*ಶಾಸಕರ ಪಿಎ ಕಮೀಷನ್ ಆಡಿಯೋ ಬಹಿರಂಗ: ಜಿಲ್ಲಾದ್ಯಂತ ಭಾರೀ ಚರ್ಚೆ*

ಅನುದಾನ ಮಂಜೂರು ಮಾಡಿಸಿದ್ದಕ್ಕೆ ಶೇ.೨೫ ಕಮೀಷನ್ ಬೇಡಿಕೆ: ಶಾಸಕರ ಪಿಎ ವಿರುದ್ಧ ಶಿರೋಲಿ ಗ್ರಾಮ ಪಂಚಾಯತಿ ಸದಸ್ಯ ಗಂಭೀರ ಆರೋಪ
ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಭಾನುವಾರ ಪಟ್ಟಣದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಸ್ಥಳೀಯ ಶಾಸಕ ವಿಠ್ಠಲ ಹಲಗೇಕರ ಅವರ ಆಪ್ತ ಕಾರ್ಯದರ್ಶಿ ಗುರುರಾಜ ಚರಕಿ ಅವರದ್ದು ಎನ್ನಲಾದ ಆಡಿಯೋ ಬಿಡುಗಡೆಗೊಳಿಸಿರುವ ತಾಲೂಕಿನ ಶಿರೋಲಿ ಗ್ರಾಮ ಪಂಚಾಯತಿ ಸದಸ್ಯ ಕೃಷ್ಣಾ ಗುರವ, ಶಾಸಕರ ಪಿಎ ತಮ್ಮ ಪಂಚಾಯತಿಗೆ ೧೫ನೇ ಹಣಕಾಸು ಯೋಜನೆಯಡಿ ಹೆಚ್ಚುವರಿಯಾಗಿ ೨೦ ಲಕ್ಷ ಅನುದಾನ ಬಿಡುಗಡೆ ಮಾಡಿಸಿದ್ದಕ್ಕೆ ಪ್ರತಿಯಾಗಿ ಶೇ.೨೫ರಷ್ಟು ಕಮೀಷನ್ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ ಎಂಬ ಗಂಭೀರ ಆರೋಪವನ್ನು ಮಾಡಿದ್ದಾರೆ. ಈ ಆಡಿಯೋ ಸಂಭಾಷಣೆ ಸಧ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕಮೀಷನ್ ಹಗರಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಮುಖಂಡ ಸುರೇಶ ಜಾಧವ “ಶಾಸಕರ ಪಿಎ ಹುದ್ದೆಯಲ್ಲಿರುವ ಜವಾಬ್ದಾರಿಯುತ ಸರ್ಕಾರಿ ನೌಕರರೊಬ್ಬರು ಬಹಿರಂಗವಾಗಿ ಕಮೀಷನ್ ಕೇಳಿರುವ ಬಗ್ಗೆ ತನಿಖೆ ನಡೆಸಬೇಕು ಮತ್ತು ನೊಂದರವರಿಗೆ ನ್ಯಾಯ ಒದಗಿಸಬೇಕು” ಎಂದು ಸಂಬಂಧಪಟ್ಟವರನ್ನು ಆಗ್ರಹಿಸಿದ್ದಾರೆ.
ಭಾನುವಾರ ಪಟ್ಟಣದಲ್ಲಿ ಸುದ್ದಿಗಾರರಿಗೆ ಈ ಆಡಿಯೋ ನೀಡಿ ಮಾತನಾಡಿದ ಗ್ರಾಪಂ ಸದಸ್ಯ ಕೃಷ್ಣಾ ಗುರವ, “ಖಾನಾಪುರ ಶಾಸಕ ವಿಠ್ಠಲ ಹಲಗೇಕರ ಅವರ ಪಿಎ ಗುರುರಾಜ ಚರಕಿ ಅವರು ಶಿರೋಲಿ ಗ್ರಾಮ ಪಂಚಾಯಿತಿಗೆ ಅಭಿವೃದ್ಧಿ ಅನುದಾನ ಮಂಜೂರಾಗಿದ್ದು, ಈ ಅನುದಾನದ ಶೇ.೨೫% ಕಮಿಷನ್ ತಮಗೆ ನೀಡಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ” ಎಂದು ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಕೃಷ್ಣಾ ಗುರವ ಅವರು ತಮ್ಮ ಹಾಗೂ ಶಾಸಕರ ಪಿಎ ನಡುವಿನ ಮೊಬೈಲ್ ಸಂಭಾಷಣೆಯ ಆಡಿಯೋ ಕ್ಲಿಪ್ ಹಾಗೂ ಪಿಎ ಗುರುರಾಜ ಚರಕಿ ಅವರ ಮೊಬೈಲ್ ಸಂಖ್ಯೆಯನ್ನೂ ಪ್ರದರ್ಶಿಸಿ ಅನುದಾನ ಮಂಜೂರು ಮಾಡಿಸಿದ್ದಕ್ಕೆ ಶೇ.೨೫ ಕಮೀಷನ್ ಬೇಡುತ್ತಿರುವ ಶಾಸಕರ ಪಿಎ ವಿರುದ್ಧ ಕ್ರಮ ಜರುಗಿಸಬೇಕು ಮತ್ತು ತಮಗೆ ನ್ಯಾಯ ಒದಗಿಸಬೇಕು ಎಂದು ಸಂಬಂಧಪಟ್ಟವರನ್ನು ಆಗ್ರಹಿಸಿದ್ದಾರೆ.
ಕೃಷ್ಣಾ ಗುರವ ಅವರು ಬಿಡುಗಡೆಗೊಳಿಸಿರುವ ೨ ನಿಮಿಷ ೨೨ ಸೆಕೆಂಡ್‌ಗಳ ಆಡಿಯೋ ಸಂಭಾಷಣೆಯಲ್ಲಿ ಶಾಸಕರ ಪಿಎ ಗುರುರಾಜ ಚರಕಿ ಅವರು ದೀಪಕ ಗುರವ ಎಂಬ ವ್ಯಕ್ತಿ ಹಾಗೂ ತಮ್ಮೊಂದಿಗೆ ಮಾತನಾಡಿದ್ದು, “ಶಿರೋಲಿ ಗ್ರಾಮಪಂಚಾಯಿತಿಗೆ ೧೫ನೇ ಹಣಕಾಸು ಯೋಜನೆಯಿಂದ ೨೦ ಲಕ್ಷ ಅನುದಾನ ಮಂಜೂರು ಮಾಡಿಸಿದ್ದು, ಇದರ ಪೈಕಿ ಶೇ.೨೫ ಕಮೀಷನ್ ನೀಡಬೇಕು. ಶೇ.೨೫ರಲ್ಲಿ ಶೇ.೧೦ ತಮಗೆ ಮತ್ತು ಉಳಿದ ಹಣ ಇತರರಿಗೆ ನೀಡಬೇಕಾಗುತ್ತದೆ” ಎಂದಿದ್ದಾರೆ. ನಿಮಗೆ ಶೇ.೨೫ ಕಮೀಷನ್ ನೀಡಿದ ಬಳಿಕ ಉಳಿದ ಹಣದಲ್ಲಿ ಕೆಲಸ ಮಾಡಿಸಲು ತೊಂದರೆ ಆಗುತ್ತದೆ ಎಂದು ಕೃಷ್ಣಾ ಗುರವ ಹೇಳಿದ್ದಕ್ಕೆ ಉತ್ತರಿಸಿರುವ ಗುರುರಾಜ ಚರಕಿ “ಕಾಮಗಾರಿಯಲ್ಲಿ ಬದಲಾವಣೆ ಮಾಡಿ ಸಾಮಗ್ರಿ ಖರೀದಿಗೆ ಹೆಚ್ಚಿನ ಹಣ ಮೀಸಲಿಟ್ಟರೆ ಶೇ.೨೫ ಕಮೀಷನ್ ಅಡ್ಜಸ್ಟ್ ಆಗುತ್ತದೆ. ಈ ಅನುದಾನ ಮಂಜೂರು ಮಾಡಿಸಿಕೊಂಡು ಬರಲು ತಾವು ಸಾಲ ಮಾಡಿ ಬಡ್ಡಿ ತುಂಬಿದ್ದು, ತಮಗೆ ಶೇ.೨೫ ಕಮೀಷನ್ ನೀಡಲೇಬೇಕು” ಎಂದು ಹೇಳಿಕೊಂಡಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದ ಶಿರೋಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೀಲಮ್ ವಿಜಯ ಮಾದಾರ ಅವರೂ ಕೃಷ್ಣಾ ಗುರವ ಅವರ ಆರೋಪವನ್ನು ಖಚಿತಪಡಿಸಿ ಶಾಸಕರ ಪಿಎ ಕಮೀಷನ್ ಕೇಳಿದ್ದು ನಿಜ ಎಂದಿದ್ದಾರೆ.
ಶಾಸಕರ ಪಿಎ ಕಮೀಷನ್ ಕೇಳಿರುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಶಾಸಕ ವಿಠ್ಠಲ ಹಲಗೇಕರ ಅವರು, ನನ್ನ ಪಿಎ ಎಂದು ಕಳೆದ ಎರಡೂವರೆ ವರ್ಷದಿಂದ ಕಾರ್ಯನಿರ್ವಹಿಸುತ್ತಿರುವ ಗುರುರಾಜ ಚರಕಿ ಗ್ರಾಪಂ ಸದಸ್ಯರೊಬ್ಬರ ಬಳಿ ಶೇ.೨೫ ಕಮೀಷನ್ ಕೇಳಿರುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ, ಇದು ಇವರಿಬ್ಬರ ನಡುವಿನ ವಿಷಯ. ಇದರಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದ್ದಾರೆ.
“ಈ ವಿಷಯದ ಬಗ್ಗೆ ಈಗ ಏನನ್ನೂ ಹೇಳಲು ಇಚ್ಛಿಸುವುದಿಲ್ಲ, ಶೀಘ್ರದಲ್ಲೇ ಸತ್ಯಾಂಶ ಹೊರಬರಲಿದೆ. ಅಷ್ಟು ಮಾತ್ರ ನಾನು ಹೇಳಬಲ್ಲೆ” ಎಂದು ಗುರುರಾಜ ಚರಕಿ ತಿಳಿಸಿದ್ದಾರೆ.
ಒಟ್ಟಾರೆ ಭಾನುವಾರ ಶಾಸಕರ ಪಿಎ ಮತ್ತು ಗ್ರಾಪಂ ಸದಸ್ಯರ ನಡುವಿನ ಶೇ.೨೫ ಕಮೀಷನ್ ಸಂಭಾಷಣೆ ಸಾರ್ವಜನಿಕರ ಪಾಲಿಗೆ ಚರ್ಚೆಯ ವಿಷಯವಾಗಿದ್ದು, ಇದರ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಯಬೇಕು ಎಂದು ತಾಲೂಕಿನ ನಾಗರಿಕರು ಆಗ್ರಹಿಸಿದ್ದಾರೆ.




