ಪ್ರಗತಿವಾಹಿನಿ ಸುದ್ದಿ, ನವದೆಹಲಿ –ಕರ್ನಾಟಕದ 17 ಶಾಸಕರನ್ನು ಅನರ್ಹಗೊಳಿಸಿರುವ ಅಂದಿನ ಸ್ಪೀಕರ್ ರಮೇಶ ಕುಮಾರ ಅವರ ಕ್ರಮದ ಕುರಿತು ಸರ್ವೋಚ್ಛ ನ್ಯಾಯಾಲಯ ಇಂದು ತೀರ್ಪು ನೀಡಲಿದೆ. ನಿಗದಿತ ಸಮಯದ ಪ್ರಕಾರ ಇಂದು ಬೆಳಗ್ಗೆ 10.30ಕ್ಕೆ ತೀರ್ಪು ಹೊರಗೆ ಬರುವ ಸಾಧ್ಯತೆ ಇದೆ.
ಕಾಂಗ್ರೆಸ್ ನ 14 ಮತ್ತು ಜೆಡಿಎಸ್ ನ 3 ಶಾಸಕರು ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಸರಕಾರ ಅತಂತ್ರವಾಗಲು ಕಾರಣರಾಗಿದ್ದರು. ಆದರೆ ರಾಜಿನಾಮೆ ಅಂಗೀಕರಿಸದ ಸ್ಪೀಕರ್ ರಮೇಶ ಕುಮಾರ, ಕಾಂಗ್ರೆಸ್ ಮತ್ತು ಜೆಡಿಎಸ್ ಸಲ್ಲಿಸಿದ್ದ ದೂರಿನಂತೆ ಅವರನ್ನೆಲ್ಲ ಶಾಸಕತ್ವದಿಂದ ಅನರ್ಹಗೊಳಿಸಿದ್ದರು.
ಸಮ್ಮಿಶ್ರ ಸರಕಾರ ಸರಕಾರ ಪತನಗೊಂಡು ಬಿಜೆಪಿ ಸರಕಾರ ಅಸ್ಥಿತ್ವಕ್ಕೆ ಬಂತು.
ತಮ್ಮನ್ನು ಅನರ್ಹಗೊಳಿಸಿರುವ ಕ್ರಮ ಪ್ರಶ್ನಿಸಿ ಎಲ್ಲ 17 ಶಾಸಕರು ಸರ್ವೋಚ್ಛ ನ್ಯಾಯಾಲಯದ ಮೆಟ್ಟಿಲೇರಿದ್ದರು. ಕೆಲವರು ಪ್ರತ್ಯೇಕವಾಗಿ ಅರ್ಜಿಸಲ್ಲಿಸಿದ್ದರೆ, ಇನ್ನು ಕೆಲವರು ಒಟ್ಟಾಗಿ ವಾದ ಮಂಡಿಸಿದ್ದಾರೆ. ಎಲ್ಲ ಪ್ರಕರಣಗಳ ಕುರಿತು ನ್ಯಾಯಾಲಯ ಇಂದು ತೀರ್ಪು ನೀಡಲಿದೆ.
ನ್ಯಾಯಾಲಯದ ತೀರ್ಪಿನ ಮೇಲೆ ಈಗಾಗಲೆ ಘೋಷಣೆಯಾಗಿರುವ ಉಪ ಚುನಾವಣೆಯಲ್ಲಿ ಈ ಅನರ್ಹ ಶಾಸಕರು ಸ್ಪರ್ಧಿಸಬಹುದೋ ಇಲ್ಲವೋ ಎನ್ನುವುದು ತೀರ್ಮಾನವಾಗಲಿದೆ. ಇದು ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಜೊತೆಗೆ ರಾಜ್ಯ ರಾಜಕೀಯಕ್ಕೆ ಮಹತ್ವ ಕೂಡ.
ಡಿ.5ರಂದು ನಡೆಯಲಿರುವ ಉಪಚುನಾವಣೆ ಕಣ ನಿರ್ಧಾರವಾಗುವುದಕ್ಕೂ ಈ ತೀರ್ಪು ಅತ್ಯಂತ ಮಹತ್ವದ್ದಾಗಿದೆ. ಎಲ್ಲರ ಕುರಿತೂ ಒಂದೇ ರೀತಿಯ ತೀರ್ಪು ಹೊರಗೆ ಬರಬಹುದೆನ್ನುವ ನಿರೀಕ್ಷೆಯೂ ಇಲ್ಲ. ಪ್ರಕರಣ ಬೇರೆ ಬೇರೆ ಆಗಿರುವುದರಿಂದ ಕೆಲವರು ಅನರ್ಹರಾದರೆ ಇನ್ನು ಕೆಲವರು ಶಾಸಕರಾಗಿಯೇ ಉಳಿದುಕೊಳ್ಳಬಹುದು.
ಅನರ್ಹ ಶಾಸಕರ ಪರ ರಾಜ್ಯದ ವಿವಿಧೆಡೆ ದೇವಸ್ಥಾನಗಳಲ್ಲಿ ಪೂಜೆಗಳು, ಹರಕೆ ನಡೆಯುತ್ತಿವೆ. ಇನ್ನು ಕೆಲವೇ ಕ್ಷಣಗಳಲ್ಲಿ ತೀರ್ಪು ಹೊರಬೀಳಲಿದೆ.
ಈ ಮಧ್ಯೆ ಅಂದಿನ ಸ್ಪೀಕರ್ ರಮೇಶ ಕುಮಾರ ಪ್ರತಿಕ್ರಿಯೆ ನೀಡಿ, ನಾನು ಜನರ ಭಾವನೆಗಳಿಗೆ ತಕ್ಕಂತೆ ಅವರನ್ನು ಅನರ್ಹಗೊಳಿಸಿದ್ದೇನೆ. ಕಾನೂನು ಏನು ಹೇಳುತ್ತದೆ ಎಂದು ನೋಡಿಲ್ಲ. ಸುಪ್ರಿಂ ಕೋರ್ಟ್ ತೀರ್ಪು ನೀಡುವಾಗ ಕಾನೂನು ಪರಿಗಣಿಸುತ್ತದೆ. ಹಾಗಾಗಿ ತೀರ್ಪಿನ ಬಗ್ಗೆ ಏನನ್ನೂ ಹೇಳಲಾಗದು ಎಂದಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ