ಒಂದು ವರ್ಷದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಜನ ಸೇವೆಗೆ ಸಜ್ಜು : ಶಾಸಕ ಅನಿಲ ಬೆನಕೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮುಂದಿನ ಒಂದು ವರ್ಷದಲ್ಲಿ ಜಿಲ್ಲೆಯ ಬಹುನಿರೀಕ್ಷಿತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿಯನ್ನು ಪೂರ್ಣಗೊಳಿಸಿ ಸಾರ್ವಜನಿಕರ ಸೇವೆಗೆ ಅಣಿಗೊಳಿಸಲಾಗುವುದು ಎಂದು ಬೆಳಗಾವಿ ಉತ್ತರ ಶಾಸಕ ಅನಿಲ ಬೆನಕೆ ಅವರು ಭರವಸೆ ನೀಡಿದರು.
ಬಿಮ್ಸ್ ನಲ್ಲಿ ನಾಗರಿಕರ-ವಿಕಲ ಚೇತನರ ಕೌಂಟರ್, ಸಹಾಯವಾಣಿ ಮತ್ತು ಆನ್ ಲೈನ್ ಪಾವತಿ ಕೇಂದ್ರ, ನವೀಕೃತ ಪಿಡಿಯಾಟ್ರಿಕ್ ವಾರ್ಡ್, ಬಿಮ್ಸ್ ಸಿಬ್ಬಂದಿ ಮಕ್ಕಳಿಗೆ ಶಿಶುವಿಹಾರನ್ನು ಶುಕ್ರವಾರ (ಜುಲೈ 8) ಉದ್ಘಾಟಿಸಿ ಅವರು ಮಾತನಾಡಿದರು.
ದಿನದಿಂದ ದಿನಕ್ಕೆ ಬಿಮ್ಸ್ ಸಾರ್ವಜನಿಕ ಸೇವೆಗಾಗಿ ವಿಶಿಷ್ಟ ಪ್ರಯೋಗಗಳನ್ನು ಕೈಗೊಳ್ಳುತ್ತಿದೆ. ಬಹುತೇಕ ನವೀನ ಕಾರ್ಯಕ್ರಮಗಳಲ್ಲಿ ಪ್ರಾಮಾಣಿಕ ಪ್ರಯತ್ನದೊಂದಿಗೆ ಯಶಸ್ಸನ್ನೂ ಕಾಣುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಣೆ:
ಆಸ್ಪತ್ರೆ ಆವರಣದಲ್ಲಿರುವ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸರಕಾರಿ ಕೋಟಾದಡಿ ಖಾಸಗಿ ಕಾಲೇಜಿನಲ್ಲಿ ಓದುತ್ತಿರುವ ಎಸ್ಸಿ/ಎಸ್ಟಿಯ 23 ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ ಕಾರ್ಯಕ್ರಮನ್ನೂ ಉದ್ಘಾಟಿಸಿದ ಶಾಸಕ ಅನಿಲ ಬೆನಕೆ ಅವರು ದೇಶದಲ್ಲೇ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ 12ನೇ ಸ್ಥಾನವನ್ನು ಪಡೆದುಕೊಂಡಿದೆ ಎಂದು ಖಾಸಗಿ ಮಾಸ ಪತ್ರಿಕೆ (ಔಟ್ ಲುಕ್) ವರದಿ ಮಾಡಿದೆ. ಮುಂದಿನ ಒಂದು ವರ್ಷದ ಅವಧಿಯಲ್ಲಿ ಬಿಮ್ಸ್ 5ನೇ ಸ್ಥಾನವನ್ನು ಪಡೆದುಕೊಳ್ಳುವಂತೆ ಮಾಡಲು ಹಾಗೂ ನರ್ಸಿಂಗ್ ವಿದ್ಯಾರ್ಥಿಗಳಿಗೂ ಉಚಿತ ಲ್ಯಾಪ್ ಟಾಪ್ ವಿತರಿಸಲು ಸರ್ಕಾರಕ್ಕೆ ಒತ್ತಾಯಿಸುತ್ತೇನೆ ಎಂದು ಭರವಸೆ ನೀಡಿದರು.
ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಬೆಳಗಾವಿ ಪ್ರಾದೇಶಿಕ ಆಯುಕ್ತರಾದ ಆಮ್ಲಾನ್ ಆದಿತ್ಯ ಬಿಸ್ವಾಸ್ ಅವರು ಸೂಪರ್ ಸ್ಪೆಷಾಲಿಟಿ ಸೌಲತ್ತುಗಳ ಕೊರತೆಯ ನಡುವೆಯೂ ಬಿಮ್ಸ್ ಬಡವರಿಗೆ, ದುರ್ಬಲರಿಗೆ ಅಗತ್ಯ ಸೇವೆ ನೀಡುವ ಮೂಲಕ ದೇಶದ ಗಮನ ಸೆಳೆಯುತ್ತಿದೆ. ಕಳೆದ 8ರಿಂದ 10 ತಿಂಗಳಲ್ಲಿ ಬಿಮ್ಸ್ ಆದಾಯವೂ ದ್ವಿಗುಣಗೊಂಡಿದೆ. ದೇಶದ ಪ್ರಗತಿ ಪಥದಲ್ಲಿರುವ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಸಾಲಿನಲ್ಲಿ ಬಿಮ್ಸ್ ಆಡಳಿತಾತ್ಮಕವಾಗಿ 12ನೇ ಸ್ಥಾನ, ಮೂಲಭೂತ ಸೌಕರ್ಯಗಳ ವಿಭಾಗದಲ್ಲಿ 5ನೇ ಸ್ಥಾನ ಪಡೆದುಕೊಂಡಿದೆ ಎಂದು ಶ್ಲಾಘಿಸಿದರು.
ವಿವಿಧ ಕೇಂದ್ರಗಳ ಪರಿವೀಕ್ಷಣೆ:
ಸಾರ್ವಜನಿಕ ಸೇವೆಗಾಗಿ ಆರಂಭಿಸಲಾಗಿರುವ ನಾಗರಿಕರ- ವಿಕಲ ಚೇತನರ ಕೌಂಟರ್, ಸಹಾಯವಾಣಿ ಮತ್ತು ಆನ್ ಲೈನ್ ಪಾವತಿ ಕೇಂದ್ರ, ನವೀಕೃತ ಪಿಡಿಯಾಟ್ರಿಕ್ ವಾರ್ಡ್, ಬಿಮ್ಸ್ ಸಿಬ್ಬಂದಿ ಮಕ್ಕಳಿಗೆ ಶಿಶುವಿಹಾರನ್ನು ಉದ್ಘಾಟಿಸಿದ ಶಾಸಕ ಅನೀಲ ಬೆನಕೆ ಅವರು ಎಲ್ಲಾ ಕೇಂದ್ರಗಳನ್ನೂ ಖುದ್ದಾಗಿ ವೀಕ್ಷಿಸಿದರು. ನಂತರದಲ್ಲಿ ಪ್ರಾದೇಶಿಕ ಆಯುಕ್ತರಾದ ಆಮ್ಲಾನ್ ಆದಿತ್ಯ ಬಿಸ್ವಾಸ್ ಹಾಗೂ ಸಿಬ್ಬಂದಿ ಅವರಿಂದ ಕೇಂದ್ರಗಳ ಕಾರ್ಯವೈಖರಿ ಕುರಿತು ಮಾಹಿತಿ ಪಡೆದುಕೊಂಡರು.
ಮಕ್ಕಳಿಗೆ ಸಿಹಿ, ಆಟಿಕೆ ವಸ್ತುಗಳ ವಿತರಣೆ:
ನವೀಕೃತ ಪಿಡಿಯಾಟ್ರಿಕ್ ವಾರ್ಡ್, ಬಿಮ್ಸ್ ಸಿಬ್ಬಂದಿ ಮಕ್ಕಳಿಗೆ ಶಿಶುವಿಹಾರನ್ನು ಪರಿವೀಕ್ಸಿಸಿದ ಶಾಸಕ ಅನಿಲ ಬೆನಕೆ ಪ್ರಾದೇಶಿಕ ಆಯುಕ್ತರಾದ ಆಮ್ಲಾನ್ ಆದಿತ್ಯ ಬಿಸ್ವಾಸ್ ಹಾಗೂ ಸಿಬ್ಬಂದಿ ಅವರೊಂದಿಗೆ ಮಕ್ಕಳಿಗೆ ಸಿಹಿ ಖಾದ್ಯ ಮತ್ತು ಆಟಿಕೆ ವಸ್ತುಗಳನ್ನು ನೀಡಿ ಪೋಷಕರ ಮೂಲಕ ಆರೋಗ್ಯ ವಿಚಾರಿಸಿದರು.
ವಿವಿಧ ಕೇಂದ್ರಗಳ ಉದ್ಘಾಟನೆ ಹಾಗೂ ವೇದಿಕೆ ಕಾರ್ಯಕ್ರಮದಲ್ಲಿ ಬಿಮ್ಸ್ ಮುಖ್ಯ ಆಡಳಿತಾಧಿಕಾರಿ ಸೈಯದ್ ಆಫ್ರೀನಾ ಬಾನು ಬಳ್ಳಾರಿ, ಬಿಮ್ಸ್ ಪ್ರಭಾರಿ ನಿರ್ದೇಶಕ ಈರಣ್ಣ ಪಲ್ಲೇದ, ಜಿಲ್ಲಾ ಶಸ್ತ್ರ ವೈದ್ಯಾಧಿಕಾರಿ ಡಾ. ಸುಧಾಕರ, ಎಂ.ಎಸ್ ಅಣ್ಣಾ ಸಾಹೇಬ್ ಪಾಟೀಲ, ಆರ್ ಎಂಒ ಡಾ. ಪುಷ್ಪಾ ಜಿ. ಹಾಗೂ ವೈದ್ಯಕೀಯ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶೋಭಾ ಸಂಕನ್ನವರ ಹಾಗೂ ರಾಜೇಶ ಕೆ. ನಿರೂಪಿಸಿ ವಂದಿಸಿದರು.
ರಸ್ತೆ, ಸಂಚಾರ ನಿಯಮ ಉಲ್ಲಂಘನೆ: ಕಠಿಣ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚನೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ