
ಪ್ರಗತಿವಾಹಿನಿ ಸುದ್ದಿ: ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ನ್ಯಾಯಾಂಗ ಬಂಧನ ಅಡಿಯಲ್ಲಿ ಈಗಾಲೇ ಎಂಎಲ್ ಸಿ ಸೂರಜ್ ರೇವಣ್ಣ ಜೈಲುಸೇರಿದ್ದು, ಇದರ ಬೆನ್ನಲ್ಲೇ ಸೂರಜ್ ವಿರುದ್ಧ ಮತ್ತೊಂದು ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ.
ಸೂರಜ್ ರೇವಣ್ಣ ವಿರುದ್ಧ ದಾಖಲಾಗಿದ್ದ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದ ಮೊದಲ ಕೇಸ್ ನ ತನಿಖೆಯನ್ನು ರಾಜ್ಯ ಸರ್ಕಾರ ಜೂನ್ 23ರಂದು ಸಿಐಡಿ ತನಿಖೆಗೆ ವಹಿಸಿ ಆದೇಶ ಹೊರಡಿಸಿತ್ತು. ಇದೀಗ ಎರಡನೇ ಪ್ರಕರಣವನ್ನು ಕೂಡ ಸಿಐಡಿ ತನಿಖೆಗೆ ಹಸ್ತಾಂತರಿಸಿ ಆದೇಶ ಹೊರಡಿಸಿದೆ.
ಸೂರಜ್ ವಿರುದ್ಧ ಮೊದಲ ದೂರು ದಾಖಲಾಗುತ್ತಿದ್ದಂತೆ ಜೂನ್ 21ರಂದು ಸೂರಜ್ ಪರವಹಿಸಿ ಸಂತ್ರಸ್ತ ಯುವಕನ ವಿರುದ್ಧವೇ ಕೇಸ್ ದಾಖಲಿಸಿದ್ದ ಹೊಳೆನರಸೀಪುರದ ಯುವಕ ಇದೀಗ ಸೂರಜ್ ವಿರುದ್ಧವೇ ದೂರು ದಾಖಲಿಸಿದ್ದಾನೆ.
ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ಜೂನ್ 25ರಂದು ದೂರು ದಾಖಲಿಸಿರುವ ಯುವಕ, ಕೆಲ ವರ್ಷಗಳ ಹಿಂದೆ ತನ್ನ ಮೇಲೆ ಅಸಹಜ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಸೂರಜ್ ವಿರುದ್ಧ ದೂರು ದಾಖಲಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಎರಡನೇ ಪ್ರಕರಣದಲ್ಲಿ ಸೂರಜ್ ವಿರುದ್ಧ ಐಪಿಸಿ ಸೆಕ್ಷನ್ 377, 342, 506 ಅಡಿಯಲ್ಲಿ ಎಫ್ ಐಆರ್ ದಾಖಲಾಗಿದೆ.
ಅರಕಲಗೂಡು ಮೂಲದ ಜೆಡಿಎಸ್ ಕಾರ್ಯಕರ್ತ ಜೂನ್ 22ರಂದು ಸೂರಜ್ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದ. ಜೂನ್ 23ರಂದು ರಾಜ್ಯ ಸರ್ಕಾರ ಈ ಕೇಸ್ ನ್ನು ಸಿಐಡಿ ತನಿಖೆಗೆ ಹಸ್ತಾಂತರಿಸಿತ್ತು. ಮೊದಲ ಪ್ರಕರಣದಲ್ಲಿ ಸೂರಜ್ ಗೆ 14 ದಿನ ನ್ಯಾಯಾಂಗ ಬಂಧನ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದು, ಸಿಐಡಿ ಅಧಿಕಾರಿಗಳು ಕಸ್ಟಡಿಗೆ ಪಡೆದು ತನಿಖೆ ನಡೆಸಿದ್ದಾರೆ. ಈ ನಡುವೆ ಜೂನ್ 25ರಂದು ಸೂರಜ್ ವಿರುದ್ಧ 2ನೇ ಕೇಸ್ ದಾಖಲಾಗಿದ್ದು, ಇದೀಗ ಎರಡೂ ಕೇಸ್ ನ್ನು ಸಿಐಡಿಗೆ ವಹಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ