ಸಸ್ಪೆನ್ಸ್… ಎಲ್ಲರ ದೃಷ್ಟಿ ಅಮಿತ್ ಶಾ ಕಡೆಗೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ-
ರಾಜ್ಯ ರಾಜಕೀಯ ಇಂದು ಮತ್ತೊಂದು ಮಹತ್ವದ ಬೆಳವಣಿಗೆಗೆ ಸಾಕ್ಷಿಯಾಗುವ ಸಾಧ್ಯತೆ ಇದೆ. ಮಂಗಳವಾರ ವಿಸ್ತರಣೆಯಾಗಲಿರುವ ರಾಜ್ಯ ಸಂಪುಟದ ಅಂತಿಮ ಪಟ್ಟಿ ಇಂದು ಸಂಜೆಯ ಹೊತ್ತಿಗೆ ರಿಲೀಸ್ ಆಗಬಹುದು. ಬಿಜೆಪಿ ರಾಷ್ಟ್ರೀಯ ಅಧ್ಯರೂ ಆಗಿರುವ ಅಮಿತ್ ಶಾ ಪಟ್ಟಿ ಅಂತಿಮಗೊಳಿಸಿ ರವಾನಿಸಲಿದ್ದಾರೆ.
ಈಗಿನ ಮಾಹಿತಿ ಪ್ರಕಾರ ಮೊದಲ ಹಂತದಲ್ಲಿ 14 ಅಥವಾ 15 ಜನರನ್ನು ಮಾತ್ರ ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತದೆ. ಇವರ ಆಯ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೀಡಿರುವ ಪಟ್ಟಿ ಆಧರಿಸಿ ಇರುತ್ತದೆ. ಯಡಿಯೂರಪ್ಪ ನೀಡಿರುವ ಪಟ್ಟಿಯಲ್ಲಿ ಸಹಜವಾಗಿ ಸಂತೋಷ್ ಕೆಲವು ಮಾರ್ಪಾಡು ಮಾಡಿರುತ್ತಾರೆ. ಅಂತಿಮವಾಗಿ ಪಕ್ಷದ ಕ್ಲೀನ್ ಇಮೇಜ್ ದೃಷ್ಟಿಯಲ್ಲಿಟ್ಟುಕೊಂಡು ಅಮಿತ್ ಶಾ ಆಯ್ಕೆ ಮಾಡುತ್ತಾರೆ.
ಒಂದು ಮೂಲದ ಪ್ರಕಾರ ಯಡಿಯೂರಪ್ಪ ಎಲ್ಲ 105 ಶಾಸಕರ ಪಟ್ಟಿಯನ್ನೂ ತರಿಸಿಕೊಂಡು ತಮ್ಮದೇ ಮೂಲಗಳಿಂದ ಅವರ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಹಾಗಾಗಿ ಅಂತಿಮ ಪಟ್ಟಿ ಹೊರಗೆ ಬಂದಾಗ ಯಡಿಯೂರಪನವರಿಗೂ ಆಶ್ಚರ್ಯ ಕಾದಿರಬಹುದು.
ಮುಲಾಜಿಲ್ಲದ ಸಂಪುಟ
ಈ ಬಾರಿ ಕೇಂದ್ರದ ಸಚಿವಸಂಪುಟ ರಚಿಸುವಾಗ ಜಾತಿಗೆ ಹೆಚ್ಚಿನ ಆದ್ಯತೆ ನೀಡಿರಲಿಲ್ಲ. ಯಾವ ತಕರಾರಿಗೂ ಮಣೆ ಹಾಕಿರಲಿಲ್ಲ. ಹಲವಾರು ಹಿರಿಯ ನಾಯಕರನ್ನೂ ಮುಲಾಜಿಲ್ಲದೆ ಸಂಪುಟದಿಂದ ಹೊರಗಿಡಲಾಗಿದೆ. ಯಾರೂ ಸೊಲ್ಲೆತ್ತದಂತೆ ನೋಡಿಕೊಳ್ಳಲಾಗಿದೆ.
ಅದೇ ಮಾದರಿಯಲ್ಲಿ ರಾಜ್ಯ ಸಂಪುಟವನ್ನೂ ರಚಿಸಲು ಅಮಿತ್ ಶಾ ಮುಂದಾಗಲಿದ್ದಾರೆ. ಯಡಿಯೂರಪ್ಪ ಸರಕಾರ ಪೂರ್ಣಾವಧಿ ನಡೆಯುತ್ತದೆ ಎನ್ನುವ ವಿಶ್ವಾಸ ಬಿಜೆಪಿ ಹೈಕಮಾಂಡ್ ಗೂ ಇದ್ದಂತಿಲ್ಲ. ಹಾಗಾಗಿ ಯಾವುದೇ ಕ್ಷಣದಲ್ಲಿ ಮಧ್ಯಂತರ ಚುನಾವಣೆ ಎದುರಾದರೂ ಬಿಜೆಪಿ ಸ್ಪಷ್ಟ ಬಹುಮತದಿಂದ ಗೆದ್ದು ಬರುವ ದೃಷ್ಟಿ ಇಟ್ಟುಕೊಂಡು ಸಚಿವ ಸಂಪುಟ ರಚನೆ ಮತ್ತು ಬಿಜೆಪಿ ಸರಕಾರದ ಕಾರ್ಯರವೈಖರಿ ಇರಬೇಕೆನ್ನುವುದು ಹೈಕಮಾಂಡ್ ಯೋಚನೆ.
ಈ ಬಾರಿಯ ಯಡಿಯೂರಪ್ಪ ಸಂಪುಟ ಎಲ್ಲ ಸಾಂಪ್ರದಾಯಿಕ ಪದ್ಧತಿಗಳನ್ನು ಮೀರಿ ರಚನೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇವರು ಹಿರಿಯ ನಾಯಕರು, ಇವರು ಮಾಜಿ ಸಚಿವರು, ಇವರು ಆ ಜಾತಿಯವರು, ಇವರನ್ನು ಬಿಟ್ಟರೆ ಪಕ್ಷಕ್ಕೆ ತೊಂದರೆಯಾಗಬಹುದು ಎನ್ನುವ ಎಲ್ಲ ಯೋಚನೆಗಳನ್ನೂ ಬದಿಗಿಟ್ಟು ದಿಟ್ಟ ನಿರ್ಧಾರ ಹೊರಬೀಳಲಿದೆ ಎಂದು ಹೇಳಲಾಗುತ್ತಿದೆ.
ಕ್ಲೀನ್ ಇಮೇಜ್
ಪಕ್ಷ ನಿಷ್ಠೆ ಮತ್ತು ಪಕ್ಷದ ಕ್ಲೀನ್ ಇಮೇಜ್ ದೃಷ್ಟಿಯಲ್ಲಿಟ್ಟುಕೊಂಡು, ಕ್ರಿಯಾಶೀಲತೆ ಹಾಗೂ ಸಂಘಪರಿವಾರ ಮೂಲದಿಂದ ಬಂದವರಿಗೆ ಹೆಚ್ಚಿನ ಆದ್ಯತೆ ಸಿಗುವ ಸಾಧ್ಯತೆ ಇದೆ. ಹಾಗಾಗಿ ಜಿಲ್ಲಾವಾರು ಪ್ರಾತಿನಿಧ್ಯವನ್ನೂ ಮೊದಲ ಪಟ್ಟಿಯಲ್ಲಿ ನಿರೀಕ್ಷಿಸುವುದು ಕಷ್ಟ ಎನ್ನಲಾಗುತ್ತಿದೆ.
ಒಟ್ಟಾರೆ ಹೇಳುವುದಾದರೆ, ಹೆಸರಿಗೆ ಯಡಿಯೂರಪ್ಪ ಮುಖ್ಯಮಂತ್ರಿಯಾದರೂ ಬಿಜೆಪಿ ಹೈಕಮಾಂಡೇ ಎಲ್ಲವನ್ನೂ ಸಂಪೂರ್ಣವಾಗಿ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಸಾಧ್ಯತೆ ನಿಚ್ಛಳವಾಗಿದೆ. ಯಡಿಯೂರಪ್ಪ ಲೆಕ್ಕಾಚಾರವೇ ಒಂದಾದರೆ ಅಮಿತ್ ಶಾ ಲೆಕ್ಕಾಚಾರವೇ ಒಂದು ಎಂದು ಹೇಳಲಾಗುತ್ತಿದೆ.
ಈ ಬಾರಿಯ ವಿಶೇಷವೆಂದರೆ, ಸಂಜೆ ಸಚಿವಸಂಪುಟ ವಿಸ್ತರಣೆ, ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದ್ದರೆ, ಬೆಳಗ್ಗೆ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ಈ ಸಭೆಗೆ ಬಿಜೆಪಿ ಹೈಕಮಾಂಡ್ ಪ್ರತಿನಿಧಿ ಬಂದು ನೂತನವಾಗಿ ರಚನೆಯಾಗಲಿರುವ ಸಂಪುಟದ ವಿವರ ನೀಡಿ, ಯಾರೂ ಅಸಮಾಧಾನಗೊಳ್ಳದಂತೆ ಕನ್ವಿನ್ಸ್ ಮಾಡುವ ಸಾಧ್ಯತೆ ಇದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ ಎನ್ನುವ ಸಂದೇಶ ನೀಡುವ ನಿರೀಕ್ಷೆ ಇದೆ.
ಈ ಎಲ್ಲ ಬೆಳವಣಿಗೆ ಗಮನಿಸಿದರೆ ಇಂದು ಸಂಜೆಯಹೊತ್ತಿಗೆ ಪಟ್ಟಿ ಬಿಡುಗಡೆಯಾಗುತ್ತದೆಯೋ… ಅಂತಿಮ ಕ್ಷಣದವರೆಗೂ ಸಸ್ಪೆನ್ಸ್ ಆಗಿರುತ್ತದೆಯೋ ಹೇಳಲಾಗದು. ಒಟ್ಟಾರೆ ಈ ಬಾರಿಯ ಕರ್ನಾಟಕ ಸಚಿವ ಸಂಪುಟ ಯಾರ್ಯಾರಿಗೆ ಶಾಕ್ ನೀಡುತ್ತದೆ ಕಾದು ನೋಡಬೇಕಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ