ಜನಪ್ರತಿನಿಧಿಗಳ ಕ್ರಿಮಿನಲ್ ಪ್ರಕರಣ ವಿಚಾರಣೆಗೆ ವಿಶೇಷ ಕೋರ್ಟ್ ರಚನೆಗೆ ಸುಪ್ರೀಂ ಆದೇಶ
ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಸಂಸದರು, ಶಾಸಕರ ವಿರುದ್ಧ ಬಾಕಿ ಉಳಿದಿರುವ ಕ್ರಿಮಿನಲ್ ಪ್ರಕರಣಗಳ ತ್ವರಿತ ವಿಚಾರಣೆ ಹಾಗೂ ಶೀಘ್ರ ಇತ್ಯರ್ಥಕ್ಕೆ ವಿಶೇಷ ಪೀಠ ರಚಿಸುವುದರೊಂದಿಗೆ, ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಕೈಗೊಳ್ಳುವಂತೆ ಎಲ್ಲ ಹೈಕೋರ್ಟ್‌ಗಳಿಗೆ ಸುಪ್ರೀಂಕೋರ್ಟ್ ಗುರುವಾರ ನಿರ್ದೇಶನ ನೀಡಿದೆ.
ಜನ ಪ್ರತಿನಿಧಿಗಳ ವಿರುದ್ಧದ ಪ್ರಕರಣಗಳ ತ್ವರಿತ ಇತ್ಯರ್ಥಕ್ಕಾಗಿ ಸ್ವಯಂ ದಾಖಲಿಸಿಕೊಂಡಿದ್ದ ಅರ್ಜಿಯ ವಿಚಾರಣೆ ನಡೆಸಿದ ಸಿಜೆಐ ಡಿ.ವೈ. ಚಂದ್ರಚೂಡ್, ನ್ಯಾ. ಜೆಬಿ ಪರ್ದಿವಾಲಾ, ನ್ಯಾ. ಮನೋಜ್ ಮಿಶ್ರ ಅವರಿದ್ದ ಪೀಠ, ಜನ ಪ್ರತಿನಿಧಿಗಳ ವಿರುದ್ಧ ಬಾಕಿ ಇರುವ 5 ಸಾವಿರ ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ಕ್ರಮ ವಹಿಸುವಂತೆ ಸೂಚಿಸಿದೆ.
ಇದೇ ವೇಳೆ ಜನಪ್ರತಿನಿಧಿಗಳಿಗೆ ಸಂಬಂಧಿಸಿದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯನ್ನು ಅನಗತ್ಯವಾಗಿ ಮುಂದೂಡದಂತೆ ಹೈಕೋರ್ಟ್ ಗಳಿಗೆ ಆದೇಶಿಸಿದೆ.
ಸ್ಥಳಿಯ ವಿಚಾರಗಳು, ಪ್ರಕರಣದ ಸ್ವರೂಪ ಇತ್ಯಾದಿ ಕಾರಣಗಳಿಂದ ಜನಪ್ರತಿನಿಧಿಗಳ ವಿರುದ್ಧದ ಪ್ರಕರಣಗಳ ವಿಚಾರಣೆಯಲ್ಲಿ ಏಕರೂಪದ ಮಾರ್ಗಸೂಚಿ ಜಾರಿಗೊಳಿಸುವುದು ಕಷ್ಟಕರವಾಗಿದೆ. ಪ್ರಕರಣದ ಹಿನ್ನೆಲೆ ತಿಳಿದಿರುವ ಜಿಲ್ಲಾ ಮಟ್ಟದ ನ್ಯಾಯಾಲಯಗಳು ಹೈಕೋರ್ಟ್‌ಗಳ ಮೇಲುಸ್ತುವಾರಿಯಲ್ಲಿ ವಿಚಾರಣೆ ನಡೆಸುವುದರಿಂದ ತ್ವರಿತ ಇತ್ಯರ್ಥಗೊಳಿಸಲು ಸಾಧ್ಯವಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ.
ಜನ ಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ ಮೇಲೆ ನಿಗಾ ವಹಿಸಲು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಅಧ್ಯಕ್ಷತೆಯಲ್ಲಿ ಅಥವಾ ಸಿಜೆ ನಿಗದಿಪಡಿಸಿದ ಪೀಠದ ನೇತೃತ್ವದಲ್ಲಿ ಪ್ರಕರಣಗಳ ವಿಚಾರಣೆ ನಡೆಸಬೇಕು. ಪ್ರಕರಣಗಳ ಸ್ವರೂಪ, ಹಿನ್ನೆಲೆ ಆಧರಿಸಿ ಆದ್ಯತೆ ಮೇರೆಗೆ ವಿಚಾರಣೆ ನಡೆಸಬೇಕು ಎಂದು ನ್ಯಾಯಪೀಠ ಹೇಳಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ