Latest

ಶಾಸಕರ ಅನರ್ಹತೆ ಎತ್ತಿ ಹಿಡಿದ ಸುಪ್ರಿಂ ಕೋರ್ಟ್: ಉಪಚುನಾವಣೆಗೆ ಸ್ಪರ್ಧಿಸಬಹುದು

ಪ್ರಗತಿವಾಹಿನಿ ಸುದ್ದಿ, ನವದೆಹಲಿ – ಕರ್ನಾಟಕದ 17 ಶಾಸಕರ ಅನರ್ಹತೆಯನ್ನು ಎತ್ತಿಹಿಡಿದಿರುವ ಸರ್ವೋಚ್ಛ ನ್ಯಾಯಾಲಯ, ಅವರಿಗೆ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿದೆ.

ಇದರಿಂದಾಗಿ ಅನರ್ಹ ಶಾಸಕರಿಗೆ ಒಂದು ಬೇಸರದ ವಿಷಯ, ಇನ್ನೊಂದು ಖುಷಿಯ ವಿಷಯ ಸುಪ್ರಿಂ ಕೋರ್ಟ್ ನಿಂದ ಹೊರಬಿದ್ದಿದೆ.

ಶಾಸಕರನ್ನು ಅನರ್ಹಗೊಳಿಸಿದ್ದ ಅಂದಿನ ಸ್ಪೀಕರ್ ರಮೇಶ ಕುಮಾರ ಆದೇಶವನ್ನು ಸುಪ್ರಿಂ ಕೋರ್ಟ್ ಎತ್ತಿ ಹಿಡಿದಿದೆ. ಆದರೆ ಅನರ್ಹತೆಯ ಅವಧಿಯನ್ನು ನಿರ್ಧರಿಸುವ ಅಧಿಕಾರ ಸ್ಪೀಕರ್ ಗೆ ಇಲ್ಲ. ಹಾಗಾಗಿ ಅವರು ಉಪಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ಕೋರ್ಟ್ ಹೇಳಿದೆ.

ಇದರಿಂದಾಗಿ ಅನರ್ಹರಿಗೆ ಸಿಹಿ-ಕಹಿ ತೀರ್ಪು ಇದಾಗಿದೆ. ಉಪಚುನಾವಣೆಯಲ್ಲಿ ಗೆದ್ದು ಬರುವವರೆಗೂ ಮಂತ್ರಿಯಾಗಲು ಅವಕಾಶವಿಲ್ಲ ಎಂದೂ ಸುಪ್ರಿಂ ಕೋರ್ಟ್ ಹೇಳಿದೆ.

ಇದಕ್ಕೂ ಮೊದಲು ವಿಚಾರಣೆ ವೇಳೆ ನಡೆದಿರುವ ವಾದ ವಿವಾದವನ್ನು ಅವಲೋಕಿಸಿದ ನ್ಯಾಯಾಧೀಶ ಎನ್.ವಿ.ರಮಣ, ಸಂಸದೀಯ ವ್ಯವಸ್ಥೆಯಲ್ಲಿ ನೈತಿಕತೆ ಮುಖ್ಯ. ಇದು ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳೆರಡರಲ್ಲೂ ಇರಬೇಕು. ಶಾಸಕರ ನಡೆಯನ್ನು ಪ್ರೋತ್ಸಾಹಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ಅಸ್ಥಿತ್ವದಲ್ಲಿದ್ದ ಸಮ್ಮಿಶ್ರ ಸರಕಾರದ ವಿರುದ್ಧ ಅಸಮಾಧಾನಗೊಂಡು ಕಾಂಗ್ರೆಸ್ ನ 14 ಹಾಗೂ ಜೆಡಿಎಸ್ ನ 3 ಶಾಸಕರು ರಾಜಿನಾಮೆ ನೀಡಿದ್ದರು. ಆದರೆ ರಾಜಿನಾಮೆ ಅಂಗೀಕರಿಸದ ಅಂದಿನ ಸ್ಪೀಕರ್ ರಮೇಶ ಕುಮಾರ ಎಲ್ಲ 17 ಶಾಸಕರನ್ನೂ ಅನರ್ಹಗೊಳಿಸಿದ್ದರು. ಈ ಎಲ್ಲ ಶಾಸಕರು ಪ್ರಸಕ್ತ ವಿಧಾನಸಭೆಯ ಅಧಿಯವರೆಗೂ ಚುನಾವಣೆಗೂ ಸ್ಪರ್ಧಿಸುವಂತಿಲ್ಲ ಎಂದು ರಮೇಶ ಕುಮಾರ ಹೇಳಿದ್ದರು.

ರಮೇಶ ಕುಮಾರ ತೀರ್ಪಿನ ವಿರುದ್ಧ ಅನರ್ಹ ಶಾಸಕರು ಸುಪ್ರಿಂ ಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆದು ಇಂದು ತೀರ್ಪು ಹೊರಬಿದ್ದಿದೆ. ಈ ತೀರ್ಪಿಗಾಗಿ ಇಡೀ ದೇಶವೇ ಕಾಯುತ್ತಿತ್ತು. ಪ್ರಸಕ್ತ ಬಿಜೆಪಿ ಸರಕಾರದ ಭವಿಷ್ಯ, ಉಪಚುನಾವಣೆ ಕಣ ಎಲ್ಲವೂ ಈ ತೀರ್ಪಿನ ಮೇಲೆ ಅವಲಂಭಿಸಿತ್ತು.

ಇದೀಗ ರಮೇಶ ಕುಮಾರ ನಿರ್ಧಾರವನ್ನು ಅರ್ಧ ಎತ್ತಿ ಹಿಡಿದಿರುವ ಕೋರ್ಟ್, ಇನ್ನರ್ಧ ತಿರಸ್ಕರಿಸಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button