ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಭಾರೀ ಕುತೂಹಲ ಮೂಡಿಸಿದ್ದ ಬೆಳಗಾವಿ ಸಬ್ ರಜಿಸ್ಟ್ರಾರ್ ವಿಷ್ಣುತೀರ್ಥ ಅಮಾನತು ಪ್ರಕರಣ ಇದೀಗ ಹೊಸ ತಿರುವು ಪಡೆದಿದೆ.
ವಿಷ್ಣುತೀರ್ಥ ವಿರುದ್ಧ ಮಾಡಲಾಗಿರುವ ಆರೋಪಗಳನ್ನು ಅಮಾನ್ಯಗೊಳಿಸಿರುವ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ ಅವರ ಅಮಾನತನ್ನು ರದ್ಧುಪಡಿಸಿದೆ. ಜೊತೆಗೆ ಬೆಳಗಾವಿಯಲ್ಲೇ ಪುನಃ ಅಧಿಕಾರ ಮುಂದುವರಿಸುವಂತೆ ಸೂಚಿಸಿದೆ.
ಆಸ್ತಿ ನೊಂದಣಿ ವೇಳೆ ದರವನ್ನು ಅಪಮೌಲ್ಯಗೊಳಿಸಿ ನೊಂದಣಿ ಮಾಡಲಾಗಿದೆ. ಇದರಿಂದ ಸರಕಾರಕ್ಕೆ 12.99 ಕೋಟಿ ರೂ ರಾಜಸ್ವ ನಷ್ಟವಾಗಿದೆ ಎಂದು ಆರೋಪಿಸಿ ಬೆಳಗಾವಿ ಸಬ್ ರಜಿಸ್ಟ್ರಾರ್ ವಿಷ್ಣುತೀರ್ಥ ಅವರನ್ನು ಮಾರ್ಚ್ 24ರಂದು ಅಮಾನತುಗೊಳಿಸಲಾಗಿತ್ತು
2015-18 ಅವಧಿಯಲ್ಲಿ ಒಟ್ಟೂ 9 ದಸ್ತಾವೇಜುಗಳಿಂದ 1299.12 ಲಕ್ಷ ರೂ. ನಷ್ಟವಾಗಿದೆ ಎಂದು ಆರೋಪಿಸಲಾಗಿದೆ. ಮುದ್ರಾಂಕ ಶುಲ್ಕ 12,78,79,056 ಹಾಗೂ ನೊಂದಣಿ ಶುಲ್ಕ 12,91,707 ರೂ. ಕಡಿಮೆ ಆಕರಿಸಲಾಗಿತ್ತು. ಈ ಬಗ್ಗೆ ವಿಷ್ಣುತೀರ್ಥ ಅವರಿಗೆ ನೋಟೀಸ್ ಜಾರಿಗೊಳಿಸಲಾಗಿತ್ತು.
2015-16ರಲ್ಲಿ ಬೆಳಗಾವಿ ನಗರದಲ್ಲಿ ಕೃಷಿ ಜಮೀನಿನ ಮೌಲ್ಯ 26.84 ಲಕ್ಷ ರೂ. ಇತ್ತು. ವಾಣಿಜ್ಯ ಉದ್ದೇಶಕ್ಕಾಗಿ ಇದನ್ನು ಶೇ.75ರಷ್ಟು ಹೆಚ್ಚಿಸಿ 46.97 ಲಕ್ಷ ರೂ. ಮಾಡಿ 12,58,80,000 ರೂ. ಆಗುತ್ತದೆ. ಆದಾಗ್ಯೂ 77 ಕೋಟಿ ರೂ.ಗಳಿಗೆ ನೊಂದಣಿ ಮಾಡಲಾಗಿದೆ. ಎಲ್ಲವನ್ನೂ ನಿಯಮಾವಳಿ ಪ್ರಕಾರವೇ ಮಾಡಲಾಗಿದೆ ಎಂದು ವಿಷ್ಣುತೀರ್ಥ ಸಮಜಾಯಿಸಿ ನೀಡಿದ್ದರು.
ಆದರೆ ಇದನ್ನು ಒಪ್ಪಲು ಸಾಧ್ಯವಿಲ್ಲ. ಈ ದಸ್ತಾವೇಜಿನಿಂದ ಸರಕಾರಕ್ಕೆ 12.99 ಕೋಟಿ ರೂ. ರಾಜಸ್ವ ನಷ್ಟವಾಗಿದೆ ಎಂದು ಆರೋಪಿಸಿ , ವಿಚಾರಣೆಯನ್ನು ಕಾಯ್ದಿಟ್ಟು ಅವರನ್ನು ಅಮಾನತು ಮಾಡಲಾಗಿತ್ತು
ಎಲ್ಲವನ್ನೂ ನಿಯಮಾವಳಿ ಪ್ರಕಾರವೇ ಮಾಡಲಾಗಿದೆ. ಇದರಲ್ಲಿ ಸ್ವಲ್ಪವೂ ನಿಯಮಾವಳಿ ಉಲ್ಲಂಘನೆಯಾಗಿಲ್ಲ. ಆದರೆ ಸ್ಥಳ ಪರಿಶೀಲಿಸದೆ ಅಮಾನತು ಆದೇಶ ಹೊರಡಿಸಲಾಗಿದೆ ಎಂದು ವಿಷ್ಣುತೀರ್ಥ ಪ್ರತಿಕ್ರಿಯಿಸಿದ್ದರು. ಜೊತೆಗೆ ಆದೇಶ ಪ್ರಶ್ನಿಸಿ ಕೆಎಟಿ ಮೆಟ್ಟಿಲೇರಿದ್ದರು.
ಕೆಎಟಿ ವಿಚಾರಣೆ ನಡೆಸಿ ಅವರ ಅಮಾನತನ್ನು ರದ್ದುಪಡಿಸಿದೆ. ವಿಷ್ಣುತೀರ್ಥ ಪ್ರಗತಿವಾಹಿನಿಗೆ ಈ ವಿಷಯ ತಿಳಿಸಿದ್ದು, ಲಾಕ್ ಡೌನ್ ನಂತರ ಬೆಳಗಾವಿಯಲ್ಲಿ ಅಧಿಕಾರ ಸ್ವೀಕರಿಸುವುದಾಗಿ ತಿಳಿಸಿದ್ದಾರೆ.
ರಾಜಸ್ವ ನಷ್ಟ ಆರೋಪ: ಬೆಳಗಾವಿ ಸಬ್ ರಜಿಸ್ಟ್ರಾರ್ ಅಮಾನತು
ಬೆಳಗಾವಿಯಲ್ಲಿ ಮತ್ತೆ 2 ದಿನ ಸಂಪೂರ್ಣ ಲಾಕ್ ಡೌನ್: ಡಿಸಿ ಆದೇಶ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ