ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ನಂತರ ಮೊದಲ ಬಾರಿಗೆ ಸುರೇಶ ಕುಮಾರ ಬೆಳಗಾವಿಗೆ ಆಗಮಿಸುತ್ತಿದ್ದಾರೆ. ಬುಧವಾರ ಬೆಳಗ್ಗೆ 9.30ಕ್ಕೆ ಆಗಮಿಸುವ ಅವರು ಪ್ರವಾಹದಿದ ಹಾನಿಗೊಳಗಾದ ಶಾಲೆಗಳ ವೀಕ್ಷಣೆ ನಡೆಸಲಿದ್ದಾರೆ.
ರಾಜ್ಯದಲ್ಲಿ ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಉಂಟಾಗಿರುವ ಪ್ರವಾಹದಿಂದಾಗಿ ಸಾವಿರಾರು ಶಾಲೆಗಳು ಅಪಾಯದ ಸ್ಥಿತಿಯಲ್ಲಿವೆ. ಹಲವು ಶಾಲೆಗಳು ನೆಲಕ್ಕುರುಳಿದರೆ, ಇನ್ನು ಹಲವು ಆಗಲೋ ಈಗಲೋ ಬೀಳುವ ಸ್ಥಿತಿಯಲ್ಲಿವೆ. ಶಿಥಿಲ ಶಾಲೆಗಳು ಮಕ್ಕಳ ಜೀವಕ್ಕೆ ಮಾರಕವಾಗಿರುವುದರಿಂದ ಅವುಗಳನ್ನು ತೆರವುಗೊಳಿಸಬೇಕೆನ್ನುವ ಅಭಿಪ್ರಾಯ ಕೇಳಿಬಂದಿದೆ.
ಬೆಳಗಾವಿ ನಗರ, ಬೆಳಗಾವಿ ಗ್ರಾಮೀಣ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಶಾಲೆಗಳನ್ನು ಸುರೇಶ ಕುಮಾರ ಪರಿಶೀಲನೆ ನಡೆಸಲಿದ್ದಾರೆ. 9.30ಕ್ಕೆ ಟಿಳಕವಾಡಿಯ ಗಜಾನನ ಮಹಾರಾಜ ನಗರದಲ್ಲಿರುವ ಸರಕಾರಿ ಕನ್ನಡ ಪ್ರಥಾಮಿಕ ಶಾಲೆ ಕಟ್ಟಡ ಪರಿಶೀಲಿಸುವರು.
ನಂತರ ಗಾಂಧಿನಗರದಲ್ಲಿರುವ ಸರಕಾರಿ ಉರ್ದು ಪ್ರಾಥಮಿಕ ಶಾಲಾ ಕಟ್ಟಡ ಪರಿಶೀಲಿಸುವರು. ಅಲ್ಲಿಂದ ಬಸವನಕುಡಚಿಗೆ ತೆರಳಿ ಅಲ್ಲಿನ ಕನ್ನಡ ಹಾಗೂ ಮರಾಠಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ ಪರಿಶೀಲನೆ ನಡೆಸುವರು.
ನಂತರ 11.40ಕ್ಕೆ ಗೋಜಗಾ ಗ್ರಾಮಕ್ಕೆ ತೆರಳಿ ಕನ್ನಡ ಮತ್ತು ಮರಾಠಿ ಪ್ರಾಥಮಿಕ ಶಾಲೆಗಳ ಕಟ್ಟಡ ಪರಿಶೀಲಿಸುವರು. ನಂತರ ಹೊಸವಂಟಮರಿ ಶಾಲೆಯನ್ನು ಪರಿಶೀಲಿಸಿ ಚಿಕ್ಕೋಡಿಗೆ ತೆರಳುವರು.
2.30ಕ್ಕೆ ಜುಗೂಳ ಹಾಗೂ 4.40ಕ್ಕೆ ನದಿ ಇಂಗಳಗಾಂವ್ ಶಾಲಾ ಕಟ್ಟಡಗಳನ್ನು ಸುರೇಶ ಕುಮಾರ ಪರಿಶೀಲನೆ ನಡೆಸುವರು. ನಂತರ ತೀರ್ಥ ಶಾಲೆ ಪರಿಶೀಲನೆ ನಡೆಸಿ ಬಾಗಲಕೋಟೆಗೆ ತೆರಳುವರು.
ಶಾಲೆಗಳ ಸ್ಥಿತಿಗತಿ ಕುರಿತು ಸರಕಾರಕ್ಕೆ ಈಗಾಗಲೆ ವರದಿ ಸಲ್ಲಿಕೆಯಾಗಿದೆ. ಸುರೇಶ ಕುಮಾರ ಪರಿಶೀಲನೆ ನಂತರ ಸರಕಾರ ಯಾವರೀತಿಯ ಕ್ರಮ ಕೈಗೊಳ್ಳಲಿದೆ ಕಾದು ನೋಡಬೇಕಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ