ಪ್ರಗತಿವಾಹಿನಿ ಸುದ್ದಿ, ನವದೆಹಲಿ:
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲು ರಾಹುಲ ಗಾಂಧಿ ನಿರಾಕರಿಸಿರುವುದರಿಂದ ಬದಲಾವಣೆ ಅನಿವಾರ್ಯ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.
ಈ ಹಿನ್ನೆಲೆಯಲ್ಲಿ ಹಲವರನ್ನು ಹುದ್ದೆಗೆ ಯೋಚಿಸಿದರೂ ಒಮ್ಮತ ಮೂಡುತ್ತಿಲ್ಲ. ಅಂತಿಮವಾಗಿ 68 ವರ್ಷ ವಯಸ್ಸಿನ ಗೆಹ್ಲೋಟ್ ಅವರನ್ನು ಅಧ್ಯಕ್ಷ ಸ್ಥಾನದಲ್ಲಿ ಕೂಡ್ರಿಸುವ ಸಾಧ್ಯತೆ ಇದೆ.
ರಾಹುಲ್ ಅವರಿಗೆ ಗೆಹ್ಲೋಟ್ ಮೇಲೆ ಮುನಿಸು ಇದ್ದರೂ, ಸಂಘಟನೆ ವಿಚಾರದಲ್ಲಿ ಗೆಹ್ಲೋಟ್ ಅನುಭವ ಹೊಂದಿರುವುದರಿಂದ ಸಧ್ಯದ ಕಾಂಗ್ರೆಸ್ ಪರಿಸ್ಥಿತಿಗೆ ಅವರೇ ಅನಿವಾರ್ಯ ಎಂದು ಭಾವಿಸಲಾಗಿದೆ.
ರಾಹುಲ್ ಎಐಸಿಸಿ ಅಧ್ಯಕ್ಷರಾದ ಬಳಿಕ ಗೆಹ್ಲೋಟ್ ಅವರಿಗೆ ಎಐಸ್ಸಿಸಿ ಕಾರ್ಯದರ್ಶಿ ಸ್ಥಾನ ನೀಡಿದ್ದರು. ಗುಜರಾತ್ ವಿಧಾನಸಭೆ ಚುನಾವಣೆ ಉಸ್ತುವಾರಿಯನ್ನು ನೀಡಲಾಗಿತ್ತು.
ಐದು ಬಾರಿ ಸಂಸದ, ಮೂರು ಬಾರಿ ಕ್ಯಾಬಿನೆಟ್ ಸಚಿವ, ಮೂರು ಬಾರಿ ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ, ಮೂರು ಬಾರಿ ಸಿಎಂ ಆಗಿ ಅನುಭವ ಹೊಂದಿದ್ದು, ಗಾಂಧಿ ಮನೆತನಕ್ಕೆ ನಿಷ್ಠರಾಗಿದ್ದಾರೆ.