
ಪ್ರಗತಿವಾಹಿನಿ ಸುದ್ದಿ : ಎಐಸಿಸಿ ಕಾರ್ಯದರ್ಶಿ ಹಾಗೂ ಕರ್ನಾಟಕ ಗ್ಯಾರೆಂಟಿ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರಾಗಿದ್ದ ಸೂರಜ್ ಹೆಗ್ಡೆ ಭಾನುವಾರ ರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
50 ವರ್ಷ ವಯಸಿನ ಅವರು ಪತ್ನಿ ಹಾಗೂ ಮಕ್ಕಳನ್ನು ತೊರೆದಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆಪ್ತವಲಯದಲ್ಲಿ ಗುರುಸಿಕೊಂಡಿದ್ದ ಅವರ ಅಗಲಿಕೆಗೆ ರಾಷ್ಟ್ರಮಟ್ಟದ ನಾಯಕರೊಂದಿಗೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.
ಹೃದಯಾಘಾತವಾದ ಕೂಡಲೇ ಅವರನ್ನು ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಅವರು ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ.
ಸೂರಜ್ ಹೆಗ್ಡೆಯವರು ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ಅವರ ಮೊಮ್ಮಗನಾಗಿದ್ದರು. ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಸಿಎಂ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಎಕ್ಸ್ ಮೂಲಕ ಸಂದೇಶ ಹಂಚಿಕೊಂಡಿದ್ದು, ಸೂರಜ್ ಹೆಗಡೆ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಸಿಎಂ ಡಿ.ಕೆ. ಶಿವಕುಮಾರ್ ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಸಂದೇಶ ಹಂಚಿಕೊಂಡಿದ್ದು ಸೂರಜ್ ಹೆಗ್ಡೆ ಅವರ ಅಗಲಿಕೆ ಸುದ್ದಿ ಕೇಳಿ ನನ್ನ ಮನಸಿಗೆ ಆಘಾತವಾಗಿದೆ. ಚಿಕ್ಕ ವಯಸ್ಸಿಗೇ ಅವರು ನಮ್ಮನ್ನು ಅಗಲಿದ್ದಾರೆ ಎಂಬುದನ್ನು ನಂಬಲು ಆಗುತ್ತಿಲ್ಲ. ಸೂರಜ್ ಹೆಗಡೆ ಅವರು ತಮ್ಮ ತಾತ ದೇವರಾಜು ಅರಸು ಅವರಂತೆ ಹಿಂದುಳಿದ ವರ್ಗಗಳು, ಕಾರ್ಮಿಕರ ಹಕ್ಕು ಸಾಮಾಜಿಕ ನ್ಯಾಯಕ್ಕಾಗಿ ಶ್ರಮಿಸುತ್ತಿದ್ದರು. ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷರಾಗಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ಬರೆದುಕೊಂಡಿದ್ದಾರೆ.
ಎಐಸಿಸಿ ಕಾರ್ಯದರ್ಶಿಗಳು, ಕೆಪಿಸಿಸಿ ಉಪಾಧ್ಯಕ್ಷರು ಹಾಗೂ ರಾಜ್ಯ ಗ್ಯಾರಂಟಿ ಸಮಿತಿಯ ಉಪಾಧ್ಯಕ್ಷರಾಗಿದ್ದ ನನ್ನ ಆತ್ಮೀಯ ಸಹೋದ್ಯೋಗಿ ಶ್ರೀ ಸೂರಜ್ ಹೆಗ್ಗಡೆ ಅವರ ಹಠಾತ್ ನಿಧನದ ಸುದ್ದಿ ತಿಳಿದು ತೀವ್ರ ಆಘಾತವಾಗಿದೆ.
ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣ್ ದೀಪ್ ಸಿಂಗ್ ಸುರ್ಜೇವಾಲಾ ಅವರೂ ಸಹ ಈ ಕುರಿತು ಪ್ರತಿಕ್ರಿಯಿಸಿ, ತಮ್ಮ ತೀವ್ರ ಸಂತಾಪ ಸಲ್ಲಿಸಿದ್ದಾರೆ.
ಎಐಸಿಸಿ ಕಾರ್ಯದರ್ಶಿ ಸೂರಜ್ ಹೆಗ್ಡೆ ನಿಧನಕ್ಕೆ ಡಾ. ಶರಣಪ್ರಕಾಶ ಪಾಟೀಲ್ ಸಂತಾಪ
ಎಐಸಿಸಿ ಕಾರ್ಯದರ್ಶಿಗಳು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರೂ ಆಗಿದ್ದ ಸೂರಜ್ ಹೆಗ್ಡೆ ಅವರ ಹಠಾತ್ ನಿಧನಕ್ಕೆ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ್ ಆರ್. ಪಾಟೀಲ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ಪ್ರಕಟಿಸಿರುವ ಸಚಿವರು, ಸೂರಜ್ ಹೆಗ್ಡೆ ನಿಧನರಾಗಿರುವ ಸುದ್ದಿ ಕೇಳಿ ಆಘಾತವಾಯಿತು. ಅತಿ ಚಿಕ್ಕ ವಯಸ್ಸಿನಲ್ಲಿ ಈ ರೀತಿಯ ದುರಂತಕ್ಕೆ ಒಳಗಾಗಿದ್ದು ನಿಜಕ್ಕೂ ಬೇಸರ ತರಿಸಿದೆ ಎಂದು ಹೇಳಿದ್ದಾರೆ.
ಹಿಂದುಳಿದ ವರ್ಗಗಳ ಅಭಿವೃದ್ಧಿಯ ಹರಿಕಾರ ದೇವರಾಜ ಅರಸು ಅವರು ಮೊಮ್ಮಗ ಸೂರಜ್ ಹೆಗ್ಡೆ, ತಾತನಂತೆಯೇ ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸುತ್ತಿದ್ದರು ಎಂದು ಸಚಿವರು ಸ್ಮರಿಸಿದ್ದಾರೆ.
ಅತ್ಯಂತ ಸಕ್ರಿಯ ಕಾರ್ಯಕರ್ತರಲ್ಲಿ ಒಬ್ಬರಾಗಿದ್ದ ಸೂರಜ್ ಹೆಗ್ಡೆ, ಎಐಸಿಸಿ ಕಾರ್ಯದರ್ಶಿಯಾಗಿ ತಮಿಳುನಾಡು, ಪುದುಚೇರಿ ಉಸ್ತುವಾರಿಯಾಗಿ ಸಂಘಟನೆಯಲ್ಲಿಯೂ ಅತ್ಯುತ್ತಮವಾಗಿ ಜವಾಬ್ದಾರಿ ನಿರ್ವಹಿಸಿದ್ದರು. ಅವರ ನಿಧನದಿಂದ ಪಕ್ಷವು ಒಬ್ಬ ಸಮರ್ಥ ಕಾರ್ಯಕರ್ತನನ್ನು ಕಳೆದುಕೊಂಡಿದೆ ಎಂದು ಸಚಿವರು ಹೇಳಿದ್ದಾರೆ.
ಸೂರಜ್ ಹೆಗ್ಡೆ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬ ಸದಸ್ಯರಿಗೆ, ಅಭಿಮಾನಿಗಳಿಗೆ, ಹಿತೈಷಿಗಳಿಗೆ ಈ ನೋವು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಡಾ. ಶರಣಪ್ರಕಾಶ್ ಪಾಟೀಲ್ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಸಂತಾಪ
ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಯುವ ನಾಯಕರಾಗಿದ್ದ ಸೂರಜ್ ಹೆಗ್ಡೆ ಅವರ ಹಠಾತ್ ಅಗಲಿಕೆಯಿಂದ ಆಘಾತಕ್ಕೀಡಾಗಿದ್ದೇನೆ. ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಸಂಘಟನೆಯ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದ ಸೂರಜ್ ಅವರು ಎಐಸಿಸಿ ಕಾರ್ಯದರ್ಶಿಗಳು, ಕೆಪಿಸಿಸಿ ಉಪಾಧ್ಯಕ್ಷರು ಹಾಗೂ ರಾಜ್ಯ ಗ್ಯಾರಂಟಿ ಸಮಿತಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.
ನಮ್ಮ ನಾಡಿನ ಹೆಮ್ಮೆಯ ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜ ಅರಸು ಅವರ ಮೊಮ್ಮಗನಾಗಿದ್ದ ಸೂರಜ್ ಅವರು ಜನಪರ ರಾಜಕಾರಣದ ಪರಂಪರೆಯನ್ನು ಬದ್ಧತೆ ಮತ್ತು ಕಾಳಜಿಯಿಂದ ಮುನ್ನಡೆಸುತ್ತಾ ಬರುತ್ತಿದ್ದರು. ಸೂರಜ್ ಅವರಿಗೆ ರಾಜಕೀಯದಲ್ಲಿ ಇನ್ನಷ್ಟು ಅವಕಾಶಗಳು ಒದಗಿ ಬರುವುದಿತ್ತು. ಇಂತಹ ಸಮಯದಲ್ಲಿಯೇ ಅವರು ನಮ್ಮನ್ನಗಲಿ ಹೋಗಿರುವುದು ಕಾಂಗ್ರೆಸ್ ಪಕ್ಷ ಮತ್ತು ಕರ್ನಾಟಕ ರಾಜ್ಯಕ್ಕೆ ತುಂಬಲಾರದ ನಷ್ಟ.
ಸೂರಜ್ ಅವರ ಕುಟುಂಬದ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.




