ಧರ್ಮದ ವಿಚಾರ ಬಂದಾಗ ಎಲ್ಲರೂ ಒಗ್ಗಟ್ಟಾಗಿ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು :
ವೀರಶೈವ ಲಿಂಗಾಯತ ಧರ್ಮದ ವಿಚಾರ ಬಂದಾಗ ಎಲ್ಲರೂ ಒಗ್ಗಟ್ಟಾಗಿ ಕಾರ್ಯವನ್ನು ನಿರ್ವಹಿಸಬೇಕಾದ ಅವಶ್ಯಕತೆ ಇದೆ. ನಮ್ಮ ವಯಕ್ತಿಕ ಪ್ರತಿಷ್ಟೆಗಿಂತ ವೀರಶೈವ ಲಿಂಗಾಯತರ ಸಮಗ್ರ ಅಭಿವೃದ್ಧಿಯೇ ಕಾರಣವಾಗಿ ನಿಲ್ಲಬೇಕು ಎಂದು ರೈಲ್ವೆ ಸಚಿವ ಸುರೇಶ್ ಅಂಗಡಿ ಹೇಳಿದರು.
ಅವರು ಬೆಂಗಳೂರಿನ ರಾಜಾಜಿನಗರದಲ್ಲಿ ವೀರಶೈವ ಲಿಂಗಾಯಿತ ಸಂಘಟನಾ ವೇದಿಕೆ ಆರಂಭ ಮಾಡಿರುವ ಜನಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಮಾತನಾಡಿದರು.
ಇಡೀ ಭಾರತದಲ್ಲಿ ವೀರಶೈವ ಲಿಂಗಾಯಿತರು ಬಲಿಷ್ಠ ರಾಗಿದ್ದರೂ ಕೂಡ, ಏಕೆ ಇನ್ನೂ ಮುಂದೆ ಬಂದಿಲ್ಲ? ನಮ್ಮಲ್ಲಿಯ ಒಡಕೆ ಕಾರಣ. ವೀರಶೈವ-ಲಿಂಗಾಯತ ವಿಚಾರದಲ್ಲಿ ಎಲ್ಲರೂ ಒಟ್ಟಾಗಿ ಕಾರ್ಯವನ್ನು ನಿರ್ವಹಿಸುವ ಅವಶ್ಯಕತೆಯಿದೆ. ವೀರಶೈವ- ಲಿಂಗಾಯತದ ವಿಚಾರವಾಗಿ ಇವತ್ತು ಇಡೀ ವಿಶ್ವ ನಮ್ಮಕಡೆ ನೋಡುತ್ತಿದೆ. ನಮ್ಮಲ್ಲಿ ಬೇರೆ ಬೇರೆ ಸಂಘಟನೆಗಳಿದ್ದರೂ, ಧರ್ಮದ ವಿಚಾರ ಬಂದಾಗ ವೈಯಕ್ತಿಕ ಪ್ರತಿಷ್ಠೆಯನ್ನು ಮರೆತು ಒಂದಾಗುವ ಅವಶ್ಯಕತೆ ಇದೆ ಎಂದರು.
ಈ ಸಂದರ್ಭದಲ್ಲಿ ಬೆಳಗಾವಿಯ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ರೇಣುಕಾದಿ ಪಂಚಾಚಾರ್ಯರು, ಬಸವಾದಿ ಪ್ರಮಥರು ನಮ್ಮ ಧರ್ಮಕ್ಕೆ ವಿಶೇಷವಾಗಿರುವ ಮಾರ್ಗದರ್ಶನ ಮಾಡಿದ್ದಾರೆ. ಅವರ ವಿಚಾರವನ್ನು ಹೊತ್ತು ಸಮಾಜದ ಸಂಘಟನೆ ವೇದಿಕೆಯಿಂದ ಆಗಬೇಕು. ವೀರಶೈವ ಲಿಂಗಾಯತ ಸಮಾಜದಲ್ಲಿರುವ ಎಲ್ಲಾ ವಿಭಾಗದ ಅಂದರೆ ರಾಜಕೀಯವಾಗಿ, ಸಾಮಾಜಿಕವಾಗಿ ಮತ್ತು ನೌಕರಿ ಮಾಡುವ ಎಲ್ಲರೂ ಒಗ್ಗಟ್ಟಾಗಿ ಧರ್ಮದ ವಿಚಾರ ಬಂದಾಗ ನಾವೆಲ್ಲರೂ ನಮ್ಮ ಶಕ್ತಿಪ್ರದರ್ಶನ ಮಾಡುವ ಅವಶ್ಯಕತೆ ತುಂಬಾ ಇದೆ. ಈ ಕಾರ್ಯವನ್ನು ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಮಾಡಲಿ ಎಂದರು.
ಸಂಘಟನಾ ವೇದಿಕೆ ಅಧ್ಯಕ್ಷರಾದ ಪ್ರದೀಪ್ ಕಂಕಣವಾಡಿ ಮಾತನಾಡಿ ಗುರು-ವಿರಕ್ತರ ಮಾರ್ಗದರ್ಶನ, ಸಮಾಜದ ಹಿರಿಯರ ಮಾರ್ಗದರ್ಶನದೊಂದಿಗೆ ನಿರಂತರವಾಗಿ ಸಮಾಜದ ಅಬ್ಯುದಯಕ್ಕೆ ಶ್ರಮಿಸುತ್ತೇವೆ ಎಂದರು.
ಕೋರ್ ಕಮಿಟಿಯ ಸದಸ್ಯರು ಹಿರಿಯ ಅಧಿಕಾರಿಗಳು ಆದ ಎಂ ಆರ್ ಹಿರೇಮಠ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕರ್ನಾಟಕದ ಹೈದರಾಬಾದಿನಿಂದ ಬಂದ ಸಂಘಟನಾ ವೇದಿಕೆಯ ಸದಸ್ಯರು ಸಚಿವರನ್ನು, ಶ್ರೀಗಳವರನ್ನು ಸ್ವಾಗತಿಸಿ, ಗೌರವಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ