ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೊರೋನಾದಿಂದಾಗಿ ಸಾವಿಗೀಡಾಗಿರುವ ಕೇಂದ್ರ ಸಚಿವ ಸುರೇಶ ಅಂಗಡಿ ಅವರ ಸ್ಥಾನಕ್ಕೆ ಲೋಕಸಭೆಗೆ ಇನ್ನು ಗರಿಷ್ಠ 3 ತಿಂಗಳೊಳಗೆ ಚುನಾವಣೆ ನಡೆಯಬೇಕಿದೆ. ಹಾಗಾಗಿ ಬೆಳಗಾವಿಯಲ್ಲಿ ರಾಜಕೀಯ ಅಂಡರ್ ಕರೆಂಟ್ ಜೋರಾಗಿದೆ.
ಲೋಕಸಭೆ ಉಪಚುನಾವಣೆಗೆ ಸ್ಪರ್ಧಿಸಲು ಬಿಜೆಪಿಯಲ್ಲಿ ಸಾಲು ಹಚ್ಚಿ ನಿಂತಿದ್ದಾರೆ. ಸುಮಾರು 80ಕ್ಕೂ ಹೆಚ್ಚು ಜನರು ಕಣಕ್ಕಿಳಿಯುವ ಕನಸು ಹೊತ್ತಿದ್ದು, ಎಲ್ಲರೂ ತಮಗೇ ಟಿಕೆಟ್ ಸಿಗಲಿದೆ ಎನ್ನುವ ಲೆಕ್ಕಾಚಾರದಲ್ಲಿದ್ದಾರೆ. ಪಕ್ಷಕ್ಕೆ ಯಾವುದೇ ಕೊಡುಗೆ ನೀಡದ ಅನೇಕರು ಕೂಡ ಬಿಜೆಪಿ ತಮ್ಮನ್ನು ಹುಡಿಕಿಕೊಂಡು ಬಂದು ಟಿಕೆಟ್ ನೀಡಲಿದೆ ಎಂದು ಕನಸು ಕಾಣುತ್ತಿದ್ದಾರೆ.
ಆಟೋಮೊಬೈಲ್ ಮತ್ತು ಫೈನಾನ್ಸ್ ಎರಡೂ ವ್ಯವಹಾರದಲ್ಲಿ ತೊಡಗಿಕೊಂಡಿರುವವರೊಬ್ಬರು ಮೊನ್ನೆ ಮೊನ್ನೆಯವರೆಗೂ ಬಿಜೆಪಿಯನ್ನು, ಕೇಂದ್ರದ ನರೇಂದ್ರ ಮೋದಿ ಸರಕಾರವನ್ನು ಬಯ್ಯುತ್ತಿದ್ದವರು ಈಗ ಟಿಕೆಟ್ ಗಾಗಿ ಓಡಾಟ ಆರಂಭಿಸಿದ್ದಾರೆ. ಸ್ಥಳೀಯ ನಾಯಕರಿಗೆಲ್ಲ ಮನಬಂದಂತೆ ಮಾತನಾಡುತ್ತಿದ್ದವರು, ಸ್ಥಳೀಯ ಬಿಜೆಪಿ ನಾಯಕರಿರಲಿ ಕೊನೆಗೆ ಮನೆಯವರದ್ದೇ ಬೆಂಬಲ ಅವರಿಗೆ ಸಿಗುವುದು ಕಷ್ಟ ಎನ್ನುವಂತಿದ್ದರೂ ತಮಗೇ ಟಿಕೆಟ್ ಎಂದು ಹೇಳಿಕೊಳ್ಳುತ್ತಿದ್ದಾರೆ.
ರಾಜ್ಯಸಭೆಯ ಮಾಜಿ ಸದಸ್ಯ ಡಾ.ಪ್ರಭಾಕರ ಕೊರೆ, ಮಾಜಿ ಸಂಸದರಾದ ರಮೇಶ ಕತ್ತಿ, ಅಮರಸಿಂಹ ಪಾಟೀಲ ಸೇರಿದಂತೆ 80ಕ್ಕೂ ಹೆಚ್ಚು ಜನರು ಬೆಜೆಪಿ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ.
ಅಂಗಡಿ ಕುಟುಂಬಕ್ಕೆ ಟಿಕೆಟ್?
ಸುರೇಶ ಅಂಗಡಿ ನಿಧನರಾಗಿ ಇನ್ನೂ ವಾರಕಳೆಯುವ ಮುನ್ನವೇ ಕೆಲವರು ಮುಂದಿನ ಉಪಚುನಾವಣೆಯಲ್ಲಿ ಸುರೇಶ ಅಂಗಡಿ ಕುಟುಂಬಕ್ಕೇ ನೀಡಬೇಕೆನ್ನುವ ಒತ್ತಡ ಆರಂಭಿಸಿದ್ದಾರೆ. ಸುರೇಶ ಅಂಗಡಿಯವರ ಬೀಗರಾಗಿರುವ ಜಗದೀಶ್ ಶೆಟ್ಟರ್ ಈ ವಿಷಯದಲ್ಲಿ ಮುಂಚೂಣಿಯಲ್ಲಿ ನಿಂತಿದ್ದಾರೆ.
ಆರಂಭದಲ್ಲಿ ಅಷ್ಟು ಆಸಕ್ತಿ ತೋರದ ಅಂಗಡಿ ಕುಟುಂಬಸ್ಥರು ಈಗ ಜೋರಾಗಿ ಲಾಬಿ ನಡೆಸಿದ್ದಾರೆ.
ಸುರೇಶ ಅಂಗಡಿ ಅವರ ಪತ್ನಿ ಮಂಗಲಾ ಅಂಗಡಿ, ಪುತ್ರಿಯರಾದ ಸ್ಪೂರ್ತಿ ಮತ್ತು ಶೃದ್ಧಾ ಇವರಲ್ಲೊಬ್ಬರಿಗೆ ಟಿಕೆಟ್ ನೀಡಬೇಕು ಎನ್ನುವ ಕೋರಿಕೆಯನ್ನು ಇಡಲಾಗಿದೆ. ಜಗದೀಶ್ ಶೆಟ್ಟರ್ ಅವರು ಅಂಗಡಿಯವರ ಪುತ್ರಿಯಾಗಿರುವ ತಮ್ಮ ಸೊಸೆ ಶೃದ್ಧಾ ಅವರಗೇ ಟಿಕೆಟ್ ಕೊಡಿಸಬೇಕೆನ್ನುವ ಪ್ರಯತ್ನವನ್ನು ತೀವ್ರಗೊಳಿಸಿದ್ದಾರೆ.
ಈ ಕಾರಣಕ್ಕಾಗಿಯೇ ಮೊನ್ನೆ ಬೆಳಗಾವಿಯಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಸುರೇಶ ಅಂಗಡಿ ಅವರ ಪುತ್ರಿ, ಜಗದೀಶ್ ಶೆಟ್ಟರ್ ಸೊಸೆ ಶೃದ್ಧಾ ಕಾಣಿಸಿಕೊಂಡರು. ಅವರೇ ರಾಜಕೀಯಕ್ಕೆ ಬರಲು ಆಸಕ್ತಿ ತೋರಿಸಿದ್ದಾರೋ, ಪಕ್ಷದ ಸೂಚನೆಯೇನಾದರೂ ಇದೆಯೋ ಎನ್ನುವುದು ಗೊತ್ತಾಗಿಲ್ಲ.
ಕೇಂದ್ರದ ಮಾಜಿ ಸಚಿವ ಅನಂತಕುಮಾರ ನಿಧನರಾದ ಬಳಿಕ ಅವರ ಪತ್ನಿಗೆ ಟಿಕೆಟ್ ನಿರಾಕರಿಸಿದ್ದ ಬಿಜೆಪಿ ಈಗ ಸುರೇಶ ಅಂಗಡಿ ಕುಟುಂಬಕ್ಕೆ ಟಿಕೆಟ್ ನೀಡಲಿದೆಯೇ? ಅನುಮಾನ. ಅನಂತಕುಮಾರ ಪತ್ನಿ ತೇಜಸ್ವಿನಿ ಅದಾಗಲೇ ಸಕ್ರೀಯ ರಾಜಕಾರಣ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರೂ ಅವರಿಗೆ ಟಿಕೆಟ್ ಸಿಗಲಿಲ್ಲ. ಇನ್ನು ಅಂಗಡಿ ಕುಟುಂಬ ಯಾವಲೆಕ್ಕ ಎನ್ನುವ ಪ್ರಶ್ನೆಯೂ ಕೇಳಿಬರುತ್ತದೆ.
ಹುಬ್ಬಳ್ಳಿ ಸೊಸೆಗೆ ಬೆಳಗಾವಿ ಟಿಕೆಟ್?
ಸುರೇಶ ಅಂಗಡಿ ಪರ ಒಂದೆರಡು ಸಂಘಟನಾತ್ಮಕ ಸಭೆಗಳಲ್ಲಿ ಪಾಲ್ಗೊಂಡಿದ್ದನ್ನು ಬಿಟ್ಟರೆ ಅವರ ಪತ್ರಿ ಮಂಗಲಾ ಅಂಗಡಿ ರಾಜಕೀಯದಲ್ಲಿ ಮೂಗು ತೂರಿಸಿರಲಿಲ್ಲ. ಹಿರಿಯ ಮಗಳು ಸ್ಪೂರ್ತಿ ಅಂಗಡಿ ಶಿಕ್ಷಣ ಸಂಸ್ಥೆಯ ಆಡಳಿತ ನೋಡಿಕೊಳ್ಳುತ್ತಿದ್ದಾರೆ. ಎರಡನೇ ಪುತ್ರಿ ಶೃದ್ಧಾ ಹುಬ್ಬಳ್ಳಿ ಸೊಸೆಯಾಗಿ ಹೋಗಿದ್ದಾರೆ.
ಈಗ ಶೃದ್ಧಾ ಅವರನ್ನು ಬಿಜೆಪಿ ಕಾರ್ಯಕ್ರಮಕ್ಕೆ ಕಳಿಸಿದ್ದು ಅವರ ಪರವಾಗಿ ಲಾಬಿಯೊಂದು ನಡೆಯುತ್ತಿರುವ ಮಾಹಿತಿ ನೀಡಿದೆ. ರಾಜಕೀಯ ಅನುಭವ ಇಲ್ಲದಿದ್ದರೂ ಟಿಕೆಟ್ ಕೊಟ್ಟರೆ ಕಣಕ್ಕಿಳಿಯಬಲ್ಲೆ ಎನ್ನುವ ವಿಶ್ವಾಸ ಅವರ ಮುಖದಲ್ಲಿ ಕಾಣಿಸಿದೆ.
ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಆರಂಭದಲ್ಲಿ ಸುರೇಶ ಅಂಗಡಿ ಕುಟುಂಬಕ್ಕೇ ಟಿಕೆಟ್ ನೀಡುವುದಾಗಿ ಹೇಳಿ ಈಗ ಒಂದು ಹೆಜ್ಜೆ ಹಿಂದೆ ಇಟ್ಟಿದ್ದಾರೆ.
ಸುರೇಶ ಅಂಗಡಿ ಕುಟುಂಬಕ್ಕೆ ಟಿಕೆಟ್ ನೀಡಲಿ ಎಂದು ಆರಂಭದಲ್ಲಿ ಮೇಲಿಂದ ಮೇಲೆ ಹೇಳುತ್ತಿದ್ದವರೆಲ್ಲ ಈಗ ಪಕ್ಷಕ್ಕೆ ಕುಟುಂಬದ ಕೊಡುಗೆ ಏನಿದೆ? ಅವರ ಕುಟುಂಬಕ್ಕೇ ಕೊಟ್ಟರೆ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರ ಗತಿ ಏನು ಎಂದು ಪ್ರಶ್ನಿಸುತ್ತಿದ್ದಾರೆ.
ಸಾಮರ್ಥ್ಯವಿರುವ ವ್ಯಕ್ತಿಯೊಬ್ಬರಿಗೆ ಟಿಕೆಟ್ ನೀಡಬೇಕೆನ್ನುವ ಆಗ್ರಹ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿದೆ.
ಒಟ್ಟಾರೆ ಬಿಜೆಪಿ ಟಿಕೆಟ್ ಲಾಬಿ ಜೋರಾಗಿದ್ದು, ದೆಹಲಿಯ ನಾಯಕರ ಆಶಿರ್ವಾದ ಯಾರ ಮೇಲಿರಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
ಸುರೇಶ ಅಂಗಡಿ ಪುತ್ರಿ, ಹುಬ್ಬಳ್ಳಿ ಸೊಸೆ ಬೆಳಗಾವಿ ಪಾಲಿಟಿಕ್ಸ್ ಗೆ ಎಂಟ್ರಿ – ವೀಡಿಯೋ ಸಹಿತ ವರದಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ