Kannada NewsLatest

ಬಜೆಟ್ ಗೆ ಮುನ್ನವೇ ಬೆಳಗಾವಿಗೆ ಸುರೇಶ ಅಂಗಡಿ ಭರ್ಜರಿ ಘೋಷಣೆ

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ/ ಹುಬ್ಬಳ್ಳಿ: 

ಜುಲೈ 5ರಂದು ಮಂಡನೆಯಾಗಲಿರುವ ಬಜೆಟ್ ಗೂ ಮುನ್ನವೇ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಬೆಳಗಾವಿಗೆ ಹಲವು ಭರ್ಜರಿ ಕೊಡುಗೆಗಳನ್ನು ಘೋಷಿಸಿದ್ದಾರೆ.

ಬೆಳಗಾವಿಯಿಂದ ಇಂದು ವಿಶೇಷ ರೈಲಿನಲ್ಲಿ ಪ್ರಗತಿ ಪರಿಶೀಲನೆ ಹಾಗೂ ವಿವಿಧ ರೈಲ್ವೆ ನಿಲ್ದಾಣಗಳ ಪರಿಶೀಲನೆ ನಡೆಸುತ್ತ ಹುಬ್ಬಳ್ಳಿಗೆ ತೆರಳಿದ ಅಂಗಡಿ ಅಲ್ಲಿ ಅಧಿಕಾರಿಗಳ ಸಭೆ ನಡೆಸಿದರು.

ಬೆಳಗಾವಿ-ಬೆಂಗಳೂರು ಮಧ್ಯೆ 14 ಕೋಚ್ ವಿಶೇಷ ರೈಲನ್ನು ಮುಂದಿನ ವಾರದಿಂದಲೇ ಓಡಿಸುವಂತೆ ಅವರು ಆದೇಶಿಸಿದ್ದಾರೆ. ತಲಾ ಒಂದೊಂದು ಫರ್ಸ್ಟ ಎಸಿ, ಸೆಕೆಂಡ್ ಎಸ್ ಹಾಗೂ ಥರ್ಡ್ ಎಸಿ ಬೋಗಿಗಳನ್ನು ಹಾಗೂ 7 ಸ್ಲೀಪರ್ ಕೋಚ್ ಹೊಂದಿರುವ ರೈಲು ರಾತ್ರಿ 9 ಗಂಟೆಗೆ ಬೆಂಗಳೂರಿನಿಂದ ಹೊರಟು ಬೆಳಗ್ಗೆ 7 ಗಂಟೆಗೆ ಬೆಳಗಾವಿ ತಲುಪುವಂತೆ ಓಡಿಸುವಂತೆ ಸೂಚಿಸಿದ್ದಾರೆ. ಇದು ಬೆಳಗಾವಿಯ ಬಹುಕಾಲದ ಬೇಡಿಕೆಯಾಗಿತ್ತು. 

ಬೆಳಗಾವಿ ರೈಲ್ವೆ ನಿಲ್ದಾಣದ ಪ್ಲ್ಯಾಟ್ ಫಾರ್ಮ್ 1ರಲ್ಲಿ ಬೆಳಗಾವಿಯ ಇತಿಹಾಸ ಸಾರುವ ಮ್ಯೂಸಿಯಂ ಸ್ಥಾಪಿಸಲು ಅವರು ಆದೇಶಿಸಿದ್ದಾರೆ. 

ಕಪಿಲೇಶ್ವರ ಮೇಲ್ಸೆತುವೆ ಬಳಿ ಪಾದಚಾರಿಗಳಿಗೆ ಅನುಕೂಲವಾಗುವಂತೆ ಲಿಫ್ಟ್ ಅಥವಾ ಪಾದಚಾರಿ ಮಾರ್ಗ ನಿರ್ಮಾಣಕ್ಕೆ ಸೂಚಿಸಿದರು. 

ಲೋಂಡಾ-ಮೀರಜ್ ರೈಲು ಮಾರ್ಗ ಡಬಲಿಂಗ್ ಮತ್ತು ಎಲೆಕ್ಟ್ರಿಫಿಕೇಶನ್ ಕೆಲಸ ತ್ವರಿತಗೊಳಿಸುವಂತೆಯೂ ಅವರು ಸೂಚಿಸಿದ್ದಾರೆ. ಬೆಳಗಾವಿ ರೈಲು ನಿಲ್ದಾಣಕ್ಕೆ ದಕ್ಷಿಣ ಭಾಗದಿಂದಲೂ ಪ್ರವೇಶ ಇರುವಂತೆ ನೂತನ ಕಟ್ಟಡ ನಿರ್ಮಾಣಕ್ಕೆ ಕೆಲಸ ಆರಂಭಿಸುವಂತೆ ಸೂಚಿಸಿದರು. ಸಾಂಬ್ರಾದಲ್ಲಿ ಗೂಡ್ಸ್ ಶೆಡ್ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡು ನಗರದಿಂದ ಗೂಡ್ಸ್ ಶೆಡ್ ನ್ನು ಸ್ಥಳಾಂತರಿಸಲು ಕ್ರಮ ತೆಗೆದುಕೊಳ್ಳಲು ಅವರು ಸೂಚಿಸಿದರು. 

ಮೈಸೂರು- ಧಾರವಾಡ ರೈಲನ್ನು ಮೀರಜ್ ವರೆಗೂ ವಿಸ್ತರಿಸಲು ಅವಕಾಶಗಳ ಕುರಿತು ಪ್ರಸ್ತಾವನೆ ಸಲ್ಲಿಸುವಂತೆ ಸಹ ಅಂಗಡಿ ಸೂಚಿಸಿದರು. 

ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿದ್ದರು. 

 

 

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button