Kannada NewsKarnataka NewsLatest

*ಸೂಪಾ ಅಣೆಕಟ್ಟು ಭರ್ತಿ: ಪ್ರವಾಹದ ಎಚ್ಚರಿಕೆ*

ಪ್ರಗತಿವಾಹಿನಿ ಸುದ್ದಿ: ಕಾಳಿ ನದಿ ಯೋಜನೆ 1ನೇ ಹಂತ ಸೂಪಾ ಅಣೆಕಟ್ಟೆ ಜಲಾನಯನ ಪ್ರದೇಶದಲ್ಲಿ ಸತತ ಮಳೆ ಬೀಳುತ್ತಿರುವ ಹಿನ್ನೆಲೆ ಜಲಾಶಯದ ಕೆಳಹಂತದ ಪ್ರದೇಶದಲ್ಲಿ ಪ್ರವಾಹದ ಕುರಿತು ಕೆಪಿಸಿಸಿಎಲ್ ವತಿಯಿಂದ ಮೂರನೆಯ ಹಾಗೂ ಅಂತಿಮ ಮುನ್ನೆಚ್ಚರಿಕೆ ನೀಡಲಾಗಿದೆ.

ಸೂಪಾ ಅಣೆಕಟ್ಟೆಯ ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆ ಬೀಳುತ್ತಿದ್ದು, ಜಲಾಶಯಕ್ಕೆ ಹೇರಳವಾಗಿ ನೀರು ಹರಿದು ಬರುತ್ತಿರುವುದರಿಂದ ನೀರಿನ ಮಟ್ಟವು ಸತತವಾಗಿ ಏರುತ್ತಿದೆ. ಜಲಾಶಯದ ಗರಿಷ್ಠ ಮಟ್ಟವು 564.00 ಮೀಟರ ಆಗಿದ್ದು, ನೀರಿನ ಸಂಗ್ರಹಣ ಸಾಮರ್ಥ್ಯ 147.55 ಟಿ.ಎಂ.ಸಿ. ಇರುತ್ತದೆ. ಜಲಾಸಯದ ಈಗಿನ ನೀರಿನ ಮಟ್ಟವು 558.87 ಮೀಟರ್ ಆಗಿದ್ದು, 126.345 ಟಿಎಂಸಿ ನೀರಿನೊಂದಿಗೆ ಒಟ್ಟು ಸಾಮರ್ಥ್ಯದ ಶೇ. 85.63ರಷ್ಟು ಭರ್ತಿಯಾಗಿದೆ.

ಇದಲ್ಲದೆ, ಜಲಾಶಯದ ಒಳಹರಿವು ಸುಮಾರು 21,261 ಕ್ಯೂಸೆಕ್ ಇದ್ದು, ನೀರಿನ ಹರಿವು ಇದೇ ರೀತಿ ಮುಂದುವರಿದರೆ ಜಲಾಶಯವು ಗರಿಷ್ಠ ಮಟ್ಟ ತಲುಪುವ ಸಾಧ್ಯತೆ ಇರುತ್ತದೆ. ಆದ್ದರಿಂದ ಆಣೆಕಟ್ಟು ಸುರಕ್ಷತಾ ದೃಷ್ಟಿಯಿಂದ ಹೆಚ್ಚುವರಿ ಜಲಾಶಯದ ನೀರನ್ನು ಯಾವುದೇ ಸಮಯದಲ್ಲಿ ಹೊರ ಬಿಡಲಾಗುವುದು ಎಂದು ಕೆಪಿಸಿಎಲ್ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಆಣೆಕಟ್ಟೆಯ ಕೆಳದಂಡೆಯಲ್ಲಿ ಹಾಗೂ ನದಿಯ ಪಾತ್ರದುದ್ದಕ್ಕೂ ವಾಸಿಸುತ್ತಿರುವ ಸಾರ್ವಜನಿಕರು ತಮ್ಮ ಜನ, ಜಾನುವಾರು ಇತ್ಯಾದಿಗಳೊಂದಿಗೆ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳ್ಳಬೇಕು. ಆಣೆಕಟ್ಟೆಯ ಕೆಳಭಾಗದ ನದಿ ಪಾತ್ರದಲ್ಲಿ ದೋಣಿ ಸಂಚಾರ, ಮೀನುಗಾರಿಕೆ, ಜಲಸಾಹಸ ಕ್ರೀಡಾ ಚಟುವಟಿಕೆಗಳನ್ನು ಮತ್ತು ಇತರೆ ಚಟುವಟಿಕೆಗಳನ್ನು ಮಳೆಗಾಲ ಮುಗಿಯುವವರೆಗೂ ನಡೆಸಬಾರದು ಎಂದು ಮನವಿ ಮಾಡಿದೆ.

Home add -Advt

Related Articles

Back to top button