ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಅನೇಕರಲ್ಲಿ 14 ದಿನಗಳ ಕ್ವಾರಂಟೈನ್ ಅವಧಿ ಮುಗಿದ ನಂತರ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದೆ. ಹಾಗಾಗಿ ಕ್ವಾರಂಟೈನ್ ಸಮಯವನ್ನು ಇನ್ನು ಮುಂದೆ 28 ದಿನಗಳಿಗೆ ವಿಸ್ತರಿಸಲಾಗುವುದು ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುರೇಶ್ ಕುಮಾರ್, ಕ್ವಾರಂಟೈನ್ಗೆ 14 ದಿನಗಳು ಸಾಲುತ್ತಿಲ್ಲ. ಆದ್ದರಿಂದ ಕ್ವಾರಂಟೈನ್ ಅವಧಿಯನ್ನು ದುಪ್ಪಟ್ಟು ಮಾಡಲಾಗಿದೆ ಎಂದರು.
ಇನ್ನು ತಬ್ಲಿಘಿ ಜಮಾತ್ ನಲ್ಲಿ ಭಾಗಿಯಾದ 1330 ಮಂದಿ ಪತ್ತೆ ಮಾಡಿ, ಪರೀಕ್ಷೆಗೆ ಒಳಪಡಿಸಲಾಗಿದೆ. ಇವರಲ್ಲಿ 40 ಪಾಸಿಟಿವ್ ಪ್ರಕರಣ ವರದಿ ಆಗಿದೆ. 1255 ಜನರ ವರದಿ ನೆಗೆಟಿವ್ ಬಂದಿದೆ. ಈ ಸಂಖ್ಯೆ ಇನ್ನೂ ಹೆಚ್ಚಾಗಲಿದೆ. ಯಾಕಂದರೆ ಸಾಕಷ್ಟು ಮಂದಿ ಮಾಹಿತಿ ಕೊಟ್ಟಿಲ್ಲ. ನಾವು ಅಂದುಕೊಂಡದ್ದಕ್ಕಿಂತ ಹೆಚ್ಚು ಜನರು ಹೋಗಿ ಬಂದಿರುವ ಮಾಹಿತಿ ಸಿಗುತ್ತಿದೆ. ಅವರನ್ನು ಹುಡುಕಿ, ಪರೀಕ್ಷೆಗೆ ಒಳಪಡಿಸುವ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು.
ಇಂದು ರಾಜ್ಯದಲ್ಲಿ 15 ಹೊಸಾ ಪ್ರಕರಣ ಪತ್ತೆಯಾಗಿದ್ದು, ಈವರೆಗೆ ರಾಜ್ಯದಲ್ಲಿ 247 ಪ್ರಕರಣಗಳು ದಾಖಲಾಗಿವೆ. 15 ಹೊಸ ಪ್ರಕರಣದಲ್ಲಿ ಓರ್ವನನ್ನು ಹೊರತುಪಡಿಸಿ ಉಳಿದ ಎಲ್ಲರೂ ದೆಹಲಿ ಧಾರ್ಮಿಕ ಸಭೆ ನಂಟು ಹೊಂದಿದವರಾಗಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ